Monday, September 26, 2022
Powertv Logo
HomePower Specialಕೋಲಾರ ಜಿಲ್ಲೆಯಲ್ಲಿ ನಾಗರಿಕ ಸೌಕರ್ಯವಿಲ್ಲದಿರುವ ಇಂದಿರಾನಗರ ಗ್ರಾಮ

ಕೋಲಾರ ಜಿಲ್ಲೆಯಲ್ಲಿ ನಾಗರಿಕ ಸೌಕರ್ಯವಿಲ್ಲದಿರುವ ಇಂದಿರಾನಗರ ಗ್ರಾಮ

ಕೋಲಾರ, : – ದೇಶಕ್ಕೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನವಾಗ್ತಿದೆ. ಕೋಲಾರದ ಈ ಹಳ್ಳಿಯು ಉದಯವಾಗಿ ಅರ್ಧ ಶತಮಾನಕ್ಕೆ ಹತ್ತಿರವಾಗ್ತಿದೆ. ಆದ್ರೆ, ಈ ಊರಿಗೆ ಸರಿಯಾದ ರಸ್ತೆಯಿಲ್ಲ. ದೀಪವಂತೂ ಇಲ್ಲವೇ ಇಲ್ಲ. ಚರಂಡಿ ಅನ್ನೋ ಕಲ್ಪನೆಯಿಲ್ಲ. ಅಷ್ಟು ಮಾತ್ರವಲ್ಲ, ಇಲ್ಲಿನವ್ರಿಗೆ ಈ ಕ್ಷೇತ್ರದ ಎಂಎಲ್ಎ ಯಾರೂ ಅಂತಾನೇ ಗೊತ್ತಿಲ್ಲ. ಏನಿದು ಈ ಹಳ್ಳಿಯ ಪರಿಸ್ಥಿತಿ ಅನ್ನೋದಿಕ್ಕೆ ಈ ಸ್ಟೋರಿ ಓದಿ.

ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಕುಗ್ರಾಮವಿದು. ಇಂದಿರಾಗಾಂಧಿ ಅವರ ಕಾಲದಲ್ಲಿ ಈ ಹಳ್ಳಿಯು ಅಸ್ತಿತ್ವಕ್ಕೆ ಬಂದಿದ್ರಿಂದ ಇಂದಿರಾಗಾಂಧಿ ನಗರ ಅಂತ ಈ ಹಳ್ಳಿಗೆ ಹೆಸ್ರಿಟ್ಟಿದ್ದಾರೆ. ಆದ್ರೆ, ಈ ಹೆಸರಿನ ಬೋರ್ಡು ಎಲ್ಲಿಯೂ ಇಲ್ಲ. ಮುಳಬಾಗಲು ಪಟ್ಟಣದಿಂದ 30 ಕಿಲೋ ಮೀಟರ್ ದೂರದಲ್ಲಿರೋ ಈ ಹಳ್ಳಿಗೆ ಈವರೆಗೂ ಸಾರಿಗೆ ವ್ಯವಸ್ಥೆಯೂ ಇಲ್ಲ. ಈ ಹಳ್ಳಿಯಲ್ಲಿ ನಿಂತು ಇಣುಕಿದರೆ ನೆರೆಯ ಆಂಧ್ರಪ್ರದೇಶದ ಗಡಿ ಕಾಣುತ್ತದೆ. ಇದು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ನಾಗೇಶ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿನ ಒಂದು ಹಳ್ಳಿ ಕಥೆ.

ಅದು 1975-76 ರ ಆಸುಪಾಸಿನ ವರ್ಷದ ಘಟನೆ. ಮುಳಬಾಗಲು ತಾಲೂಕಿನ ಉಗಣಿ ಗ್ರಾಮದಲ್ಲಿದ್ದ ಬಹಳಷ್ಟು ಮಂದಿಗೆ ಇರಲು ಮನೆಯಿರಲಿಲ್ಲ. ಇದನ್ನು ಮನಗಂಡ ಆಗಿನ ಜನಪ್ರತಿನಿಧಿಗಳು ಉಗಣಿ ಗ್ರಾಮದ ಸುಮಾರು ನೂರೈವತ್ತು ಮಂದಿ ನಿರಾಶ್ರಿತರಿಗೆ ನೆರೆಯ ಸರ್ಕಾರಿ ಜಮೀನನ್ನು ಮಂಜೂರು ಮಾಡಿ ಕಲ್ಲು ಕಟ್ಟಡದಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟು, ಅದಕ್ಕೆ ಇಂದಿರಾನಗರ ಅಂತ ಹೆಸ್ರಿಟ್ಟರು. ಆದ್ರೆ, ಊರಿನಿಂದ ದೂರವಿದ್ದ ಈ ಜಾಗಕ್ಕೆ ಬರೋದಿಕ್ಕೆ, ಇಲ್ಲಿ ಇರೋದಿಕ್ಕೆ ದೆವ್ವ-ಭೂತ ಅಂತೆಲ್ಲ ಭಯಪಟ್ಟ ಅಂದಿನ ಬಹುತೇಕ ಕುಟುಂಬಗಳು ಇಲ್ಲಿಗೆ ವಾಸಕ್ಕೆ ಬರಲಿಲ್ಲ. ಅಂದಿನಿಂದ ಇಂದಿರಾನಗರ ಗ್ರಾಮ ಅರೆ-ಬರೆ ಊರಾಗಿ ಉಳಿದಿಕೊಂಡಿದೆ. ಪ್ರಸ್ತುತ ಇಲ್ಲಿ 11 ಕುಟುಂಬಗಳು ವಾಸವಾಗಿದೆ.

ಇಂದಿರಾನಗರ ಗ್ರಾಮದಲ್ಲಿ ವಾಸವಿರುವ ಹನ್ನೊಂದು ಕುಟುಂಬಗಳಲ್ಲಿ 65 ಮಂದಿಯಿದ್ದಾರೆ. ಈ ಪೈಕಿ ಹನ್ನೆರಡು ಚಿಕ್ಕ-ದೊಡ್ಡ ಮಕ್ಕಳೂ ಸೇರಿದ್ದಾರೆ. ಮುಸ್ಲಿಮರು ಮತ್ತು ಬೋವಿ ಜನಾಂಗದವ್ರು ಮಾತ್ರ ಇರೋ ಈ ಊರಲ್ಲಿ ಎಲ್ಲರೂ ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ. ಇಲ್ಲಿಂದ ಕೂಗಳತೆಯಲ್ಲಿ ಆಂದ್ರಪ್ರದೇಶ ಇರೋದ್ರಿಂದ ಕನ್ನಡ ಭಾಷೆಯ ಪರಿಚಯ ಇಲ್ಲಿನ ಹಳೆ ತಲೆಮಾರಿನವ್ರಿಗಿಲ್ಲ. ವಯಸ್ಕರು, ಮಧ್ಯ ವಯಸ್ಕರು ಕೂಲಿಗೆ ಹೋದ್ರೆ, ಪುಟ್ಟ ಮಕ್ಕಳ ತಾಯಂದಿರು ವೃದ್ದರನ್ನು ನೋಡಿಕೊಂಡು ಮನೆಯಲ್ಲಿರ್ತಾರೆ.

ಇಂಥಹ ಊರಿಗೆ ಇದುವರೆಗೂ ಸರಿಯಾದ ರಸ್ತೆಯಿಲ್ಲ. ಅಸಲು ಈ ಊರಿಗೆ ಯಾವುದೇ ವಾಹನಗಳ ಸೌಕರ್ಯವೂ ಇಲ್ಲ. ಇಂದಿರಾನಗರದವರು ಪಟ್ಟಣಕ್ಕೆ ಹೋಗಬೇಕೆಂದ್ರೆ ಮೂರು ಕಿಲೋ ಮೀಟರ್ ದೂರದಲ್ಲಿರುವ ತಿಪ್ಪದೊಡ್ಡಿ ಗ್ರಾಮದವರೆಗೂ ಕೆರೆಯ ಅಂಗಳದಲ್ಲಿ ನಡೆದೇ ಹೋಗಬೇಕಾಗಿದೆ.

