Homeರಾಜ್ಯಇತರೆವಿದ್ಯಾಕಾಶಿಯಲ್ಲಿ ಅಕ್ಷರ ಜಾತ್ರೆಯ ಸಡಗರ

ವಿದ್ಯಾಕಾಶಿಯಲ್ಲಿ ಅಕ್ಷರ ಜಾತ್ರೆಯ ಸಡಗರ

ವಿದ್ಯಾಕಾಶಿ ಧಾರವಾಡ ಅಕ್ಷರ ಜಾತ್ರೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ ಕನ್ನಡ ಹಬ್ಬದ ತೇರನ್ನ ಎಳೆಯಲು ಕ್ಷಣಗಣನೆ ಅರಂಭವಾಗಿದೆ. ಧಾರವಾಡದಲ್ಲಿ ಕನ್ನಡ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲ ಕಾರ್ಯಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಭರದಿಂದ ಸಾಗಿದೆ.
ಪೇಡಾ ನಗರಿ ಧಾರವಾಡದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಕನ್ನಡದ ಹಬ್ಬ ನಡೆಯಲಿದೆ. 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 4,5, ಹಾಗೂ 6 ರಂದು ನಡೆಯಲಿದ್ದು ಸಕಲ ಸಿದ್ದತೆಗಳು ಅಂತಿಮ ಹಂತ ತಲುಪಿವೆ. ಕೃಷಿ ವಿವಿ ಆವರಣದಲ್ಲಿ ಸಮ್ಮೇಳನ ನಡೆಯುತ್ತಿದ್ದು, ಇಲ್ಲಿ ಭವ್ಯ ವೇದಿಕೆ ಹಾಕಲಾಗಿದೆ.
ಮುಖ್ಯ ವೇದಿಕೆಗೆ ದಾ.ರಾ ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ ಎಂದು ಹೆಸರಿಡಲಾಗಿದೆ. ವೇದಿಕೆಯ ಮೇಲೆ ಜ್ಞಾನಪೀಠ ಪುರಸ್ಕೃತರ ಮುಖಮುದ್ರಿಕೆಗಳನ್ನ ಹಾಕಲಾಗಿದೆ. 50 ಸಾವಿರ ಕನ್ನಡಾಭಿಮಾನಿಗಳಿಗೆ ಕಾರ್ಯಕ್ರಮ ವೀಕ್ಷಿಸಲು ಆಸನದ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಇನ್ನೇರಡು ವೇದಿಕೆಗಳನ್ನು ಹಾಕಲಾಗಿದೆ.
ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗಾಗಿ ಉತ್ತರ ಕರ್ನಾಟಕ ಶೈಲಿಯ ಭೋಜನದ ವ್ಯವಸ್ಥೆ ಮಾಡಲಾಗಿದೆ. 2000 ಸಾವಿರ ಬಾಣಸಿಗರು ಅಡುಗೆ ಸಿದ್ದಪಡಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ಜನರು ಸವಿಯಾದ ಊಟ ಸವಿಯಲಿದ್ದಾರೆ. ಗದಗ ಜಿಲ್ಲೆಯ ಶಿಗ್ಲಿ ಗ್ರಾಮದಿಂದ ಲಕ್ಷಾಂತರ ರೊಟ್ಟಿಗಳನ್ನು ಧಾರವಾಡಕ್ಕೆ ತರಲಾಗಿದೆ.
ಸಮ್ಮೇಳನದ ಊಟದ ಮೆನು : ರೊಟ್ಟಿ, ಮುಳಗಾಯಿ ಪಲ್ಯೆ, ಚವಳಿಕಾಯಿ, ಹೆಸರುಕಾಳು ಪಲ್ಯ ಇತ್ಯಾದಿ
ಸಿಹಿ ಪದಾರ್ಥಗಳು : ಧಾರವಾಡ ಪೇಡಾ, ಗೋದಿ ಹುಗ್ಗಿ, ಮಾದಲಿ, ಶೇಂಗಾ ಹೋಳಿಗೆ, ಇತ್ಯಾದಿ
ಮುಂಜಾನೆ ಉಪಹಾರಕ್ಕೆ : ಉಪ್ಪಿಟ್ಟು, ಶಿರಾ, ಇಡ್ಲಿ, ವಡಾ, ಬಿಸಿಬೇಳೆ ಬಾತ್ ಇತ್ಯಾದಿ
