ಕೋಲಾರ : ಈ ಹಳ್ಳಿ ಹುಡ್ಗಿ ಬಹಳ ಚೂಟಿ. ಪಿಯುಸಿಯಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಗಳಿಸಿರುವ ಈಕೆ ಕೋಲಾರ ಜಿಲ್ಲೆಯ ಟಾಪರ್ ಎನಿಸಿದ್ದಾಳೆ. ಶ್ರಮ ಪಟ್ಟು ಓದೋಕ್ಕಿಂತ ಇಷ್ಟಪಟ್ಟು ಓದೋದು ಮುಖ್ಯ ಅಂತಾಳೆ ಈಕೆ.
ಹೆಸರು ತುಷಾರ, ಕೋಲಾರ ತಾಲೂಕಿನ ಸುಗಟೂರು ಗ್ರಾಮ ಮೂಲದ ನಾಗೇಂದ್ರ ಶೆಟ್ಟಿ ಮಗಳು. ನಾಗೇಂದ್ರ ಶೆಟ್ಟಿ ಊರಿನಲ್ಲೇ ದಿನಸಿ ಅಂಗಡಿಯನ್ನು ಇರಿಸಿಕೊಂಡಿದ್ದಾರೆ. ನಾಗೇಂದ್ರ ದಂಪತಿಯ ಮೂರು ಮಕ್ಕಳ ಪೈಕಿ ತುಷಾರ ಶೆಟ್ಟಿ ಎರಡನೆಯವಳು. ಅಕ್ಕ ಪದವಿ ವ್ಯಾಸಂಗ ಮಾಡ್ತಿದ್ರೆ, ಸಹೋದರ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾನೆ.
ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಪಡೆದಿರುವ ತುಷಾರ ಅವ್ರು ನಾಗೇಂದ್ರಶೆಟ್ಟಿ ಅವ್ರ ಎರಡನೆ ಪುತ್ರಿ. ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಹತ್ತನೆ ತರಗತಿವರೆಗೂ ಓದಿದ ತುಷಾರ, 608 ಅಂಕ ಗಳಿಸಿ 97 ಪರ್ಸೆಂಟ್ ಪಡೆದುಕೊಂಡವ್ರು. ನಂತ್ರ ಕೋಲಾರದ ಎಸ್ಡಿಸಿ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ- ಕಾಮರ್ಸ್ಗೆ ಪ್ರವೇಶ ಪಡೆದುಕೊಂಡ ತುಷಾರ, ಇದೀಗ ಎರಡನೆ ಪಿಯೂಸಿಯಲ್ಲಿ 593 ಅಂಕಗಳ ಮೂಲಕ 98.83 ಪರ್ಸೆಂಟ್ ಪಡೆದುಕೊಂಡು ರಾಜ್ಯಕ್ಕೆ ಐದನೆ ರ್ಯಾಂಕ್ ಪಡೆದುಕೊಂಡಿದ್ದಾಳೆ.
ದಿನಸಿ ಅಂಗಡಿ ಇರಿಸಿಕೊಂಡಿರುವ ಅಪ್ಪ ನಾಗೇಂದ್ರಶೆಟ್ಟಿ ಅವ್ರು, ಪುತ್ರಿ ತುಷಾರ ಸಾಧನೆಗೆ ಸಂತಸ ವ್ಯಕ್ತಪಡಿಸ್ತಾರೆ.
ಮನೆಯ ಕೆಲಸದ ಜೊತೆಗೆ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ತೋರುತ್ತಿದ್ದ ಮಗಳು ತುಷಾರಗೆ ಎಸ್ಡಿಸಿ ಶಿಕ್ಷಣ ಸಂಸ್ಥೆಯವ್ರ ವಿಶೇಷ ಮುತುವರ್ಜಿಯು ನೆರವಾಯ್ತು ಅನ್ನೋದು ಅಪ್ಪನ ಅಕ್ಕರೆಯ ಮಾತು.
ರಾಜ್ಯಕ್ಕೆ ಐದನೆ ರ್ಯಾಂಕ್ ತಂದಿರುವ ತಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ತುಷಾರ ಬಗ್ಗೆ ಎಸ್ಡಿಸಿ ಆಡಳಿತ ಮಂಡಳಿಗೆ ಹೆಮ್ಮೆಯಿದೆ. ಫಲಿತಾಂಶ ಘೋಷಣೆಯಾದ ದಿನ ತುಷಾರ ಅವರ ಮನೆ ಬಾಗಿಲಿಗೆ ತೆರಳಿದ ಆಡಳಿತ ಮಂಡಳಿಯು ಪ್ರತಿನಿಧಿಗಳು ವಿದ್ಯಾರ್ಥಿನಿಯನ್ನು ಗೌರವಿಸಿ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಒಟ್ನಲ್ಲಿ, ಕೋಲಾರ ಜಿಲ್ಲೆಯ ಗ್ರಾಮೀಣ ಪ್ರತಿಭೆಯೊಂದು ಈ ಸಲದ ಪಿಯೂಸಿ ಪರೀಕ್ಷೆಯ ಫಲಿತಾಂಶದಲ್ಲಿ ಸಾಧನೆಯನ್ನು ತೋರಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವುದು ಸಂತಸದ ಸಂಗತಿಯಾಗಿದೆ.
-ಆರ್.ಶ್ರೀನಿವಾಸಮೂರ್ತಿ