ಕುರುಕ್ಷೇತ್ರಕ್ಕೆ ಬ್ರೇಕ್​ ಬಿದ್ದಿದ್ದೇಕೆ..?

0
110

ಲೋಕ ಸಮರಕ್ಕೆ ಡೇಟ್​ ಫಿಕ್ಸ್ ಆಗಿದೆ… ಪ್ರಜಾಪ್ರಭುತ್ವದ ಹಬ್ಬಕ್ಕೆ ತಯಾರಿ ಕೂಡ ಜೋರಾಗಿದೆ. ಪೊಲಿಟಿಕಲ್ ಪಾರ್ಟಿಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿ,  ಕಣಕ್ಕಿಳಿಸಲು ಲೆಕ್ಕಾಚಾರದಲ್ಲಿ ತೊಡಗಿವೆ. ಈ ನಡುವೆ ಒಂದಿಷ್ಟು ಮಂದಿ ಸ್ಪರ್ಧೆ ಕನ್ಫರ್ಮ್ ಆಗಿದೆ. ಆದರೆ, ಎಲೆಕ್ಷನ್ ಬಿಸಿ ಕೆಲವು ಸಿನಿಮಾಗಳಿಗೆ ತಟ್ಟುವ ಸಾಧ್ಯತೆ ಇದೆ.

 ಲೋಕಸಭಾ ಚುನಾವಣೆಯ ಡೇಟ್​ ಅನೌನ್ಸ್ ಆಗಿದೆ. ದೇಶದ 543  ಲೋಕಸಭಾ ಕ್ಷೇತ್ರಗಳಲ್ಲೀಗ ಪ್ರಜಾಪ್ರಭುತ್ವದ ಹಬ್ಬ! 7 ಹಂತಗಳಲ್ಲಿ ಚುನಾವಣೆ ನಡೆಯುತ್ತೆ. ಫೆಬ್ರವರಿ 11ರಿಂದ 23ರವರೆಗೆ ಮತದಾನ ಪ್ರಕ್ರಿಯೆ ನಡೆಯುತ್ತೆ. ಮೇ 23ರಕ್ಕೆ ಚುನಾವಣಾ ಫಲಿತಾಂಶ ಹೊರಬೀಳುತ್ತೆ. ರಾಜ್ಯದಲ್ಲಿ ಏಪ್ರಿಲ್​ 18 ಮತ್ತು 23ರಂದು ಮತದಾನ ನಡೆಯಲಿದೆ.. 

ಪ್ರಜಾಪ್ರಭುತ್ವದ ಈ ಹಬ್ಬ ಪೊಲಿಟಿಕಲ್ ಪಾರ್ಟಿಗಳಿಗೆ ಪ್ರತಿಷ್ಠೆ ಪ್ರಶ್ನೆಯಾಗಿದ್ದರೆ, ದೇಶದ ಜನಕ್ಕೆ ಇದು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸುಭದ್ರ ಸರ್ಕಾರವನ್ನು ರಚಿಸಲು ಒದಗಿ ಬಂದಿರೋ ಸುಗ್ಗಿಕಾಲ… ಆದರೆ,  ಕೆಲವು ಸಿನಿಮಾಗಳ ರಿಲೀಸ್​ಗೆ ಈ ಎಲೆಕ್ಷನ್ನೇ ಅಡ್ಡಿಯಾಗಿದ್ದು, ಸ್ಟಾರ್ ನಟರ ಅಭಿಮಾನಿಗಳಿಗೆ ಇದೊಂಥರಾ ಕಹಿ..!

ಲೋಕಸಭಾ ಚುನಾವಣೆ ಕೆಲವು ಚಿತ್ರಗಳ ಮೇಲೆ ಪರಿಣಾಮ ಬೀರಿದೆ. ಚುನಾವಣೆ ಮುಗಿಯುವರೆಗೆ ಈ ಸಿನಿಮಾಗಳನ್ನು ರಿಲೀಸ್ ಮಾಡೋಕೆ ಆಗಲ್ಲ.  ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅವರ ಅಭಿನಯದ ‘ಕುರುಕ್ಷೇತ್ರ’ಕ್ಕೂ ಎಲೆಕ್ಷನ್ ಅಡ್ಡಿಯಾಗಿದೆ..! ಕುರುಕ್ಷೇತ್ರಕ್ಕೂ ಬ್ರೇಕ್ ಬೀಳಲಿದೆ.

