ಕೋಲಾರ : ರಾಜ್ಯದ ರೇಷ್ಮೆ ಉದ್ಯಮವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೋವಿಡ್ ಶುರುವಿನ ಸಮಯದಲ್ಲಿ ಪಾತಾಳಕ್ಕೆ ಇಳಿದಿದ್ದ ರೇಷ್ಮೆ ವಹಿವಾಟು ಇದೀಗ ಕೊಂಚ ಸುಧಾರಣೆ ಕಂಡಿದೆ. ರೇಷ್ಮೆ ಗೂಡು ಧಾರಣೆ ಮತ್ತು ರೇಷ್ಮೆ ನೂಲು ರೇಟು ಚೇತರಿಕೆಯಾಗಿದೆ. ಈ ಕುರಿತಾದ ‘ಪವರ್ ಟಿವಿ’ಯ ವಿಶೇಷ ವರದಿಯು ಇಲ್ಲಿದೆ.
ಕೋವಿಡ್ ಶುರುವಾದಾಗಿನಿಂದ ದೇಶದ ರೇಷ್ಮೆ ಕ್ಷೇತ್ರದಲ್ಲಿ ತೀವ್ರ ಹಿನ್ನಡೆಯಾಗಿದೆ. ಮಾರ್ಚ್ ತಿಂಗಳಲ್ಲಿ ಕುಸಿದ ರೇಷ್ಮೆ ಉದ್ಯಮದಲ್ಲಿನ ಆರ್ಥಿಕ ಹೊಡೆತವು ಈಗಲೂ ಮುಂದುವರೆದಿದೆ. ಈ ಮಧ್ಯೆ, ರಾಜ್ಯದ ರೇಷ್ಮೆ ಉದ್ಯಮಕ್ಕೆ ಅನುಕೂಲವಾಗುವ ಕೆಲವು ಆರಂಭಿಕ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಹಾಗಾಗಿ ರೇಷ್ಮೆ ಕ್ಷೇತ್ರದಲ್ಲಿ ತೊಡಗಿಸಿರುವ ಎಲ್ಲರೂ ಕೊಂಚ ಸುಧಾರಿಸಿಕೊಳ್ಳುವ ಸಮಯ ಬಂದಿದೆ.
ಕೋವಿಡ್ ಶುರುವಾದ ಸಂದರ್ಭದಲ್ಲಿ ಒಂದು ಕೆಜಿ ರೇಷ್ಮೆ ಗೂಡಿಗೆ ಇದ್ದ 450 ರುಪಾಯಿ ಬೆಲೆಯು ನಂತ್ರದ ದಿನಗಳಲ್ಲಿ ಕೇವಲ 250 ರುಪಾಯಿಗೆ ಕುಸಿದಿತ್ತು. ಕೃಷಿ ಕ್ಷೇತ್ರದ ಹಲವು ಬೆಳೆಗಳಿಗೆ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಸರ್ಕಾರವು ರೇಷ್ಮೆ ಉದ್ಯಮವನ್ನು ನಿರ್ಲಕ್ಷ್ಯಿಸಿದ್ದ ಬಗ್ಗೆ ರೇಷ್ಮೆ ಬೆಳೆಗಾರರು ಸಿಟ್ಟಾಗಿದ್ದರು. ರೇಷ್ಮೆ ಕ್ಷೇತ್ರಕ್ಕೆ ಪರಿಹಾರದ ಪ್ಯಾಕೇಜನ್ನು ಕೊಡದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು.
ಇದೀಗ ತಡವಾಗಿಯಾದ್ರೂ ರೇಷ್ಮೆ ಬೆಳೆಗಾರರ ನೆರವಿಗಾಗಿ ರಾಜ್ಯ ಸರ್ಕಾರವು ಧಾವಿಸಿದೆ. ಒಂದು ಕೆಜಿ ಮಿಶ್ರ ತಳಿಯ ರೇಷ್ಮೆ ಗೂಡಿಗೆ 30 ರುಪಾಯಿ ಹಾಗೂ ದ್ವಿತಳಿಯ ರೇಷ್ಮೆ ಗೂಡಿಗೆ 50 ರುಪಾಯಿಗಳ ಪ್ರೋತ್ಸಾಹ ಧನವನ್ನು ಇದೀಗ ಘೋಷಿಸಿದೆ. ಈ ಮಧ್ಯೆ, ಶುಭ ಸಮಾರಂಭಗಳೂ ಸಣ್ಣ ಪ್ರಮಾಣದಲ್ಲಿ ಶುರುವಾಗಿರೋದ್ರಿಂದ ರೇಷ್ಮೆಗೆ ಬೇಡಿಕೆ ಕುದುರುತ್ತಿದೆ. ಇವೆಲ್ಲ ಸಕಾರಣದಿಂದಾಗಿ ಒಂದು ಕೆಜಿ ರೇಷ್ಮೆ ಗೂಡಿನ ಬೆಲೆಯು ಇದೀಗ 350 ಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ, ರೇಷ್ಮೆ ನೂಲು ಬಿಚ್ಚಣಿಕೆದಾರರ ಕಡೆಗೂ ರಾಜ್ಯ ಸರ್ಕಾರ ಗಮನ ಕೊಟ್ಟಿದೆ. ಕಳೆದ ಐದು ತಿಂಗಳಿನಿಂದಲೂ ನೂಲು ಖರೀದಿಸೋರಿಲ್ಲದೆ ಸಂಕಷ್ಟದಲ್ಲಿದ್ದ ಉದ್ಯಮಿಗಳ ನೆರವಿಗೆ ಸರ್ಕಾರವು ಧಾವಿಸಿದೆ. ರಾಜ್ಯದ ರೇಷ್ಮೆ ವಿನಿಮಯ ಕೇಂದ್ರಗಳ ಮೂಲಕ 12 ಕೋಟಿ ರುಪಾಯಿಗಳ ನೂಲನ್ನೂ ಸರ್ಕಾರವೇ ಖರೀದಿಸಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.