ಬೆಂಗಳೂರು : ರಾಜ್ಯ ಸರ್ಕಾರ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದೆ ಅಂತ ಮಾಜಿ ಮುಖ್ಯಮಂತ್ರಿ , ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಕಿಡಿಕಾರಿದ್ದಾರೆ. ತಾವು ಈ ಹಿಂದೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಮೇತ ಸರ್ಕಾರದ ವಿರುದ್ಧ ಹರಿಹಾಯ್ದಿರೋ ಅವರು, ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ 2 ಸಾವಿರ ಕೋಟಿ ರೂ ಭ್ರಷ್ಟಾಚಾರ ಎಸಗಿದೆ ಅಂತ ಆರೋಪಿಸಿದ್ದಾರೆ.
ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಿದ ಅವರು, ಹಿಂದೆ ತಾನು ಆರೋಪಿಸಿದ್ದಕ್ಕಿಂತಲೂ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ವಿವಿಧ ಮೂಲಗಳಿಂದ ನಾವು ಕಲೆ ಹಾಕಿದ ಮಾಹಿತಿ , ದಾಖಲೆಗಳ ಪ್ರಕಾರ, ಬೇರೆ ಬೇರೆ ಇಲಾಖೆಗಳಿಂದ ಕೊರೋನಾಗೆಂದು 4, 157 ಕೋಟಿ ರೂ ಖರ್ಚಾಗಿದೆ. ಆದ್ರೆ ಶ್ರೀರಾಮುಲು 324 ಕೋಟಿ ರೂ ಖರ್ಚಾಗಿದೆ ಅಂತಾರೆ. ಅಶ್ವಥ್ ನಾರಾಯಣ ಬೇರೆ ಲೆಕ್ಕ ಹೇಳ್ತಿದ್ದಾರೆ. ಇಲ್ಲಿ ಸುಳ್ಳು ಹೇಳ್ತಿರೋರು ಯಾರು? ಕನಿಷ್ಠ 2 ಸಾವಿರ ಕೋಟಿ ರೂ ಭ್ರಷ್ಟಾಚಾರ ಆಗಿದೆ ಅಂತ ಆರೋಪಗಳ ಸುರಿಮಳೆಗೈದರು.
ವೆಂಟಿಲೇಟರ್ಗೆ 4 ಲಕ್ಷ ರೂನಂತೆ ಕೇಂದ್ರ ಸರ್ಕಾರ ಖರೀದಿಸಿದೆ. ಕೇಂದ್ರ ಒಟ್ಟು 2 ಸಾವಿರ ಕೋಟಿ ಹಣ ಖರ್ಚು ಮಾಡಿ 50 ಸಾವಿರ ವೆಂಟಿಲೇಟರ್ಸ್ ಖರೀದಿಸಿದೆ. ತಮಿಳುನಾಡು 4.78 ಲಕ್ಷಕೊಟ್ಟು ವೆಂಟಿಲೇಟರ್ ಖರೀದಿಸಿದೆ. ಆದ್ರೆ ಕರ್ನಾಟಕ ಸರ್ಕಾರ 18 ಲಕ್ಷ ರೂವರೆಗೂ ಹಣ ನೀಡಿ ವೆಂಟಿಲೇಟರ್ಗಳನ್ನು ಖರೀದಿಸಿದೆ. ಮಾರ್ಚ್ 22ರಂದು 5.6 ಲಕ್ಷ ರೂನಂತೆ ವೆಂಟಿಲೇಟರ್ ಖರೀದಿಸಿದೆ. ನಂತರ ಮತ್ತೊಮ್ಮೆ 12.32 ಲಕ್ಷ ರೂಗಳಂತೆ ಖರೀದಿಸಿದೆ. ಏಪ್ರಿಲ್ 23ರಂದು 18.23 ಲಕ್ಷದಂತೆ ಕೊಂಡುಕೊಂಡಿದ್ದಾರೆಂದು ಸಿದ್ದರಾಮ್ಯ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ಪಿಪಿಇ ಕಿಟ್ ವಿಚಾರದಲ್ಲೂ ಭಾರಿ ಅವ್ಯವಹಾರ ನಡೆದಿದೆ. ಮಾರುಕಟ್ಟೆಯಲ್ಲಿ ಒಂದು ಕಿಟ್ಗೆ 330 ರೂಪಾಯಿ ಇದೆ. ಆದ್ರೆ ರಾಜ್ಯ ಸರ್ಕಾರ ಚೀನಾದ ಪಿಪಿಇ ಕಿಟ್ಗಳನ್ನು 2,117ರೂ ನೀಡಿ ಖರೀದಿಸಿದೆ. ಈ ಎಲ್ಲಾ ಕಿಟ್ಗಳು ಕಳಪೆ ಗುಣಮಟ್ಟದವು ಅಂತ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.