ಮಾರ್ಚ್ 10ರಂದು ಕೇಂದ್ರ ಚುನಾವಣಾ ಆಯೋಗ ಪ್ರೆಸ್​ ಮೀಟ್​  ಮಾಡಿ ಎಲೆಕ್ಷನ್ ಡೇಟ್​ ಅನೌನ್ಸ್ ಮಾಡಿದ ಕ್ಷಣದಿಂದಲೇ ನೀತಿಸಂಹಿತೆ ಜಾರಿಯಲ್ಲಿದ್ದು, ಇದೇ ಕಾರಣಕ್ಕೆ ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ ಸೇರಿದಂತೆ ಮೂರು ಸಿನಿಮಾಗಳು ಏಪ್ರಿಲ್​ನಲ್ಲಿ ರಿಲೀಸ್ ಆಗೋದು ಕಷ್ಟ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’.   ನಾಗಣ್ಣ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರಕ್ಕೆ ಮುನಿರತ್ನ ಬಂಡವಾಳ ಹಾಕಿದ್ದಾರೆ. ಇತ್ತೀಚೆಗೆ ಅಗಲಿದ ರೆಬಲ್​ ಸ್ಟಾರ್ ಅಂಬರೀಶ್ ಅವರನ್ನು ಕೂಡ ಕೊನೆಯ ಬಾರಿ ಈ ಸಿನಿಮಾ ಮೂಲಕ ಬೆಳ್ಳಿಪರದೆಯಲ್ಲಿ ಕಣ್ತುಂಬಿಕೊಳ್ಳಬಹುದು. ಅಷ್ಟೇ ಅಲ್ಲದೆ ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ದೊಡ್ಡ ತಾರಾಗಣವನ್ನು ಹೊಂದಿದೆ ಕುರುಕ್ಷೇತ್ರ..

ಸಿನಿಮಾ ಸೆಟ್ಟೇರಿದಾಗಿನಿಂದ ಸದ್ದು ಮಾಡುತ್ತಾ, ಸುದ್ದಿಯಲ್ಲಿದೆ. ಯಾವಾಗ ಸಿನಿಮಾ ರಿಲೀಸ್ ಆಗುತ್ತಪ್ಪಾ ಅಂತಾ ಸಿನಿಪ್ರಿಯರು ಕಾಯ್ತಾ ಇದ್ದಾರೆ. ಆದರೆ, ಈ ಸಿನಿಮಾ ರಿಲೀಸ್​ಗೆ ಈಗ ಬ್ರೇಕ್​ ಬಿದ್ದಿದೆ…ಏಪ್ರಿಲ್​ನಲ್ಲಿ ಸಿನಿಮಾ ರಿಲೀಸ್​ ಆಗೋದು ಡೌಟು. ಕಾರಣ ಚುನಾವಣಾ ನೀತಿ ಸಂಹಿತೆ..!

ಹ್ಞಾಂ,  ದರ್ಶನ್ ಅಭಿನಯದ ಕುರುಕ್ಷೇತ್ರ ಏಪ್ರಿಲ್​ನಲ್ಲಿ ರಿಲೀಸ್ ಆಗೋದು ಅನುಮಾನ. ನಿಮಗೆ ಗೊತ್ತೇ ಇರುವಂತೆ ನಿಖಿಲ್ ಕುಮಾರಸ್ವಾಮಿ ಈ ಚಿತ್ರದಲ್ಲಿ ಅಭಿಮನ್ಯುವಾಗಿ ನಟಿಸಿದ್ದಾರೆ. ಅವರೀಗ ಮಂಡ್ಯ ರಣಕಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸೆಣೆಸಲು ರೆಡಿಯಾಗಿದ್ದಾರೆ.  ಚುನಾವಣಾ ಕಣದಲ್ಲಿ ನಿಖಿಲ್ ಇರೋದ್ರಿಂದ ಅವರ ಸಿನಿಮಾ ರಿಲೀಸ್​ಗೆ ನೀತಿ ಸಂಹಿತೆ ಅಡ್ಡಿಯಾಗುತ್ತೆ. ಹಾಗಾಗಿ ಕುರುಕ್ಷೇತ್ರ ಏಪ್ರಿಲ್​ನಲ್ಲಿ ರಿಲೀಸ್ ಆಗೋದು ಕಷ್ಟ..!

