Monday, January 17, 2022
Powertv Logo
HomePower Specialಕನ್ನಡಪ್ರೇಮಿ ಕಂಡಕ್ಟರ್​ ನಟರಾಜ್

ಕನ್ನಡಪ್ರೇಮಿ ಕಂಡಕ್ಟರ್​ ನಟರಾಜ್

​“ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಕನ್ನಡಕ್ಕಾಗಿ ಕೊರಳೆತ್ತು, ನಿನ್ನ ಕೊರಳು ಪಾಂಚಜನ್ಯವಾಗುತ್ತದೆ” ಅಂತ ರಾಷ್ಟ್ರಕವಿ ಕುವೆಂಪು ಹೇಳಿದ್ದಾರೆ. ಇಲ್ಲೊಬ್ಬ ಅಪ್ಟಟ ಕನ್ನಡ ಪ್ರೇಮಿ ಅದಕ್ಕೆ ತಕ್ಕಂತೆ ನಡೆದುಕೊಳ್ತಿದ್ದಾರೆ. ಕನ್ನಡ ನಾಡು ನುಡಿಗಾಗಿ ದೊಡ್ಡ ಹೋರಾಟವೇನೂ ಮಾಡಬೇಕಾಗಿಲ್ಲ, ಸಾಮಾನ್ಯ ಕಾರ್ಯಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ರೂ ಸಾಕು ಅನ್ನೋದನ್ನು ಇವರು ತೋರಿಸಿಕೊಟ್ಟಿದ್ದಾರೆ. ಇವರೇ ಶಿವಮೊಗ್ಗದ ಕೆಎಸ್ಆರ್​ಟಿಸಿ ಬಸ್​ ಕಂಡಕ್ಟರ್ ನಟರಾಜ್​ ಕುಂದೂರು.

ಇವರು ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದವರು. ಸುಮಾರು 15 ವರ್ಷಗಳಿಂದ ಇವರು ಕಂಡಕ್ಟರ್​ ಆಗಿದ್ದುಕೊಂಡೇ ವಿಶಿಷ್ಟವಾಗಿ ಕನ್ನಡ ಸೇವೆ ಮಾಡ್ತಿದ್ದಾರೆ. ತಾವು ಕರ್ತವ್ಯ ನಿರ್ವಹಿಸುವ ಬಸ್ಸಿನಲ್ಲಿಯೇ, ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸ್ತಾರೆ. ನಾನಾ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಈಗ ಶಿವಮೊಗ್ಗಕ್ಕೆ ಟ್ರಾನ್ಸ್​ಫರ್​ ಪಡೆದಿದ್ದಾರೆ. ಇಲ್ಲಿಯೂ ಕನ್ನಡಮ್ಮನ ಸೇವೆ ಮುಂದುವರೆಸಿಕೊಂಡು ಬರ್ತಿದ್ದಾರೆ.

ಚಿಕ್ಕಂದಿನಿಂದಲೂ ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಟರಾಜ್, ವೃತ್ತಿಯಲ್ಲಿಯೂ, ತಮ್ಮ ಕನ್ನಡ ಅಭಿಮಾನ ಮುಂದುವರಿಸಿದ್ದಾರೆ. ಸಾರಿಗೆ ಇಲಾಖೆಗೆ ಬರುವ ಮುನ್ನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದ ಇವರು, ಇದೀಗ ತಮ್ಮ ನಿರ್ವಾಹಕ ಕಾಯಕದಲ್ಲಿ ಪ್ರಯಾಣಿಕರಿಗೆ, ಕನ್ನಡ ಪರಿಚಾರಕನಾಗಿದ್ದಾರೆ.

