ನನ್ನ ಜೀವ ನಾನು ಉಳಿಸಿಕೊಳ್ಳಬೇಕಂದ್ರೆ ನಾನು ಮನೆಯಲ್ಲಿ ಬಿದ್ದಿರಬೇಕು. ಆದರೆ, ನಾನು ಈ ಪದ ಬಳಸಬಾರದು ಎಂದು ಸಚಿವ ಕೆ.ಎಸ್. ಈಶ್ವರಪ್ಪ, ಜನರಿಗೆ ತಮ್ಮದೇ ಆದ ಶೈಲಿಯಲ್ಲಿ ಕಿವಿ ಮಾತು ಹೇಳಿದ್ದಾರೆ. ಕೊರೋನಾ ಸೋಂಕಿನಿಂದ ದೂರವಿರಬೇಕಾದರೆ, ನೀವು ಮನೆಯಲ್ಲಿಯೇ ಇರಿ ಎಂದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3 ವಿಷಯಗಳನ್ನು ಹೇಳಿ ಜನರಿಗೆ ಕೊರೋನಾದಿಂದ ದೂರವಿರಿ ಎಂದಿದ್ದಾರೆ.
ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ ಕುಟುಂಬ ಚೆನ್ನಾಗಿ ನೋಡಿಕೊಳ್ಳಬೇಕೆಂದರೆ ನಾನು ಮನೆಯಲ್ಲಿರಬೇಕು. ಸಮಾಜವನ್ನು ಹಾಳು ಮಾಡಬಾರದು ಎಂದರೆ ನಾನು ಮನೆಯಲ್ಲಿರಬೇಕು. ಮೋಜು ಮಾಡುವ ಸಂದರ್ಭ ಖಂಡಿತ ಇದಲ್ಲ. ನೀವುಗಳು, ಬೇರೆ ಸಂದರ್ಭದಲ್ಲಿ ಎಷ್ಟು ಬೇಕಾದರೂ, ಎಲ್ಲಿ ಬೇಕಲ್ಲಿ ಓಡಾಡಿ ಯಾರು ಕೇಳಲ್ಲ. ಆದರೆ, ಈಗ ಮಾತ್ರ ದಯಮಾಡಿ ಮನೆಯಲ್ಲಿಯೇ ಇರಿ ಹೆಚ್ಚು ಓಡಾಡಬೇಡಿ ಎಂದಿದ್ದಾರೆ. ರಸ್ತೆಗಳಲ್ಲಿ ನೋಡಿದರೆ ನನಗೆ ಭಯವಾಗುತ್ತೆ. ಹಾಗೆ ಜನರು ಓಡಾಡುತ್ತಿದ್ದಾರೆ. ಎಲ್ಲೂ ಹೋಗಿಯೇ ಇಲ್ಲವೇನೋ, ತರಕಾರಿ ಖರೀದಿ ಮಾಡಿಯೇ ಇಲ್ಲವೆನೋ ಎಂಬಂತೆ, ವರ್ತಿಸುತ್ತಿದ್ದಾರೆ. ಸರ್ಕಾರದಿಂದ ಎಷ್ಟು ಬಡಕೊಂಡರು ಜನರು ಓಡಾಡುತ್ತಿದ್ದಾರೆ. ನೀವು ಹಾಳಾಗುತ್ತಿದ್ದಿರಾ. ಸಮಾಜವನ್ನು ಹಾಳು ಮಾಡುತ್ತಿದ್ದಿರಾ. ದಯಮಾಡಿ ಪ್ರಾರ್ಥನೆ ಮಾಡುತ್ತೆನೆ. ಹೆಚ್ಚು ಜನರು ಎಲ್ಲಿಯೂ ಓಡಾಡಬೇಡಿ ಎಂದು ಸಚಿವ ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ. ಇನ್ನು ಮಾಧ್ಯಮಗಳು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವರದಿ ಮಾಡಿ. ಜನರು ಸೂಸೈಡು ಮಾಡ್ಕೋಬೇಡಿ. ಕೊಲೆನೂ ಮಾಡಬೇಡಿ. ತಿಳುವಳಿಕೆ ಇರುವವರ ಊರಾಗಿರುವ ಶಿವಮೊಗ್ಗದವರು ಅರಿತು ಮುನ್ನಡೆಯಿರಿ ಎಂದು ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ, ಶಿವಮೊಗ್ಗದಲ್ಲಿ ಇನ್ನು ಮುಂದೆ ಲಾಕ್ ಡೌನ್ ಇಲ್ಲ – ಓನ್ಲಿ ಸೀಲ್ ಡೌನ್ ಎಂದಿರುವ ಈಶ್ವರಪ್ಪ, ಹಳೇ ಶಿವಮೊಗ್ಗ ಭಾಗ ಸೀಲ್ ಡೌನ್ ಮಾಡಲಾಗುತ್ತಿದೆ ಎಂದಿದ್ದಾರೆ. ಈ ಭಾಗದಲ್ಲಿ ಒಟ್ಟು 7 ವಾರ್ಡ್ ಗಳು ಬರಲಿದ್ದು, ಇದರಲ್ಲಿ, ವಾರ್ಡ್ ಸಂಖ್ಯೆ 22, 23, 29 ಮತ್ತು 30 ಸೀಲ್ ಡೌನ್ ಮಾಡಲಾಗುತ್ತಿದೆ. ವಾರ್ಡ್ ಸಂಖ್ಯೆ 12, 13 ಮತ್ತು 33ರಲ್ಲಿ ಭಾಗಶಃ ಲಾಕ್ ಡೌನ್ ಮಾಡಲಾಗುತ್ತಿದೆ. ಇದು ಜು. 23 ರಿಂದ ಜಾರಿಗೆ ಬರಲಿದ್ದು, ಜು. 29 ರವರೆಗೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಬೆಕ್ಕಿನ ಕಲ್ಮಠ ಬಿ.ಹೆಚ್.ರಸ್ತೆ, ಅಮೀರ್ ಅಹ್ಮದ್ ವೃತ್ತ, ಅಶೋಕ ವೃತ್ತದಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಹೊಸ ತೀರ್ಥಹಳ್ಳಿ ರಸ್ತೆ, ಬೈಪಾಸ್ ರಸ್ತೆಯ ತುಂಗಾ ಹೊಸ ಸೇತುವೆವರೆಗೆ ಬರುವಂತಹ ಪ್ರದೇಶದಲ್ಲಿ ಸೀಲ್ ಡೌನ್ ಜಾರಿಯಾಗಲಿದೆ. ಈ ಪ್ರದೇಶದಲ್ಲಿನ ಸಾರ್ವಜನಿಕರು, ಈ ಪ್ರದೇಶದಿಂದ ಹೊರಗೆ ಹೋಗುವುದನ್ನು ಹಾಗೂ ಬೇರೆ ಪ್ರದೇಶದಲ್ಲಿನ ಸಾರ್ವಜನಿಕರು ಸೀಲ್ ಡೌನ್ ಪ್ರದೇಶ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಆಸ್ಪತ್ರೆಗಳು, ಔಷಧಿ ಅಂಗಡಿಗಳು ಮತ್ತು ಹಾಲು ಮಾರಾಟ ಕೇಂದ್ರಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ತರಕಾರಿ, ದಿನಸಿ ಮತ್ತು ಹಣ್ಣು ಮಾರಾಟ ಕೇಂದ್ರಗಳಿಗೆ ಬೆಳಿಗ್ಗೆ 5ರಿಂದ ಬೆ.10ರವರೆಗೆ ವಿನಾಯಿತಿ ನೀಡಲಾಗಿದ್ದು, ಇತರ ಎಲ್ಲಾ ಅಂಗಡಿ ಮುಂಗಟ್ಟುಗಳ ವ್ಯವಹಾರವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.