Friday, September 30, 2022
Powertv Logo
Homeವಿದೇಶಟೀಮ್ ಇಂಡಿಯಾ ನಾಯಕನೂ ಆದ ಕನ್ನಡಿಗ ಕೆ.ಎಲ್ ರಾಹುಲ್..! ದ್ರಾವಿಡ್ ಹಾದಿಯಲ್ಲಿ ಕರಾವಳಿ ಕುವರ..!

ಟೀಮ್ ಇಂಡಿಯಾ ನಾಯಕನೂ ಆದ ಕನ್ನಡಿಗ ಕೆ.ಎಲ್ ರಾಹುಲ್..! ದ್ರಾವಿಡ್ ಹಾದಿಯಲ್ಲಿ ಕರಾವಳಿ ಕುವರ..!

ಮೌಂಟ್​​ ಮಾಂಗ್ನುಯಿ : ವಿಶ್ವಕ್ರಿಕೆಟ್ ಕಂಡ ಸರ್ವ ಶ್ರೇಷ್ಠ ಆಟಗಾರ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಹಾದಿಯಲ್ಲಿ ಮತ್ತೊಬ್ಬ ಕನ್ನಡಿಗ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವಿಶೇಷವೂ, ಕಾಕತಾಳಿಯವೂ ಎಂಬಂತೆ ಆ ಯುವ ಆಟಗಾರನ ಹೆಸರೂ ಕೂಡ ರಾಹುಲ್..!
ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಖಾಡೆಮಿಯ ನಿರ್ದೇಶಕರಾಗಿರೋ ರಾಹುಲ್ ದ್ರಾವಿಡ್ 15 ವರ್ಷಗಳ ಕಾಲ ಟೀಮ್ ಇಂಡಿಯಾದ ಆಪತ್ಬಾಂಧವರಾಗಿದ್ದವರು. ದಿ ವಾಲ್ ಎಂದೇ ಖ್ಯಾತರಾಗಿರೋ ದ್ರಾವಿಡ್​ ತಂಡ ಬಯಸಿದ್ದೆಲ್ಲವನ್ನೂ ಧಾರೆ ಎರೆದ ಅದ್ಭುತ ಕ್ರಿಕೆಟಿಗ.
ಓಪನ್ನಿಂಗ್ ಬೇಕೆಂದಾಗ ಓಪನರ್ ಆಗಿ, ಒನ್​ಡೌನ್ ಬೇಕೆಂದಾಗ ಒನ್​ಡೌನ್ ಬ್ಯಾಟ್ಸ್​ಮನ್​ ಆಗಿ, 4, 5, 6, 7 ಹೀಗೆ ಯಾವ ಕ್ರಮಾಂಕಕ್ಕೆ ಅವಶ್ಯಕತೆ ಇದೆಯೋ ಆ ಎಲ್ಲಾ ಕ್ರಮಾಂಕದಲ್ಲೂ ಕ್ರೀಸ್​ಗಿಳಿದು ಜವಬ್ದಾರಿ ನಿಭಾಯಿಸಿದ ಹಿರಿಮೆ ದ್ರಾವಿಡ್ ಅವರದ್ದು. ತಂಡಕ್ಕೆ ಇನ್ನೊಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್ ಬೇಕು, ಸಮರ್ಥ ವಿಕೆಟ್ ಕೀಪರ್ ಇಲ್ಲ ಎಂದಾಗ ವಿಕೆಟ್ ಕೀಪರ್ ಆಗಿ ತಂಡಕ್ಕೆ ಬಲ ತಂದವರು ದ್ರಾವಿಡ್​..! ಬೌಲಿಂಗ್ ಕೂಡ ಮಾಡಿದ ಉದಾಹರಣೆಯೂ ಇದೆ..! ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್​ ಆಗಿ, ವಿಕೆಟ್ ಕೀಪರ್ ಆಗಿ, ಒಳ್ಳೆಯ ಫೀಲ್ಡರ್ ಆಗಿ ವಿಶ್ವ ಕ್ರಿಕೆಟಲ್ಲಿ ಮಿಂಚಿದ ಕನ್ನಡಿಗ ದ್ರಾವಿಡ್​ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿಯೂ ಮಹತ್ತರ ಹೊಣೆಗಾರಿಕೆಯನ್ನು ನಿಭಾಯಿಸಿದ್ರು.
