ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ವರ್ಲ್ಡ್ವೈಡ್ ಸೂಪರ್ ಡೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ತನ್ನದೇ ಹವಾ ಸೃಷ್ಟಿಸಿದೆ. ಒಂದ್ಕಡೆ ರಾಕಿ ಭಾಯ್ ವರ್ಲ್ಡ್ ಈಸ್ ಮೈ ಟೆರಿಟರಿ ಅಂತಿದ್ರೆ, ಮತ್ತೊಂದ್ಕಡೆ ಕೆಜಿಎಫ್ 2 ಸಿನಿಮಾದ ಖಜಾನೆ ತುಂಬಿ, ಹೊಸ ದಾಖಲೆ ಬರೆದಿದೆ.
ಕೆಜಿಎಫ್, ಕೆಜಿಎಫ್, ಕೆಜಿಎಫ್… ಸದ್ಯ ವಿಶ್ವದೆಲ್ಲೆಡೆ ಮೊಳಗುತ್ತಿರೋ ಏಕೈಕ ಸಿನಿಮಾ. ಏಪ್ರಿಲ್ 14ರಂದು ತೆರೆಗಪ್ಪಳಿಸಿದ ಕನ್ನಡದ ಈ ಪ್ಯಾನ್ ಇಂಡಿಯಾ ಸಿನಿಮಾ ಸದ್ಯ ನಿರೀಕ್ಷೆಗೂ ಮೀರಿದ ಸಕ್ಸಸ್ ಕಂಡಿದೆ. ರಾಕಿ ಭಾಯ್ ಸ್ಟೈಲಿಶ್ ಲುಕ್, ಜಬರ್ದಸ್ತ್ ಪರ್ಫಾರ್ಮೆನ್ಸ್ ಕಂಡು ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಇನ್ನೂ ನಾಯಕಿ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಬಹುತೇಕ ಎಲ್ಲಾ ಪಾತ್ರಗಳು ನೋಡುಗರ ಗಮನ ಸೆಳೆದ್ರೆ, ಹಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತಿರೋ ಸಿನಿಮಾದ ಮೇಕಿಂಗ್ ಕೂಡ ಬಿಗ್ ಸ್ಕ್ರೀನ್ನಲ್ಲಿ ಮ್ಯಾಜಿಕ್ ಮಾಡ್ತಿದೆ.
ಪ್ರಶಾಂತ್ ನೀಲ್ ಹಾಗೂ ತಂಡದ ಸುಮಾರು ಮೂರು ವರ್ಷಗಳ ಪರಿಶ್ರಮಕ್ಕೆ ಇದೀಗ ತಕ್ಕ ಪ್ರತಿಫಲ ಸಿಕ್ಕಿದೆ. ಈ ಚಿತ್ರ ಕೇವಲ ಪ್ರೇಕ್ಷಕರ ಮನಸ್ಸು ಗೆದ್ದಿರೋದಷ್ಟೇ ಅಲ್ಲದೆ ಬಾಕ್ಸ್ ಆಫಿಸ್ನ್ನೂ ಕೊಳ್ಳೆ ಹೊಡೀತಿದೆ. ಕೆಜಿಎಫ್ 2 ಸಿನಿಮಾ ಬಿಡುಗಡೆಯಾದ ದಿನದಿಂದ್ಲೂ ಕಲೆಕ್ಷನ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಬರ್ತಿದೆ.
ರಿಲೀಸ್ ಆದ ಮೊದಲ ದಿನವೇ 165 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ ಕೆಜಿಎಫ್ 2 ಕೇವಲ ನಾಲ್ಕೇ ದಿನಗಳಲ್ಲಿ 546 ಕೋಟಿಯನ್ನ ಬಾಚಿಕೊಂಡು ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಸ್ವತಃ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ. ಕೆಜಿಎಫ್ 2 ಸಿನಿಮಾ ರಿಲೀಸ್ ಆದ ಬಳಿಕ ನಾಲ್ಕು ದಿನಗಳು ಸಾಲು ಸಾಲು ರಜೆ ಇದ್ದದ್ದು ರಾಕಿ ಭಾಯ್ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೆ ಕೆಜಿಎಫ್ ಚಾಪ್ಟರ್ 1 ಸೃಷ್ಟಿಸಿದ್ದ ಕುತೂಹಲದಿಂದ ಬಹುತೇಕ ಸಿನಿಪ್ರಿಯರು ಈ ಚಿತ್ರವನ್ನು ಬಿಗ್ ಸ್ಕ್ರೀನ್ನಲ್ಲಿ ಕಣ್ತುಂಬಿಕೊಂಡು ಖುಷಿ ಪಡ್ತಿದ್ದಾರೆ.
ಕೇವಲ ರಾಕಿಂಗ್ ಸ್ಟಾರ್ ಫ್ಯಾನ್ಸ್ ಮಾತ್ರವಲ್ಲದೆ, ಎಲ್ಲಾ ವರ್ಗದ ಪ್ರೇಕ್ಷಕರೂ ಥಿಯೇಟರ್ ಗಳಿಗೆ ಬಂದು ಕೆಜಿಎಫ್ 2 ಸಿನಿಮಾ ನೋಡಿ ಖುಷಿ ಪಡ್ತಿದ್ದಾರೆ. ಅಲ್ಲದೆ ಯಶ್ ಅಭಿಮಾನಿಗಳಂತೂ ಸ್ನೇಹಿತರ ಜೊತೆ, ತಮ್ಮ ಫ್ಯಾಮಿಲಿ ಜೊತೆ ಹೀಗೆ ಎರಡು ಮೂರು ಬಾರಿ ಚಿತ್ರಮಂದಿಗಳಲ್ಲಿ ಟಿಕೆಟ್ ಪಡೆದು ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಕೆಜಿಎಫ್ 2 ಸಿನಿಮಾ ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ 500 ಕೋಟಿ ಕ್ಲಬ್ ಸೇರಲು ಸಾಧ್ಯವಾಗಿದೆ.
ಕೆಜಿಎಫ್ 2 ಚಿತ್ರ ಮೊದಲ ದಿನ ಭಾರತದಲ್ಲಿ 134.5 ಕೋಟಿ ಹಾಗೂ ಎರಡನೇ ದಿನ 240 ಕೋಟಿ ಗಳಿಸಿತ್ತು. ಇನ್ನೂ ವರ್ಲ್ಡ್ವೈಡ್ ಫಸ್ಟ್ ಡೇ 165.37, ಎರಡನೇ ದಿನ, 139.25, ಮೂರನೇ ದಿನ 115.08, ನಾಲ್ಕನೇ ದಿನ 132.13 ಕೋಟಿಯನ್ನು ಲೂಟಿ ಮಾಡಿದೆ. ಹೀಗೆ ಫಸ್ಟ್ ವೀಕೆಂಡ್ ಕಲೆಕ್ಷನ್ನಲ್ಲಿ ಧೂಳ್ ಎಬ್ಬಿಸಿರೋ ಕೆಜಿಎಫ್ 2 ಸಿನಿಮಾ ಎರಡನೇ ವಾರದ ಆರಂಭದಲ್ಲೂ 60 ಕೋಟಿಯನ್ನು ಬಾಚಿಕೊಂಡು ತನ್ನ ಯಶಸ್ವೀ ಓಟವನ್ನು ಮುಂದುವರೆಸಿದೆ.
ಅಂದಹಾಗೆ ಕೆಜಿಎಫ್ 2 ಸಿನಿಮಾ ಕರುನಾಡಿನಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಗಳಿಕೆಯಲ್ಲಿ ದಿಗ್ವಿಜಯ ಸಾಧಿಸಿದೆ. ಯೆಸ್, ಬಿಗ್ ಬಜೆಟ್ನ ಕೆಜಿಎಫ್ 2 ಚಿತ್ರವನ್ನು ಕಂಡು ಪರಭಾಷಿಗರೂ ಸಹ ಫುಲ್ ಫಿದಾ ಆಗಿದ್ದು, ಸಲಾಮ್ ರಾಕಿ ಭಾಯ್ ಅನ್ತಿದ್ದಾರೆ. ಬಾಲಿವುಡ್ನಲ್ಲಿ ರಾಕಿ ಭಾಯ್ ಸಿನಿಮಾ ಐದು ದಿನಗಳಲ್ಲಿ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮೂಲಕ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿ ಅಲ್ಲಿನ ಸಿನಿ ಮಂದಿಯನ್ನು ದಂಗಾಗುವಂತೆ ಮಾಡಿದೆ.
ನಾಲ್ಕು ದಿನಗಳಲ್ಲಿ 500 ಕ್ರೋರ್ ಕ್ಲಬ್ ಸೇರಿರೋ ಕೆಜಿಎಫ್ 2 ವಿಶ್ವದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಅನ್ನೋದು ಮತ್ತೊಂದು ಸಂತಸ ವಿಷ್ಯ. ಒಟ್ಟಾರೆ ರಾಕಿ ಭಾಯ್ ತೂಫಾನ್ಗೆ ಕೆಜಿಎಫ್ ಖಜಾನೆ ಭರ್ತಿಯಾಗಿದ್ದು, ಬುಲೆಟ್ಗಳಂತೆ ರೆಕಾರ್ಡ್ಗಳು ಉರುಳುತ್ತಿವೆ. ಎನಿವೇ ಇನ್ನೂ ಮುಂದಿನ ದಿನಗಳಲ್ಲಿ ಕೆಜಿಎಫ್ 2 ಸಿನಿಮಾ ಏನೆಲ್ಲಾ ಹೊಸ ದಾಖಲೆಗಳಿಗೆ ಸಾಕ್ಷಿಯಾಗಲಿದ್ಯೋ ನೋಡ್ಬೇಕು.
ಚಂದನ.ಎಸ್, ಫಿಲ್ಮ್ ಬ್ಯೂರೋ, ಪವರ್ ಟಿವಿ