ಇನ್ನು ಸಮ್ಮೇಳನದಲ್ಲಿ ವಿವಿಧ ಘೋಷ್ಠಿಗಳು ನಡೆಯಲಿದೆ. ಉತ್ತರ ಕರ್ನಾಟಕದ ಅಭಿವೃಧ್ಧಿಯ ಸವಾಲುಗಳು, ಕನ್ನಡ ಶಾಲೆಗಳ ಅಳಿವು ಉಳಿವು, ದಲಿತ ಅಸ್ಮಿತೆ, ನೀರಾವರಿಯ ಜ್ವಲಂತ ಸಮಸ್ಯೆಗಳು, ಗಡಿನಾಡು ತಲ್ಲಣ, ಮಹಿಳಾ ಸಂವೇದನೆ, ವೈಚಾರಿಕತೆ ಮತ್ತು ಅಹಿಷ್ಣುತೆ ಸೇರಿದಂತೆ ಹಲವು ವಿಷಯಗಳ ಮೇಲೆ ನುರಿತ ತಜ್ಞರು ಘೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಪತ್ರಿನಿತ್ಯ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ನಾಳೆ ಮುಂಜಾನೆ 8 ಗಂಟೆಗೆ ಕೃಷಿ ವಿವಿ ಆವರಣದಲ್ಲಿ ದ್ವಜಾರೋಹಣ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ದ್ವಾಜಾರೋಹಣ ನಡೆಸಲಿದ್ದಾರೆ. ಬಳಿಕ ಕೆಸಿಡಿ ಕಾಲೇಜು ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಮೇರವಣಿಗೆಯಲ್ಲಿ 1001 ಕುಂಭ ಹೊತ್ತ ನಾರಿಯರು ಭಾಗವಹಿಸಲಿದ್ದು, ಕಲಾ ತಂಡಗಳು ಮೆರವಣಿಗೆಯ ಮೆರುಗನ್ನ ಹೆಚ್ಚಿಸಲಿವೆ.
ಕೃಷಿ ವಿವಿ ಆವರಣದಲ್ಲಿ ಹಾಕಲಾಗಿರುವ ಅಂಬಿಕಾತನಯದತ್ತ ವೇದಿಯಲ್ಲಿ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮೇಳನ ಉದ್ಘಾಟಿಸಲಿದ್ದಾರೆ, ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರ, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಪಾಟೀಲ್, ನಾಡೋಜ ಪಾಟೀಲ ಪುಟ್ಟಪ್ಪ ಸೇರಿದಂತೆ ಡಿಸಿಎಂ ಪರಮೇಶ್ವರ, ಜಯಮಾಲ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.
ಸಮ್ಮೇಳನಕ್ಕೆ ಹೆಚ್ಚಿನ ಭದ್ರೆತೆ ಒದಗಿಸಲಾಗಿದ್ದು, 7 ಎಸ್.ಪಿ , 18 ಎಸಿಪಿ, 100 ಇನ್ಸ್ಪೆಕ್ಟರ್ ಸೇರಿದಂತೆ 2000 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಎಲ್ಲೆಡೆ ಡ್ರೋಣ್​ ಕ್ಯಾಮರಾದ ಮೂಲಕ ಕಣ್ಗಾವಲು ಇಡಲಾಡಗಿದ್ದು, 15 ಕಡೆಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುತ್ತಿರುವ ಗಣ್ಯರು, ಸಾಹಿತಿಗಳು ಸೇರಿದಂತೆ ಹಲವರಿಗೆ ನಗರದ ಬೇರೆ ಬೇರೆ ಕಡೆಗಳಲ್ಲಿ ವಸತಿ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಮಾಡಲಾಗಿದೆ.
ಒಟ್ಟಾರೆ, ಮೂರು ದಿನಗಳ ಕಾಲ ಧಾರವಾಡದಲ್ಲಿ ನಡೆಯುವ ಅಕ್ಷರ ಜಾತ್ರೆಯಿಂದ ಜಿಲ್ಲೆಯಾದ್ಯಂತ ಹಬ್ಬದ ವಾತವಾರಣ ಸೃಷ್ಠಿಯಾಗಿದೆ. 50 ಸಾವಿರಕ್ಕು ಹೆಚ್ಚು ಜನರು ಕನ್ನಡದ ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
– ಸುರೇಶ ನಾಯ್ಕ, ಪವರ್ ಟಿವಿ, ಧಾರವಾಡ

LEAVE A REPLY

Please enter your comment!
Please enter your name here

- Advertisment -

Most Popular

Recent Comments