ಕಾರವಾರ: ಬ್ರಿಟಿಷರ ಆಡಳಿತದಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರವನ್ನು ಜೋಡಿಸಲು ನಿರ್ಮಾಣ ಮಾಡಲಾಗಿದ್ದ ಐತಿಹಾಸಿಕ ಲಂಡನ್ ಬ್ರಿಡ್ಜ್ ಈಗ ಇತಿಹಾಸದ ಪುಟ ಸೇರಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪಥ ಕಾಮಗಾರಿ ಮಾಡಲಾಗುತ್ತಿದೆ. ಈ ಕಾಮಗಾರಿಯಿಂದಾಗಿ ಮನೆ, ಐತಿಹಾಸಿಕ ಕಟ್ಟಡ, ಸಾವಿರಾರು ಮರ-ಗಿಡ ಸೇರಿದಂತೆ ಅರಣ್ಯ ಪ್ರದೇಶ, ಕಲ್ಲು ಬಂಡೆ ಸೇರಿದಂತೆ ಸದಾಶಿವಗಡದ ಐತಿಹಾಸಿಕ ಪ್ರವಾಸಿ ತಾಣದ ಗಡ್ಡವನ್ನು ತೆರವು ಮಾಡಿ ನೆಲೆಸಮ ಮಾಡಲಾಗಿದೆ. ಈಗ ಅದರ ಸಾಲಿನಲ್ಲೇ ಸುಮಾರು 150 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಲಂಡನ್ ಬ್ರಿಡ್ಜ್ ನ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
ಕಾರವಾರ ನಗರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಸಂಪರ್ಕ ಸೇತುವೆಯಾಗಿತ್ತು. ಸದ್ಯ ಐಆರ್ಬಿ ಕಂಪೆನಿಯವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಗರಕ್ಕೆ ಸಂಪರ್ಕ ಕಲ್ಪಿಸಲು ಎರಡು ಸುರಂಗ ಮಾರ್ಗವನ್ನು ಕೊರೆದು ಮೇಲ್ಸೇತುವೆಯನ್ನು ಆ ಸುರಂಗ ಮಾರ್ಗಕ್ಕೆ ಜೋಡಿಸಲು ಲಂಡನ್ ಬ್ರಿಡ್ಜ್ ತೆರವು ಮಾಡಿ ಅದೇ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈಗ ಲಂಡನ್ ಬ್ರಿಜ್ ಪಕ್ಕವೇ ಹೊಸ ಎರಡು ಸೇತುವೆಗಳು ನಿರ್ಮಾಣವಾಗಿವೆ. ಇದರಿಂದ ಹಳೆಯ ಸೇತುವೆಯನ್ನು ಒಡೆದು ತೆಗೆಯಲಾಗುತ್ತಿದೆ. ಈ ಸೇತುವೆಯ ಅಕ್ಕಪಕ್ಕದಲ್ಲೂ ಎರಡು ಸೇತುವೆಗಳಿದ್ದು ಒಂದು ಸುರಂಗ ಮಾರ್ಗದ ಮೂಲಕ ಹಾಗೂ ಇನ್ನೊಂದು ಸೇತುವೆ ಬೈತಖೋಲ್ ಭಾಗದ ಪ್ರದೇಶಕ್ಕೆ ತೆರಳು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಇನ್ನೊಂದು ಟೆಲನ್ ಗೆ ಸಂಪರ್ಕ ಕಲ್ಪಿಸಲು ಲಂಡನ್ ಬ್ರಿಡ್ಜ್ ತೆರವು ಮಾಡಲಾಗುತ್ತಿದೆ.
ಲಂಡನ್ ಬ್ರಿಡ್ಜ್ ನಿರ್ಮಾಣದ ನಂತರ ಕೆಲ ಬಾರಿ ಸೇತುವೆಯ ಮೇಲ್ಬಾಗ ನವೀಕರಣ ಮಾಡಲಾಗಿದೆ. ಅದರಂತೆ ಲಂಡನ್ ಬ್ರಿಡ್ಜ್ ನಿರ್ಮಾಣ ಮಾಡಿರುವ ಕುರುಹುಗಳಿವೆ ಆದರೆ ಹಳೆಯ ಕಂಬಗಳು, ಕಲ್ಲುಗಳು ಇನ್ನೂ ಸೇತುವೆಯನ್ನು ಘಟ್ಟಿಮುಟ್ಟಾಗಿರಿಸಿದ್ದವು. ಕಾರವಾರ ಬಂದರಿನ ವಹಿವಾಟು ಹೆಚ್ಚಿಸಬೇಕು ಎಂಬ ಕಾರಣಕ್ಕೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 1857 ರಿಂದ 1864 ರ ನಡುವೆ ಕಾರವಾರದ ಕೋಣೆ ಪ್ರದೇಶವನ್ನು ಅಭಿವೃದ್ಧಿ ಮಾಡಿ ಇಲ್ಲಿ ನಗರ ನಿರ್ಮಾಣ ಮಾಡುತ್ತದೆ.
ಬ್ರಿಟಿಷರ ಅವಧಿಯಲ್ಲಿ ಕಾರವಾರ ಬಂದರು ಆಮದು ರಫ್ತಿಗೆ ಪ್ರಮುಖ ಪ್ರದೇಶವಾಗಿತ್ತು. ಇದರಿಂದಾಗಿ ಕಾರವಾರ ನಗರದಿಂದ ಆ ಅವಧಿಯಲ್ಲಿ ಲಂಡನ್ ಬ್ರಿಡ್ಜ್ ನಿರ್ಮಾಣ ಮಾಡಿ ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಸೇವುವೆಯನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಅಲ್ಲದೆ ಇಗೀಗ ಗೋವಾ ರಾಜ್ಯದ ಸಂಪರ್ಕ ಸೇರಿದಂತೆ ಹಲವು ವ್ಯವಹಾರ ಮಾಡಲು ಈ ಸೇತುವೆ ನಿರ್ಮಾಣ ಮಾಡಲಾಗಿತ್ತು ಎನ್ನುವುದು ಇಲ್ಲಿನ ಹಳೆ ತಲೆಮಾರಿನವರ ಅಭಿಪ್ರಾಯವಾಗಿದೆ.
ಕಾರವಾರ ನಗರವನ್ನು ಜೋಡಿಸಿದ ಐತಿಹಾಸಿಕ ಲಂಡನ್ ಬ್ರಿಡ್ಜ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿದ್ದರಿಂದ ಲಂಡನ್ ಬ್ರಿಡ್ಜ್ ತೆರುವ ಕಾರ್ಯಾಚರಣೆ ಆರಂಭಿಸಲಾಗಿದೆ. ಸದ್ಯ ಐಆರ್ಬಿ ಕಂಪೆನಿಯವರು ನಿರ್ಮಾಣ ಮಾಡುತ್ತಿರುವ ಸೇತುವೆ ಸಹ ಲಂಡನ್ ಬ್ರಿಡ್ಜ್ ರೀತಿಯಲ್ಲೇ ಅತ್ಯುತ್ತಮ ಗುಣಮಟ್ಟದಾಗಿರಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಉದಯ ಬರ್ಗಿ ಕಾರವಾರ