ಇಂದಿರಾನಗರದ ಹನ್ನೊಂದು ಮನೆಗಳಿಗೆ ಇದುವರೆಗೂ ಕರೆಂಟ್ ಸಂಪರ್ಕವಿಲ್ಲ. ಇಲ್ಲಿನ ವಾಸಿಗಳಿಗೆ ಸಾಯಂಕಾಲ ಆಗ್ತಿದ್ದಂತೆ ಹೊರಗಿನ ಪ್ರಪಂಚದ ಸಂಪರ್ಕ ಕಡಿತವಾಗುತ್ತದೆ. ಇಲ್ಲಿನ ಕೆಲವು ಮಕ್ಕಳನ್ನು ಪಕ್ಕದಲ್ಲಿರುವ ತಿಪ್ಪದೊಡ್ಡಿಯ ಶಾಲೆಗೇನೋ ಕಳಿಸ್ತಿದ್ದಾರೆ. ಆದ್ರೆ, ಶಾಲೆಯಿಂದ ಹಿಂದಿರುಗಿದ ನಂತ್ರ ಮನೆ ಕೆಲಸವನ್ನು ಮುಗಿಸೋಷ್ಟರಲ್ಲಿ ರಾತ್ರಿಯಾಗುತ್ತೆ. ಆ ನಂತ್ರ ಮನೆಯಲ್ಲಿ ಕರೆಂಟ್ ಇಲ್ಲದ ಕಾರಣ ಓದೋದಿಕ್ಕೆ  ಸಾಧ್ಯವಾಗೋದಿಲ್ಲ. ಇದ್ರ ಜೊತೆಗೆ, ತಿಪ್ಪದೊಡ್ಡಿಯ ಕೆರೆಯ ಅಂಗಳದಲ್ಲಿ ಮಳೆ ನೀರು ನಿಂತ್ರೆ ವಿದ್ಯಾರ್ಥಿಗಳು ಇಲ್ಲಿಂದ ನಾಲ್ಕೈದು ಕಿಲೋ ಮೀಟರ್ ಹೆಚ್ಚಿನ ದೂರವನ್ನು ಬಳಸಿಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ.

ಇಂದಿರಾನಗರ ಗ್ರಾಮದಲ್ಲಿನ ನಾಲ್ಕು ಮನೆಗಳನ್ನು ಹೊರತುಪಡಿಸಿದ್ರೆ ಉಳಿದವ್ರು ಈಗಲು ಗುಡಿಸಲು ಮತ್ತು ಟಾರ್ಪಾಲ್ಗಳಲ್ಲಿ ನಿರ್ಮಿಸಿಕೊಂಡಿರುವ ಆಸರೆಗಳಲ್ಲಿ ಬದುಕುತ್ತಿದ್ದಾರೆ. ಐದಾರು ಮಂದಿಯಿರುವ ಕುಟುಂಬದವ್ರು ಒಂದೇ ಗುಡಿಸಿಲಿನಲ್ಲಿ ವಾಸಿಸುತ್ತಿರುವ ನಿದರ್ಶನವೂ ಇಲ್ಲಿದೆ. ಮಳೆ-ಗಾಳಿ, ಹಾವು-ಚೇಳುಗಳು ಭಯದಲ್ಲಿಯೂ ಇಲ್ಲಿನ ಕೆಲವರು ಟಾರ್ಪಾಲ್ಗಳ ಆಸರೆಯಲ್ಲಿ ವಾಸಿಸುತ್ತಿದ್ದಾರೆ. ಜೀವನೋಪಾಯಕ್ಕಾಗಿ ಬೇರೆ ಊರುಗಳಿಗೆ ಹೋಗಿರುವವರ ವೃದ್ದ ಪೋಷಕರೂ ಇಂದಿರಾನಗರ ಗ್ರಾಮದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಕಾಣಿಸುತ್ತಾರೆ.

ಇಂದಿರಾನಗರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯು ಹೆಚ್ಚಾಗಿ ಕಾಡ್ತಿದೆ. ಇಲ್ಲಿ ಊರು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಈ ಊರಿಗೆ ಕುಡಿಯುವ ನೀರಿನ ವ್ಯವಸ್ಥೆಯೇ ಆಗಿಲ್ಲ. ಮೈಲಿಗಟ್ಟಲೆ ದೂರದ ತೋಟಗಳ ಬಳಿಯಿರುವ ಬೋರ್ವೆಲ್ಗಳಿಂದ ನೀರು ತರುವ ಕಷ್ಟ ಆಗಿನಿಂದಲೇ ಇವರಿಗೆ ಮಾಮೂಲಾಗಿದೆ.

