ಮಂಡ್ಯ: ಮಂಡ್ಯದ ಕೆರೆ ಕಾಮೇಗೌಡರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಪಟ್ಟ ಕೆರೆ ಕಾಮೇಗೌಡರು ದೇಶ ಮಾತ್ರವಲ್ಲ, ವಿಶ್ವದ ಹಲವೆಡೆ ಹೆಸರುವಾಸಿಯಾದವ್ರು.
ಕುರಿ ಕಾಯುತ್ತಲೇ, ಅದರಿಂದ ಗಳಿಸಿದ ಸ್ವಂತ ಹಣದಲ್ಲಿ ಸುಮಾರು 16 ಕೆರೆ-ಕಟ್ಟೆಗಳನ್ನ ನಿರ್ಮಾಣ ಮಾಡಿದ್ರು. ಜೊತೆಗೆ ನೂರಾರು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ತಮ್ಮ ಪರಿಸರ ಕಾಳಜಿ ಮೆರೆದಿದ್ದರು.
ಕಾಮೇಗೌಡರ ಪರಿಸರ ಕಾಳಜಿಯನ್ನ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮೆಚ್ಚಿ, ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಶಂಸಿಸಿದ್ದರು. ಪ್ರಧಾನಿಯವರ ಪ್ರಶಂಸೆ ಬಳಿಕವಂತೂ ಕಾಮೇಗೌಡರಿಗೆ ಅಭಿನಂದನೆಗಳು ಮತ್ತು ನೆರವಿನ ಮಹಾಪೂರವೇ ಹರಿದು ಬಂತು. ವಿಶೇಷ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಜೀವಿತಾವಧಿವರೆಗೆ ರಾಜ್ಯ ಸರ್ಕಾರ ಉಚಿತ ಬಸ್ ಪಾಸ್ ನೀಡಿತ್ತು.
ಜೊತೆಗೆ ಮಂಡ್ಯ ಜಿಲ್ಲಾಡಳಿತ ಕಾಮೇಗೌಡರ ಬೇಡಿಕೆ ಆಲಿಸಿ, ಮಗನಿಗೆ ಉದ್ಯೋಗ, ಮನೆ ಕಟ್ಟಿಕೊಡುವ ಹಾಗೂ ಜೀವಾವಧಿವರೆಗೂ ಪಿಂಚಣಿ ವ್ಯವಸ್ಥೆ ಘೋಷಿಸಿತ್ತು. ಈ ನಡುವೆಯೇ ಕಾಮೇಗೌಡರು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆ ಸೇರಿದ್ದಾರೆ. ಅಂದ್ಹಾಗೆ, ಕಾಮೇಗೌಡರಿಗೆ ಈ ಹಿಂದಿನಿಂದಲೂ ನರ ಸಂಬಂಧಿ ಕಾಯಿಲೆ ಇತ್ತು. ನರ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಕಾಮೇಗೌಡರ ಬಲಗಾಲಿನ ನೋವು ಇದೀಗ ಉಲ್ಬಣಿಸಿದೆ.ಹೀಗಾಗಿ, ದಿಢೀರ್ ಅಂತಾ ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಮೇಗೌಡರು ಆಸ್ಪತ್ರೆಗೆ ದಾಖಲಾಗ್ತಿದ್ದಂತೆ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡ, ತಾಲೂಕು ಉಪ ತಹಸೀಲ್ದಾರ್, ಇಓ ಸೇರಿದಂತೆ ಅಧಿಕಾರಿಗಳ ದಂಡೇ ಆಸ್ಪತ್ರೆಗೆ ಭೇಟಿ ನೀಡಿದೆ.ವೈದ್ಯರು ಮತ್ತು ಕಾಮೇಗೌಡರ ಅಭಿಪ್ರಾಯ ಸಂಗ್ರಹಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಾಕೀತು ಮಾಡಿದ್ರು. ಅಗತ್ಯ ಬಿದ್ದರೆ, ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೂ ಚಿಂತನೆ ನಡೆಸಲಾಗಿದೆ. ಏನೇ ಆಗ್ಲೀ, ಕಾಮೇಗೌಡರು ಬೇಗ ಗುಣಮುಖರಾಗಲಿ ಅನ್ನೋದೇ ಎಲ್ಲರ ಹಾರೈಕೆ.