ವಾಷಿಂಗ್ಟನ್: ಅಮೆರಿಕಾದ ಬ್ಯಾಸ್ಕೆಟ್ ಬಾಲ್ ದಂತಕಥೆ ಕೋಬ್ ಬ್ರ್ಯಾಂಟ್ ಹಾಗೂ ಅವರ 13 ವರ್ಷದ ಪುತ್ರಿ ಗಿಯಾನ್ನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಭಾನುವಾರ ಲಾಸ್ ಏಂಜಲೀಸ್ನಿಂದ 30 ಮೈಲಿ ದೂರವಿರುವ ಕಲಬಾಸಾಸ್ನಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಸುಮಾರು 160 ಕಿಲೋಮೀಟರ್ ಸ್ಪೀಡ್ನಲ್ಲಿ ಹೆಲಿಕಾಪ್ಟರ್ ಚಲಿಸುತ್ತಿದ್ದು, ಭಾರಿ ಪ್ರಮಾಣದಲ್ಲಿ ಮಂಜು ಆವರಿಸಿದ್ದರಿಂದ ದಾರಿ ಕಾಣದೆ ಹೆಲಿಕಾಪ್ಟರ್ ಬೆಟ್ಟಕ್ಕೆ ಅಪ್ಪಳಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹೆಲಿಕಾಪ್ಟರ್ನಲ್ಲಿದ್ದ 800 ಪೌಂಡ್ ಇಂಧನದಿಂದಾಗಿ ಸುಟ್ಟು ಭಸ್ಮವಾಗಿದೆ. ಕೋಬ್ ಬ್ರ್ಯಾಂಟ್ ಹಾಗೂ ಅವರ ಮಗಳ ಸೇರಿದಂತೆ 10 ಮಂದಿ ಪ್ರಯಾಣಿಸುತ್ತಿದ್ದರು. ಅವರ ಇನ್ನೂ ಗುರುತು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.
41 ವರ್ಷದ ಕೋಬ್ ಬ್ರ್ಯಾಂಟ್ ಐದು ಬಾರಿ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಚಾಂಪಿಯನ್ ಶಿಪ್ ಪಡೆದ ಕೀರ್ತಿಗೆ ಭಾಜನರಾಗಿದ್ದರು. 2018ರಲ್ಲಿ ಬ್ರ್ಯಾಂಟ್ ನಿವೃತ್ತಿ ಘೋಷಿಸಿದ್ದರು.