ದ್ರಾವಿಡ್ ನಿವೃತ್ತಿ ಬಳಿಕ ಆ ಸ್ಥಾನ ತುಂಬ ಬಲ್ಲ ಒಬ್ಬನೇ ಒಬ್ಬ ಆಟಗಾರ ಸಿಕ್ಕಿರಲಿಲ್ಲ. ಆಗೊಮ್ಮೆ – ಹೀಗೊಮ್ಮೆ ಕೆಲವರ ಹೆಸರು ಕೇಳಿಬಂದಿತ್ತಾದರೂ ಅವರಾರು ದ್ರಾವಿಡ್ ಸ್ಥಾನದ ಹೆಸರಲ್ಲಿ ಗಟ್ಟಿಯಾಗಿ ನಿಂತಿಲ್ಲ. ಟೆಸ್ಟ್​ ಗೆ ಸೈ ಎನಿಸಿಕೊಂಡವರು ಒಡಿಐಗೆ, ಒಡಿಐನಲ್ಲಿ ಸದ್ದು ಮಾಡಿದವ್ರು ಟೆಸ್ಟ್​ಗೆ ಒಗ್ಗಿಕೊಂಡಿಲ್ಲ. ಆದರೆ, ಈಗ ಮತ್ತೊಬ್ಬ ಹೆಮ್ಮೆಯ ಕನ್ನಡಿಗನೇ ದ್ರಾವಿಡ್ ಹಾದಿಯಲ್ಲಿ ತಂಡಕ್ಕೆ ಬಹು ದೊಡ್ಡ ಆಸ್ತಿಯಾಗುತ್ತಿದ್ದಾರೆ.
ಹೌದು… ಕೆ.ಎಲ್ ರಾಹುಲ್ ಇದೀಗ ದ್ರಾವಿಡ್ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಒಬ್ಬ ಬ್ಯಾಟ್ಸ್​ಮನ್ ಆಗಿ ಯಾವ್ದೇ ಕ್ರಮಾಂಕದಲ್ಲೂ ಬ್ಯಾಟ್​ ಬೀಸಲು ಸಿದ್ಧ ಅಂತ ಈಗಾಗಲೇ ಪ್ರೂವ್ ಮಾಡಿರೋ ರಾಹುಲ್, ಪರಿಪೂರ್ಣ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಬಹು ದೊಡ್ಡ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡರಲ್ಲೂ ಜಬರ್ದಸ್ತ್​ ಪರ್ಫಾರ್ಮೆನ್ಸ್ ನೀಡ್ತಿರೋ ರಾಹುಲ್ ಇದೀಗ ಟೀಮ್ ಇಂಡಿಯಾದ ನಾಯಕನೂ ಆಗಿದ್ದಾರೆ…!
ಮೌಂಟ್​​ ಮಾಂಗ್ನುಯಿನಲ್ಲಿ ನಡೆಯುತ್ತಿರೋ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ರಾಹುಲ್ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ಸಾರಥ್ಯವಹಿಸಿಕೊಂಡಿದ್ದ ಹಿಟ್​ ಮ್ಯಾನ್ ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರಿಂದ ಭಾರತದ ಫೀಲ್ಡಿಂಗ್ ವೇಳೆ ತಂಡದ ಬದಲಿ ನಾಯಕನಾಗಿ ಜವಬ್ದಾರಿ ಹೊತ್ತಿದ್ದಾರೆ ಕರಾವಳಿ ಕುವರ ರಾಹುಲ್ ..! ಇದರೊಂದಿಗೆ ರಾಹುಲ್ ಆಪತ್ಬಾಂಧವರಾಗಿದ್ದು, ಯಾವ ಹೊಣೆ ನಿಭಾಯಿಸಲು ತಾನು ರೆಡಿಯಿದ್ದೇನೆ ಅಂತ ಸಾರಿದ್ದಾರೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments