ಶಿವಮೊಗ್ಗ: ತುಂಗೆಯ ನೀರನ್ನು ಭದ್ರೆಗೆ ಹರಿಸುವ ಮಹತ್ವದ ಯೋಜನೆ ವಿಳಂಬವಾಗುತ್ತಿದ್ದು, ಶೀಘ್ರವೇ ಅದನ್ನು ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಆಗ್ರಹಿಸಿದ್ದಾರೆ. ಬರಗಾಲ ಸೀಮೆ ಚಿತ್ರದುರ್ಗಕ್ಕೆ ನೀರು ಹರಿಸುವ ಯೋಜನೆಯನ್ನು ನಾವು ಸ್ವಾಗತಿಸುತ್ತೇವೆ. ಭದ್ರಾ ಜಲಾಶಯದಿಂದ 21.5 ಟಿಎಂಸಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಬಿಡಬೇಕಾಗಿದೆ. ಈ ಯೋಜನೆ ಪ್ರಕಾರ ತುಂಗಾ ಜಲಾಶಯದಿಂದ 17.5, ಭದ್ರಾ ಜಲಾಶಯದಿಂದ 6.5 ನೀರು ಬಿಡಲು ತೀರ್ಮಾನಿಸಲಾಗಿತ್ತು. ಆದರೆ, ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಯುತ್ತಿಲ್ಲ. ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ಸುಮಾರು 11 ಕಿ.ಮೀ. ಮೂಲಕ ಕೆಲವು ಕಡೆ ಸುರಂಗಗಳ ನಿರ್ಮಿಸಿ ಭದ್ರಾ ಜಲಾಶಯಕ್ಕೆ ನೀರು ಬಿಡಬೇಕಾಗಿತ್ತು. ಆದರೆ ಈ ಸೂಚನೆಗಳು ಯಾವು ಕಾಣುತ್ತಿಲ್ಲ. ಸುರಂಗಗಳನ್ನು ತೆಗೆಯಲು ಟೆಂಡರ್ ಕೂಡ ಕರೆಯಲಾಗಿಲ್ಲ. ಎರಡೂ ಕಡೆ ನೀರನ್ನು ಲಿಫ್ಟ್ ಮಾಡುವ ಯೋಜನೆ ಇದರಲ್ಲಿಯೇ ಸೇರಿದೆ. ಆ ಕೆಲಸ ಕೂಡ ಆಗಿಲ್ಲ. ಬಹುಶಃ ಇದು ಇನ್ನೂ 2-3 ವರ್ಷ ವಿಳಂಬವಾಗಬಹುದು ಎಂದು ರೈತ ಮುಖಂಡ ಗಂಗಾಧರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ಈಗಾಗಲೇ ನೀರು ಹರಿಯುತ್ತಿದೆ. ತುಂಗೆಯ ನೀರು ಇಲ್ಲದೇ ದುರ್ಗಕ್ಕೆ ನೀರು ಬಿಡುತ್ತಿರುವುದರಿಂದ ಭದ್ರಾ ಜಲಾಶಯದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಿರುವ ಭದ್ರಾ ಜಲಾಶಯದ ನೀರಿನ ಪ್ರಮಾಣ ಮತ್ತು ಅಂಕಿ ಅಂಶ ಗಮನಿಸಿದರೆ, ಸುಮಾರು 5 ಜಿಲ್ಲೆಗೆ ಸರಬರಾಜು ಆಗುತ್ತಿರುವ ಭದ್ರಾ ನೀರು ಕೊರತೆಯಾಗುವ ಎಲ್ಲ ಲಕ್ಷಣಗಳು ಇವೆ. ಹೀಗಾಗಿ ತುಂಗಾ ಜಲಾಶಯದಿಂದ ಶೀಘ್ರವೇ ಭದ್ರಾ ಜಲಾಶಯಕ್ಕೆ ನೀರು ಹರಿಸಬೇಕು. ಇದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಏಕೆಂದರೆ ತುಂಗಾ ನದಿಯಿಂದ ಪ್ರತಿ ಬಾರಿಯೂ ಮಳೆಗಾಲದಲ್ಲಿ ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥವಾಗುತ್ತಿದೆ ಮತ್ತು ಈ ನೀರು ಭದ್ರಾ ಜಲಾಶಯಕ್ಕೆ ಪೂರೈಸದಿದ್ದರೆ ಇಡೀ ಯೋಜನೆಯೇ ವಿಫಲವಾಗುತ್ತದೆ. ಹೇಗೂ ನಾಳೆ ಬುಧವಾರ ಮುಖ್ಯಮಂತ್ರಿಗಳು ಭದ್ರೆಗೆ ಬಾಗಿನ ಅರ್ಪಿಸಲು ಬರುತ್ತಿದ್ದಾರೆ. ಅವರು ಈ ವಿಷಯವನ್ನು ಗಮನಿಸಬೇಕು ಮತ್ತು ಈಗಾಗಲೇ ಅವರಿಗೆ ರೈತ ಸಂಘ ಪತ್ರ ಬರೆದು ಅಂಕಿ ಅಂಶಗಳನ್ನು ಹೇಳಿದ್ಧೇವೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ತುಂಗಾ ಕಾಮಗಾರಿಯನ್ನು ಬೇಗನೇ ಮುಗಿಸಿ ಭದ್ರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
-ಗೋ.ವ. ಮೋಹನಕೃಷ್ಣ