ಕೊಚ್ಚಿ: ಬಯಸಿ ಬರುವುದಕ್ಕಿಂತ ಬಯಸದೇ ಬಂದ ಭಾಗ್ಯದಲ್ಲಿ ಖುಷಿ ಜಾಸ್ತಿ. ಅದೃಷ್ಟ ಅನ್ನೋದು ಹಾಗೇನೆ ಕೆಲವೊಬ್ಬರನ್ನು ತಾನೇ ತಾನಾಗಿ ಹುಡುಕಿಕೊಂಡು ಬರುತ್ತದೆ. ಅದು ಆತನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಇಲ್ಲಿ ಆಗಿದ್ದು ಅಷ್ಟೆ. ಕೇರಳದ ಕೂಲಿ ಕಾರ್ಮಿಕರೊಬ್ಬರಿಗೆ ದಿಢೀರ್ ಅಂತ ಅದೃಷ್ಟ ದೇವತೆ ಒಲಿದಿದ್ದಾರೆ..! ಬ್ಯಾಂಕ್ನಲ್ಲಿ ಸಾಲ ಮಾಡಲು ಹೊರಟಿದ್ದ ಆ ವ್ಯಕ್ತಿ ನೋಡು ನೋಡುತ್ತಿದ್ದಂತೆ 12 ಕೋಟಿ ಒಡೆಯರಾಗಿ ಬಿಟ್ಟಿದ್ದಾರೆ.
ಕೇರಳದ ಪುರಳಿಮಲ ಬಳಿ ರಬ್ಬರ್ ಟ್ಯಾಪಿಂಗ್ ಮಾಡಿ ಜೀವನ ಸಾಗಿಸುತ್ತಿದ್ದ ಪೂರನ್ನನ್ ರಾಜನ್ ಲಾಟರಿಯಿಂದ ಕೋಟ್ಯಧಿಪತಿಯಾದವರು. ರಾಜನ್ ಅವರಿಗೆ ಲಾಟರಿ ಟಿಕೆಟನ್ನು ಖರೀದಿಸುವುದು ಚಾಳಿ. ಆಗಾಗ ಲಾಟರಿ ಟಿಕೆಟನ್ನು ಖರೀದಿಸುತ್ತಿದ್ದರು. ಹಾಗೇಯೇ ಕಳೆದ ಕ್ರಿಸ್ಮಸ್ ಹಾಗೂ ಹೊಸವರ್ಷದ ಹಿನ್ನೆಲೆ ಕೂತುಪಾರಂಬದ ಪಯ್ಯನ್ ಏಜೆನ್ಸಿಯಲ್ಲಿ 300 ರೂಪಾಯಿ ನೀಡಿ ವಿಶೇಷ ಲಾಟರಿ ಟಿಕೆಟನ್ನು ಖರೀದಿಸಿದ್ದರು.
ಇನ್ನು ಕೆಲವು ದಿನಗಳ ಹಿಂದೆ ಮನೆ ಕಟ್ಟುವ ಸಲುವಾಗಿ ಬ್ಯಾಂಕ್ನಿಂದ ಸಾಲ ಪಡೆಯಲು ನಿರ್ಧರಿಸಿದ್ದರು. ಆದರೆ ಮಗಳ ಮದುವೆಯನ್ನು ಮಾಡಬೇಕಾಗಿದ್ದರಿಂದ ಸಾಲದ ಹಣದಲ್ಲಿ ಮಗಳ ಮದುವೆಯ ಯೋಚನೆಯನ್ನು ಮಾಡಿದ್ದರು. ಆದರೆ ರಾಜನ್ ಸಾಲಕ್ಕಾಗಿ ಬ್ಯಾಂಕ್ ಕದ ತಟ್ಟುವ ಮೊದಲೇ ಲಾಟರಿ ಟಿಕೆಟ್ ಕೂತುಪರಂಬ ಊರಿಗೆ ಸಿಕ್ಕಿರುವ ಸುದ್ದಿ ತಿಳಿದಿದೆ. ಆಗ ರಾಜನ್ ಏಜೆನ್ಸಿಗೆ ಹೋಗಿ ಬಹುಮಾನ ಬಂದ ಲಾಟರಿ ನಂಬರ್ ಚೆಕ್ ಮಾಡಿದಾಗ ತಾನೂ ಪಡೆದಿರುವ ಟಿಕೆಟ್ ಹಾಗೂ ಬಹುಮಾನ ಬಂದಿರುವ ಟಿಕೆಟ್ ನಂಬರ್ ಒಂದೇ ಆಗಿರುತ್ತದೆ! ಅದರಿಂದ ಅವರಿಗೆ ಅಚ್ಚರಿಯ ಜೊತೆಗೆ ಸಂತಸವಾಗಿದೆ.
12 ಕೋಟಿ ರೂಪಾಯಿಯಲ್ಲಿ ಏಜೆನ್ಸಿ ಕಮಿಷನ್ ಹಾಗೂ ತೆರಿಗೆ ಬಿಟ್ಟು ಸುಮಾರು 7.2 ಕೋಟಿ ರೂಪಾಯಿ ರಾಜನ್ ಕೈ ಸೇರಲಿದೆ. ಇನ್ನು ಲಾಟರಿಯಲ್ಲಿ ಬಂದ ದುಡ್ಡಲ್ಲಿ ಅರ್ಧಕ್ಕೆ ನಿಂತಿರುವ ತನ್ನ ಮನೆಯ ಕೆಲಸಗಳನ್ನು ಪೂರ್ಣಗೊಳಿಸಿ ನಂತರ ಮಗಳ ಮದುವೆಯನ್ನು ಮಾಡುವ ಯೋಚನೆಯನ್ನು ಮಾಡಿದ್ದಾರೆ. ಅಷ್ಟೆ ಅಲ್ಲದೆ ಉಳಿದ ದುಡ್ಡನ್ನು ತನ್ನ ಸ್ವಂತಕ್ಕೆ ಬಳಸಿಕೊಳ್ಳದೆ ಕಷ್ಟದಲ್ಲಿರುವ ಹಾಗೂ ಹಣದ ತೀವ್ರ ಅವಶ್ಯಕತೆಯಿರುವವರಿಗೆ ನೀಡುವುದಾಗಿ ಹೇಳಿದ್ದಾರೆ.