ಜಗಮೆಚ್ಚೋ ಸಿನಿಮಾ ಮಾಡಿದ್ರೂ ತನಗೆ ತೃಪ್ತಿ ನೀಡಿಲ್ಲ ಅಂತಾರೆ ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್. ಅದೊಂದು ಕನಸನ್ನು ನನಸು ಮಾಡೋಕೆ ಅಂತ ಹಗಲಿರುಳು ಪರಿತಪಿಸುತ್ತಿದ್ದಾರೆ.
ಸದ್ಯ ಇಡೀ ವಿಶ್ವವೇ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಬಗ್ಗೆ ಮಾತಾಡ್ತಿದೆ. ಆ ಸಿನಿಮಾ ಮಾಡಿರೋ ದಾಖಲೆಗಳನ್ನು ಹಾಡಿ, ಹೊಗಳಿ, ಕೊಂಡಾಡ್ತಿದೆ. ಈ ಎಲ್ಲಾ ದಾಖಲೆಗಳ ಹಿಂದಿನ ಸಾರಥಿ ಪ್ರಶಾಂತ್ ನೀಲ್. ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಳಿಕ ಪ್ರಶಾಂತ್ ನೀಲ್ ಹೆಸರು ಜಗದಗಲ ಸದ್ದು ಮಾಡ್ತಿದೆ. ಮತ್ತಷ್ಟು ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರೋ ನೀಲ್, ಈಗಂತೂ ಸಿಕ್ಕಾಪಟ್ಟೆ ಬ್ಯುಸಿ.
ರೋರಿಂಗ್ ಸ್ಟಾರ್ ಶ್ರೀ ಮುರಳಿಗೆ ಉಗ್ರಂ ಅಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟ ಪ್ರಶಾಂತ್ ನೀಲ್ ಆ ಬಳಿಕ ಕೆಜಿಎಫ್ ಚಾಪ್ಟರ್1 ಹಾಗೂ ಚಾಪ್ಟರ್ 2 ಸಿನಿಮಾಗಳನ್ನ ಮಾಡಿದ್ರು. ಕೇವಲ ಮೂರೇ ಸಿನಿಮಾ ಮೂಲಕ ಸೆನ್ಸೇಷನಲ್ ಸ್ಟಾರ್ ಡೈರೆಕ್ಟರ್ ಆಗಿ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ.
ಉಗ್ರಂ ಸಿನಿಮಾದಿಂದಾಗಿ ಶ್ರೀಮುರಳಿ ಸಿನಿ ಕೆರಿಯರ್ಗೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಸಿನಿಮಾ ಸೂಪರ್ ಹಿಟ್ ಆದ್ರೂ, ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ನೀಲ್ಗೆ ಕೊಂಚ ಅಸಮಾಧಾನವಿತ್ತು. ಅದೇ ಬೇಸರದಲ್ಲೇ ಛಲದಿಂದ ಕೆಜಿಎಫ್ ಸಿನಿಮಾ ಮಾಡಿದ್ರು. ಚಿತ್ರದ ಎರಡೂ ಚಾಪ್ಟರ್ಸ್ ಕೂಡ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿವೆ.
ಕೆಜಿಎಫ್ 2 ಬಳಿಕ ಇದೀಗ ನೀಲ್ ಡಾರ್ಲಿಂಗ್ ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾ ಮಾಡ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯೇ ನಿರ್ಮಾಣ ಮಾಡ್ತಿರೋ ಈ ಚಿತ್ರದ ಬಗ್ಗೆ ಬಹುದೊಡ್ಡ ನಿರೀಕ್ಷೆ ಇದೆ. ಕೆಜಿಎಫ್ 2 ಹಿಟ್ ಬಳಿಕ ಟಾಲಿವುಡ್ ಆ್ಯಕ್ಟರ್ಸ್ ನೀಲ್ ಹಿಂದೆ ಬಿದ್ದಿದ್ದಾರೆ. ಪ್ರಶಾಂತ್ ನೀಲ್ ಕೂಡ ತೆಲುಗು ನಟರ ಸಿನಿಮಾಗಳನ್ನು ಒಪ್ಪಿಕೊಳ್ತಿದ್ದಾರೆ. ಈಗಾಗ್ಲೇ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜಾಗೆ ನೀಲ್ ಡೈರೆಕ್ಟ್ ಮಾಡೋದು ಪಕ್ಕಾ ಆಗಿದೆ.
ಸಲಾರ್ ಸಿನಿಮಾ ಬಳಿಕ ಜೂನಿಯರ್ ಎನ್ಟಿಆರ್ ಚಿತ್ರವನ್ನು ಕೈಗೆತ್ತಿಕೊಳ್ಳಲಿರೋ ನೀಲ್, ನಂತ್ರ ರಾಮ್ ಚರಣ್ಗೆ ಌಕ್ಷನ್ ಕಟ್ ಹೇಳಲಿದ್ದಾರೆ. ಈ ಮಧ್ಯೆ ಖಾಸಗಿ ಸಂದರ್ಶನವೊಂದರಲ್ಲಿ ತನ್ನದೊಂದು ಮಹತ್ವದ ಕನಸಿದೆ ಅಂತ ಬಾಯಿ ಬಿಟ್ಟಿದ್ದಾರೆ ನೀಲ್. ಅರೇ ಡೈರೆಕ್ಟರ್ಸ್ ಎಲ್ಲಾ ನೀಲ್ ತರಹ ಒಂದು ಸಿನಿಮಾ ಮಾಡ್ಬೇಕು ಅಂತ ಕನಸು ಕಾಣ್ತಿದ್ರೆ, ಇವ್ರಿಗೆ ಮತ್ತಿನ್ನೇನು ಕನಸು ಅಂತ ನೀವು ಅಂದುಕೊಳ್ಳಬಹುದು.
ಅದು ಸೂಪರ್ ಸ್ಟಾರ್ ರಜಿನೀಕಾಂತ್ಗೆ ಆ್ಯಕ್ಷನ್ ಕಟ್ ಹೇಳೋದಾ..? ಅಥ್ವಾ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ಗೆ ನಿರ್ದೇಶನ ಮಾಡೋದಾ..? ಅಲ್ಲದೆ, ಹಾಲಿವುಡ್ ಸಿನಿಮಾ ಮಾಡೋದಾ ಅನ್ನೋ ಚರ್ಚೆಗಳು ಶುರುವಾಗಿವೆ. ಇಡೀ ಜಗತ್ತೇ ಮೆಚ್ಚುವಂತಹ ಸಿನಿಮಾಗಳನ್ನು ಮಾಡಿದ್ರೂ, ಇನ್ನಷ್ಟು ಸ್ಟಾರ್ ನಟರ ಸಿನಿಮಾಗಳನ್ನು ಮಾಡುವ ಅವಕಾಶವಿದ್ರೂ ಅದ್ರಿಂದ ನೀಲ್ ಅವ್ರಿಗೆ ತೃಪ್ತಿ ಆಗಿಲ್ಲ ಅನ್ನೋದು ಖಾತರಿ ಆಗಿದೆ.
650 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್ ಮಾಡಿ, ಸಾವಿರ ಕೋಟಿಯತ್ತ ಮುನ್ನುಗ್ಗುತ್ತಿರೋ ಕೆಜಿಎಫ್ ಚಾಪ್ಟರ್- 2 ಸಕ್ಸಸ್ನ ಎಂಜಾಯ್ ಮಾಡೋದು ಬಿಟ್ಟು, ಕಂಡ ಕನಸಿನ ಬಗ್ಗೆ ಕನವರಿಸ್ತಿರೋ ನೀಲ್ ಪ್ಯಾಷನ್ನ ಮೆಚ್ಚಲೇಬೇಕು. ಒಟ್ಟಾರೆ ಅಂದುಕೊಂಡಿದ್ದನ್ನ ಸಾಧಿಸಿ ತೀರೋ ಅಂತಹ ಹಠವಾದಿ, ಕನಸುಗಾರ ಪ್ರಶಾಂತ್ ನೀಲ್ ಕಂಡಿರೋ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.
ಚಂದನ.ಎಸ್, ಫಿಲ್ಮ್ ಬ್ಯೂರೋ, ಪವರ್ ಟಿವಿ