ಕುರುಕ್ಷೇತ್ರ ಮಾತ್ರವಲ್ಲದೆ ರಿಯುಲ್ ಸ್ಟಾರ್ ಉಪೇಂದ್ರ ಹಾಗೂ ರಚಿತಾ ರಾಮ್​ ಅವರು ನಟಿಸಿರೋ ಐ ಲವ್ ಯು ಸಿನಿಮಾ ಕೂಡ ಏಪ್ರಿಲ್​ನಲ್ಲಿ ರಿಲೀಸ್​ ಆಗಬೇಕಿತ್ತು. ಆದರೆ, ನೀತಿಸಂಹಿತೆ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಚಿತ್ರ ತೆರೆಕಾಣೋದು ಡೌಟು.  ಉಪೇಂದ್ರ ಅವರು ಎಲೆಕ್ಷನ್​ಗೆ ಕಂಟೆಸ್ಟ್ ಮಾಡ್ದೇ ಇದ್ರು ಅವರ ಉತ್ತಮ ಪ್ರಜಾಕೀಯ ಪಕ್ಷದ ಕ್ಯಾಂಡಿಡೇಟ್​ಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಉಪ್ಪಿಯೇ ತಮ್ಮ ಪಕ್ಷದ ಪ್ರೆಸಿಡೆಂಟ್ ಆಗಿರೋದ್ರಿಂದ ಅವರು ಏಪ್ರಿಲ್​ನಲ್ಲಿ ‘ಐ ಲವ್ ಯು’ ಅಂತ ಬೆಳ್ಳಿಪರದೆ ಅಲಂಕರಿಸೋದು ಕಷ್ಟ

ಇನ್ನು ಶಂಕರ್ ನಿರ್ದೇಶನದ ಹರಿಪ್ರಿಯಾ ನಟನೆಯ 25ನೇ ಚಿತ್ರ ಡಾಟರ್ ಆಫ್ ಪಾರ್ವತಮ್ಮ ಕೂಡ ಏಪ್ರಿಲ್​ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಮಂಡ್ಯ ಲೋಕಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರೋದ್ರಿಂದ ಎಲೆಕ್ಷನ್ ಮುಗಿಯುವ ತನಕ ಸಿನಿಮಾ ರಿಲೀಸ್ ಮಾಡುವಂತಿಲ್ಲ.  ಏಪ್ರಿಲ್​ನಲ್ಲಿ ಸಿನಿಮಾ ರಿಲೀಸ್ ಮಾಡ್ಬೇಕು ಅಂತಿದ್ವಿ. ಆದ್ರೆ  ನೀತಿಸಂಹಿತೆ ಇರೋದ್ರಿಂದ ಎಲೆಕ್ಷನ್ ಮುಗಿದ ಮೇಲೆ ಸಿನಿಮಾ ರಿಲೀಸ್ ಮಾಡ್ತೀವಿ ಅಂದಿದ್ದಾರೆ ಡೈರೆಕ್ಟರ್ ಶಂಕರ್.

ಹೀಗೆ ಚುನಾವಣೆ ಹಿನ್ನೆಲೆಯಲ್ಲಿ  ಕುರುಕ್ಷೇತ್ರ, ಐ ಲವ್​ ಯು ಮತ್ತು ಡಾಟರ್ ಆಫ್ ಪಾರ್ವತಮ್ಮ ಸಿನಿಮಾಗಳು ಏಪ್ರಿಲ್​ನಲ್ಲಿ ರಿಲೀಸ್ ಆಗ್ತಾ ಇಲ್ಲ.. ಇದು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ.. ಆದರೆ, ನೀತಿಸಂಹಿತೆ ಪಾಲಿಸಲೇ ಬೇಕು….

 

 

 

 

LEAVE A REPLY

Please enter your comment!
Please enter your name here