ಸ್ವಚ್ಛತೆಯ ವಿಷಯಕ್ಕೆ ಬಂದಾಗ ಚರಂಡಿ, ಶೌಚಾಲಯ, ಸ್ನಾನದ ಮನೆ ಅನ್ನೋ ಕಲ್ಪನೆಯೇ ಇಂದಿರಾನಗರದಲ್ಲಿ ಇಲ್ಲವಾಗಿದೆ. ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಅನ್ನೋ ಹೆಗ್ಗಳಿಕೆಯಿರುವ ಈ ಜಿಲ್ಲೆಯ ಇಂದಿರಾನಗರ ಗ್ರಾಮದಲ್ಲಿನ ವಾಸ್ತವ ಪರಿಸ್ಥಿತಿಯಿದು.ಇಷ್ಟೆಲ್ಲ ಕಷ್ಟಪಡ್ತಿರೋ ಇಂದಿರಾನಗರ ಗ್ರಾಮದವ್ರ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ ಗೊತ್ತಿದೆ. ಚುನಾವಣೆ ಇದ್ದಾಗ ಇಲ್ಲಿಗೆ ಓಟಿಗಾಗಿ ಬರ್ತಾರೆ. ಬಣ್ಣದ ಮಾತುಗಳನ್ನು ಹೇಳ್ತಾರೆ, ಎಲ್ಲ ಸೌಕರ್ಯಗಳನ್ನು ಮಾಡಿಕೊಡ್ತೀವಿ ಅಂತ ಭರವಸೆ ಕೊಡ್ತಾರೆ. ಆ ನಂತ್ರ ಅತ್ತ ಕಡೆ ಹೋಗೋದು ಈ ಕಡೆ ಮುಖ ಮಾಡೋದು ಮುಂದಿನ ಮತ್ತೊಂದು ಚುನಾವಣೆ ಸಂದರ್ಭದಲ್ಲಿ ಮಾತ್ರ.

ಈಗಲೂ ಇಲ್ಲಿನ ಜನ್ರು ಮುಳಬಾಗಲು ಕ್ಷೇತ್ರಕ್ಕೆ ಕೊತ್ತೂರು ಮಂಜುನಾಥ ಎಂಎಲ್ಎ ಅಂತ ತಿಳ್ಕೊಂಡಿದ್ದಾರೆ. ಎಚ್.ನಾಗೇಶ ಅವ್ರು ಮುಳಬಾಗಲು ಕ್ಷೇತ್ರದ ಎಂಎಲ್ಎ ಆಗಿ ಈಗ ಸಚಿವರೂ ಆಗಿರೋದು ಇಲ್ಲಿನವ್ರಿಗೆ ಗೊತ್ತೇ ಇಲ್ಲ. ಹಾಗಂತ, ಕೊತ್ತೂರು ಮಂಜುನಾಥ ಅವರು ಹಿಂದಿನ ಅವಧಿಯಲ್ಲಿ ಎಂಎಲ್ಎ ಆಗಿದ್ದಾಗ ಮತ್ತು ಎಚ್.ನಾಗೇಶ ಅವರು ಹಾಲಿ ಎಂಎಲ್ಎ ಆಗಿರುವಾಗಲೂ ಇಲ್ಲಿನ ಬದುಕು ಬದಲಾಗಿಯೇ ಇಲ್ಲ. ನಾಗರಿಕ ಸಮಾಜದಲ್ಲಿನ ಒಂದು ಸರ್ಕಾರಕ್ಕೆ ಇಂದಿರಾನಗರ ಗ್ರಾಮದ ಸಮಸ್ಯೆಯೇ ಕೇಳಿಸಿಲ್ಲ ಅನ್ನೋದು ದುರಂತದ ಸಂಗತಿಯಾಗಿ ಉಳಿದುಕೊಂಡಿದೆ.

 

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

15 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments