Tuesday, January 18, 2022
Powertv Logo
HomePower Specialಶಿವಮೊಗ್ಗ 'ಕನ್ನಡ ಮೂರ್ತಿ' ನಾಡಿಗೆ ಕೀರ್ತಿ!

ಶಿವಮೊಗ್ಗ ‘ಕನ್ನಡ ಮೂರ್ತಿ’ ನಾಡಿಗೆ ಕೀರ್ತಿ!

ನಮ್ಮ ಭಾಷೆಯ ಅಭಿಮಾನ ಕನ್ನಡ ರಾಜ್ಯೋತ್ಸವದ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನವೂ ಕನ್ನಡದ ಹಬ್ಬವಾಗಬೇಕು. ಭಾಷಾಭಿಮಾನ ಬರೀ ತೋರಿಕೆಯಾಗಿರದೆ ಅದಕ್ಕಾಗಿ ನಾವು ಶ್ರಮಿಸಬೇಕು. ಹೀಗೆ ಕನ್ನಡದ ಭಾಷಾಭಿಮಾನವನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯಲು ಶ್ರಮಿಸುತ್ತಿರುವ ಶಿವಮೊಗ್ಗದ ಈ ವ್ಯಕ್ತಿಯ ಸಾಧನೆ ದೊಡ್ಡದು. ಇವರ ಕನ್ನಡ ಪ್ರೇಮಕ್ಕೆ  ಎಲ್ಲರೂ ತಲೆ ಬಾಗಲೇಬೇಕು.

ಹೌದು, ಶಿವಮೊಗ್ಗದ ಜನರಿಗೆ ಚಿರಪರಿತರಾದ ಇವರು ನರಸಿಂಹ ಮೂರ್ತಿ. ನಗರದ ಬಸ್ ನಿಲ್ದಾಣ ಮುಂಭಾಗದಲ್ಲಿ ಕನ್ನಡ ಕಸ್ತೂರಿ ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವ ಇವರು ಎಲ್ಲರೂ ನಿಬ್ಬೆರಗಾಗುವಂತಹ ಅಪ್ಪಟ ಕನ್ನಡ ಪ್ರೇಮಿ. ಬಟ್ಟೆಗಳನ್ನು ಇಸ್ತ್ರಿ ಮಾಡೋದಷ್ಟೇ ಇವರ ಕೆಲಸವಲ್ಲ..!  ಭಾಷಾ ಪ್ರೇಮವನ್ನು ಪ್ರತಿಯೊಬ್ಬರಿಗೆ ಸಾರಿ ಹೇಳುತ್ತಾರೆ.  ಹಲವು ವರ್ಷಗಳಿಂದ ಈ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 26 ವರ್ಷದಿಂದ ಕನ್ನಡ ಕಸ್ತೂರಿ ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವ ಇವರ ಪುಟ್ಟ ಅಂಗಡಿ ತುಂಬೆಲ್ಲಾ ಜ್ಞಾನಪೀಠ ಪುರಸ್ಕೃತರ ಫೋಟೋಗಳಿವೆ. ಹೀಗಾಗಿ ಶಿವಮೊಗ್ಗದ ಜನತೆ ಇವರನ್ನು ನರಸಿಂಹಮೂರ್ತಿ ಬದಲಾಗಿ ಕನ್ನಡ ಮೂರ್ತಿ ಎಂದೇ ಕರಿತಾರೆ. 

ಅಂದಹಾಗೆ ಕನ್ನಡ ಮೂರ್ತಿ ಪ್ರತಿದಿನ ಅಂಗಡಿ ತೆರೆದ ಕೂಡಲೇ ತಾಯಿ ಭುವನೇಶ್ವರಿ ಫೋಟೋಗೆ ಮೊದಲು ಪೂಜೆ ಮಾಡುತ್ತಾರೆ. ಅಲ್ಲದೇ ತನ್ನ ಅಂಗಡಿಯಲ್ಲಿ ಕನ್ನಡ ಪುಸ್ತಕಗಳನ್ನು ಇಟ್ಟು ಇತರರಿಗೂ ಓದಲು ಉತ್ತೇಜಿಸುತ್ತಾರೆ. ಇನ್ನು ಕನ್ನಡರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳನ್ನ ತಪ್ಪದೆ ಅಂಗಡಿಯಲ್ಲೇ ಆಚರಿಸುತ್ತಾರೆ.

ಇನ್ನು ನಗರಕ್ಕೆ ಯಾರೇ ಕನ್ನಡ ಸಾಹಿತಿಗಳು, ಕಲಾವಿದರು, ಕನ್ನಡಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳು ಬಂದ್ರೆ ಸಾಕು ಅವರನ್ನು ಭೇಟಿಯಾಗಿ ಬರ್ತಾರೆ. ಜೊತೆಗೆ ಕನ್ನಡಕ್ಕಾಗಿ ದುಡಿದವರು ಯಾರೇ ಶಿವಮೊಗ್ಗಕ್ಕೆ ಬಂದರೂ ಅವರಿಗೊಂದು ಗೌರವ ಸಲ್ಲಿಸುವ ರೂಢಿ ಇವರದ್ದು.  ಇಷ್ಟು ಮಾತ್ರವಲ್ಲದೆ ಕನ್ನಡಕ್ಕಾಗಿ ದುಡಿದವರ ಸಾಧಕರ ಹುಟ್ಟುಹಬ್ಬವನ್ನು ಗ್ರಾಹಕರಿಗೆ, ಅಕ್ಕಪಕ್ಕದ ಮಳಿಗೆಯವರಿಗೆ ಸಿಹಿ ಹಂಚುವ ಮೂಲಕ ಆಚರಿಸುತ್ತಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿರುವ ಹೆಸರಾಂತ ಕವಿಗಳ ಬಗ್ಗೆ ಪರಿಚಯಿಸುವ ಕನ್ನಡ ಪಾಠವನ್ನೂ ಮಾಡುತ್ತಾರೆ. ಇವರ ಕಾಯಕವನ್ನು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ ಅವರು ‘ಕನ್ನಡ ಮೂರ್ತಿ’ ಎಂದು ಹೇಳುವ ಮೂಲಕ ಬೆನ್ನು ತಟ್ಟಿದ್ದಾರೆ. ಇವರ ಅಂಗಡಿಗೆ ರಾಜಕೀಯ ಮುಖಂಡರು, ಸಾಹಿತಿಗಳು ಕೂಡ ಭೇಟಿ ನೀಡಿ ನಿತ್ಯೋತ್ಸವ ಆಚರಿಸುವ ಕನ್ನಡ ಮೂರ್ತಿಗೆ ಶಹಬ್ಬಾಷ್ ಗಿರಿ ಕೊಡುತ್ತಾರೆ.   ತಮ್ಮ ಕನ್ನಡ ಕಸ್ತೂರಿ ಇಸ್ತ್ರಿ ಅಂಗಡಿಯಲ್ಲಿ ಕನ್ನಡದ ದಿಗ್ಗಜರ ಫೋಟೋಗಳು ರಾರಾಜಿಸುತ್ತಿರುವುದು ಇವರಿಗೆ ಹೆಮ್ಮೆಯ ವಿಚಾರವಾಗಿದ್ದು, ಅಪ್ಪಟ ಕನ್ನಡ ಪ್ರೇಮಿಯನ್ನು ಸ್ಥಳೀಯರು ಮನಸಾರೆ ಹಾಡಿಹೊಗಳುತ್ತಾರೆ. 

‘ನಾವು ಮಾಡುವ ಕೆಲಸದಲ್ಲಿ ಕನ್ನಡವನ್ನು ಕಾಣಬೇಕು. ಹೊರತು ನಮ್ಮ ಭಾಷೆ ಉಳಿಸಲು ಹೋರಾಟ ಮಾಡಬೇಕಿಲ್ಲ. ನಾವು ಅದನ್ನು ಬಳಕೆ ಮಾಡಬೇಕು. ಹಾಗಾಗಿ ಅದರ ಸೇವೆ ಮಾಡುತ್ತಿದ್ದೇನೆ ಎನ್ನುತ್ತಾರೆ ಕನ್ನಡ ಮೂರ್ತಿ.  

LEAVE A REPLY

Please enter your comment!
Please enter your name here

- Advertisment -

Most Popular

Recent Comments