ಬಸ್ಸಿನಲ್ಲಿ ರಸಪ್ರಶ್ನೆ: ಪ್ರಯಾಣಿಕರಿಗೆ ರಸ ಪ್ರಶ್ನೆ ಕೇಳುವುದು, ಕನ್ನಡ ನಾಡಿನ ಗೀತೆಯ ಬಗ್ಗೆ ಪರಿಚಯ ಮಾಡಿಕೊಡುತ್ತಿದ್ದಾರೆ. ಕನ್ನಡದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಬಹುಮಾನವಾಗಿ ನೀಡುತ್ತಿದ್ದಾರೆ. ರಾಜ್ಯೋತ್ಸವ ಸಂದರ್ಭದಲ್ಲಿ ಬಸ್ಸಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳು, ಕನ್ನಡದ ಮಹಾನ್ ಕವಿಗಳು ಹಾಗೂ 1915 ರಿಂದ 2018 ರವರೆಗೆ ನಡೆದ ಎಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾವ ಚಿತ್ರಗಳು, ಕನ್ನಡಕ್ಕೆ ಸಂಬಂಧಿಸಿದ ವಿವರಗಳನ್ನ ಹಾಕಿದ್ದಾರೆ.

ಸಂಬಳದಲ್ಲಿ ಕನ್ನಡಕ್ಕೆಂದೇ ಸ್ವಲ್ಪ ಮೊತ್ತ: ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಕಾಳಜಿ ಪಸರಿಸುತ್ತಿರುವ ನಟರಾಜ್, ಕನ್ನಡ ರಕ್ಷಿಸಿ, ಉಳಿಸಿ ಎಂದು ಬಾಯಿ ಮಾತಿನಲ್ಲಿ ಹೇಳುವ ಬದಲಾಗಿ ನಮ್ಮಿಂದಲೇ, ಈ ಕೆಲಸ ಆರಂಭವಾಗಲಿ ಅಂತ ತೋರಿಸಿಕೊಟ್ಟಿದ್ದಾರೆ. ನಾನು ಸೇವೆಯಲ್ಲಿ ಇರುವವರೆಗೂ ಈ ರೀತಿ ಆಚರಿಸುತ್ತೇನೆ ಎಂಬ ಸಂಕಲ್ಪವನ್ನು ನಟರಾಜ್ ಮಾಡಿದ್ದಾರೆ. ಇದಕ್ಕೆಂದೇ, ತಮ್ಮ ವೇತನದಲ್ಲಿ ಪ್ರತಿ ತಿಂಗಳು ಇವರು, 2 ಸಾವಿರ ರು. ಮೀಸಲಿಡುತ್ತಾರೆ.

ಪ್ರಶಸ್ತಿಗಳ ಸರದಾರ: ನಟರಾಜ್, ತಾವು ನಿರ್ವಹಿಸುತ್ತಿರುವ ಬಸ್ ನ್ನು ಕನ್ನಡಮಯಗೊಳಿಸುವುದರ ಜೊತೆಗೆ, ಚುಟುಕು ಕವನಗಳನ್ನು ಬರೆಯುತ್ತಾರೆ. ‘ಸಾಧನೆ’, ‘ಕಣ್ಣೀರು’, ‘ಮುತ್ತು’, ‘ಮೂಡಣಗಾಳಿ’, ‘ಮದುವೆಯ ಸಂಬಂಧ’, ‘ನನ್ನ ಶಾಲೆ’, ‘ಹಣ ಮತ್ತು ಲೆಕ್ಕಾಚಾರ’ ಮತ್ತಿತರ ಚುಟುಕುಗಳನ್ನು ಬರೆದಿದ್ದಾರೆ. ‘ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ’, ‘ಅಪ್ಪಟ ಕನ್ನಡ ಅಭಿಮಾನಿ ಪ್ರಶಸ್ತಿ’- ‘ಬೆಳ್ಳಿ ಪದಕ’, ‘ಗೌತಮ ಬುದ್ಧ ನ್ಯಾಷನಲ್ ಫಿಲಾಸಫಿ ಅವಾರ್ಡ್’ – ಚಿನ್ನದ ಪದಕ, ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಸೇರಿದಂತೆ, ಹತ್ತಾರು ಪ್ರಶಸ್ತಿಗಳು ಲಭಿಸಿವೆ. 2 ರಾಷ್ಟ್ರೀಯ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ., ಶಿವಮೊಗ್ಗ.

LEAVE A REPLY

Please enter your comment!
Please enter your name here

- Advertisment -

Most Popular

Recent Comments