ಕಾರವಾರ: ರಸ್ತೆ ಪಕ್ಕದ ಗಟಾರದಲ್ಲಿದ್ದ ಭಾರೀ ಗಾತ್ರದ ಹೆಬ್ಬಾವೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಲ್ಲಿ ಸೆರೆ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ನಗರದ ಬಾಡ ಐಟಿಐ ಕಾಲೇಜು ಸಮೀಪದ ಗಟಾರದಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡ ಸ್ಥಳೀಯರು ಭಯಗೊಂಡಿದ್ದರು. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿ ಡೆಪ್ಯೂಟಿ ಆರ್ಎಫ್ಓ ಹನುಮಂತ, ಅರಣ್ಯ ರಕ್ಷಕ ಗೋಪಾಲ ನಾಯ್ಕ, ವಾಚರ್ ಸಂಜೀವ್ ಹಾಗೂ ನಿಲೇಶ್ ಎಂಬುವವರು ಸ್ಥಳೀಯರ ಸಹಕಾರದಲ್ಲಿ ಹೆಬ್ಬಾವನ್ನ ಹಿಡಿದಿದ್ದಾರೆ. ಸುಮಾರು 14 ಅಡಿ ಉದ್ದವಾಗಿದ್ದ ಈ ಹೆಬ್ಬಾವು 65 ಕೆಜಿ ತೂಕ ಹೊಂದಿದೆ. ಈ ಭಾಗದಲ್ಲಿ ಕಳೆದ 15 ದಿನದ ಅವಧಿಯಲ್ಲಿಯೇ ಮೂರು ಹೆಬ್ಬಾವುಗಳನ್ನು ಹಿಡಿಯಲಾಗಿದೆ.