ಕೋಲಾರ : ಕೋಲಾರ ಜಿಲ್ಲೆಯಲ್ಲಿ ಮಾಜಿ ಶಾಸಕರೋರ್ವರು ಕೃಷಿಗೆ ಮೊರೆ ಹೋಗಿದ್ದಾರೆ. ಮುಳಬಾಗಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೇಸಾಯದಲ್ಲಿ ನಿರತರಾಗಿದ್ದಾರೆ. ಮುಳಬಾಗಲು ತಾಲೂಕಿನ ಸ್ವಗ್ರಾಮ ಕೊತ್ತೂರು ಗ್ರಾಮದಲ್ಲಿ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಸ್ವತಃ ನೇಗಿಲು ಹಿಡಿದು ಉಳುಮೆ ಮಾಡಿದ್ದಾರೆ. ಇದ್ರಿಂದ ಕೊತ್ತೂರು ಮಂಜುನಾಥ್ ಬೆಂಬಲಿಗರು ಹಾಗೂ ಗ್ರಾಮಸ್ಥರು ಖುಷಿಗೊಂಡಿದ್ದಾರೆ. ಮುಳಬಾಗಲು ಕ್ಷೇತ್ರದಿಂದ 2014 ರಲ್ಲಿ ಪಕ್ಷೇತರ ಶಾಸಕರಾಗಿದ್ದ ಮಂಜುನಾಥ ಅವ್ರು ಕಾಂಗ್ರೆಸ್ ಪಾರ್ಟಿಯ ಜೊತೆಗಿದ್ದರು. ಹಾಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿರುವ ಕೊತ್ತೂರು ಮಂಜುನಾಥ್ ಅವ್ರು, ಸಂಸತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿ, ಪ್ರಸ್ತುತ ತಟಸ್ಥರಾಗಿದ್ದಾರೆ. ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಸಮಾರಂಭದಿಂದ ದೂರವುಳಿದ ಕೊತ್ತೂರು ಮಂಜುನಾಥ್ ಅವ್ರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ದಿನಪೂರ್ತಿ ಕಳೆದಿದ್ದಾರೆ. ಮಾಜಿ ಶಾಸಕರ ನಡೆಯಿಂದ ಮುಳಬಾಗಲಿನ ಕಾಂಗ್ರೆಸ್ ಬೆಂಬಲಿಗರಲ್ಲಿ ಡಿಕೆ ಶಿವಕುಮಾರ್ ಕಾರ್ಯಕ್ರಮದ ಉತ್ಸಾಹ ಕಾಣಲಿಲ್ಲ. ಬಹುತೇಕ ಬೆಂಬಲಿಗರು ಡಿಕೆ ಶಿವಕುಮಾರ್ ಕಾರ್ಯಕ್ರಮದಿಂದ ದೂರ ಉಳಿದರು.