ಹೆಮ್ಮೆಯ ಕನ್ನಡಿಗ ಮೇಜರ್ ಜನರಲ್ ಮಗನನ್ನೇ ಪಾಕ್​ ಬಂಧಿಸಿತ್ತು…ಆಗ ನಡೆದಿದ್ದೇನು..?

0
200

ಪಾತಕಿ ಪಾಕ್​ ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮೋಸದಿಂದ ಸೆರೆಹಿಡಿದಿದ್ದು, ಬಳಿಕ ಭಾರತದ ಎದುರು ಮಂಡಿಯೂರಿ ಅವರನ್ನು ಬಿಡುಗಡೆ ಮಾಡಿದ್ದೂ ಈಗ ಇತಿಹಾಸ. ಕುತಂತ್ರಿ ಪಾಕ್​ ಗೋಸುಂಬಿತನ ಪ್ರದರ್ಶಿಸಿರೋದು ಇದೇ ಮೊದಲೇನು ಅಲ್ಲ. ಪದೇ ಪದೇ ಇಂಥಾ ಕೆಲಸಗಳನ್ನು ಮಾಡುತ್ತಲೇ ಬಂದಿದೆ.
1965ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲೂ ಇಂಥಾ ಒಂದು ಘಟನೆ ನಡೆದಿತ್ತು. ಅವತ್ತು ನಮ್ಮ ಹೆಮ್ಮೆಯ ಫೀಲ್ಡ್​ ಮಾರ್ಷಲ್​ ಕೆ.ಎಂ ಕಾರ್ಯಪ್ಪ ಪುತ್ರ ಕೆ.ಸಿ ನಂದ ಕಾರ್ಯಪ್ಪ ಅವರಿದ್ದ ಹಂಟರ್​ ವಿಮಾನವನ್ನು ಪಾಕ್​ ಕೆಳಗುರುಳಿಸಿ, ಅವರನ್ನು ಹಿಡಿದಿಟ್ಟುಕೊಂಡಿತ್ತು. ಬಳಿಕ ನಾವು ಸೆರೆಹಿಡಿದಿಟ್ಟು ಕೊಂಡಿರೋದು ಕಾರ್ಯಪ್ಪನವರ ಮಗನನ್ನು ಅಂತ ಗೊತ್ತಾದಾಗ ಪಾಕಿಸ್ತಾನದ ಫೀಲ್ಡ್ ಮಾರ್ಷಲ್​ ಅಯೂಬ್​ ಖಾನ್​ ಜನರಲ್​ ಕಾರ್ಯಪ್ಪನವರಿಗೆ ಕಾಲ್ ಮಾಡಿ, ಮಗನನ್ನು ಬಿಡುಗಡೆಗೊಳಿಸುವ ಪ್ರಸ್ತಾಪವನ್ನಿಟ್ಟರು.
ಅವಿಭಜಿತ ಭಾರತವಿದ್ದಾಗ ಅಯೂಬ್ ಖಾನ್ ಬ್ರಿಟಿಷ್ ಸೇನೆಯಲ್ಲಿ ನಮ್ಮ ಜನರಲ್ ಕಾರ್ಯಪ್ಪನವರ ಕೆಳಗೆ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಹಳೆಯದ್ದನ್ನು ನೆನೆದುಕೊಂಡು ಅಯೂಬ್ ಖಾನ್, ಕೆ.ಸಿ. ಕಾರ್ಯಪ್ಪನವರನ್ನು ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ, ಕೆ.ಎಂ ಕಾರ್ಯಪ್ಪ ಅವರು ಸುತಾರಾಂ ಅದಕ್ಕೆ ಒಪ್ಪಲಿಲ್ಲ..! ”ಅವನೀಗ ಕೇವಲ ನನ್ನ ಮಗನಲ್ಲ… ನಮ್ಮ ದೇಶದ ಪುತ್ರ. ನಿಜವಾದ ದೇಶಭಕ್ತನಂತೆ ತಾಯ್ನೆಲದ ರಕ್ಷಣೆಗಾಗಿ ಹೋರಾಡುತ್ತಿರುವ ಸೈನಿಕ. ನಿಮ್ಮ ಕೊಡುಗೆಗೆ ಬಹಳ ಥ್ಯಾಂಕ್ಸ್​​. ಬಿಡುಗಡೆ ಮಾಡುವುದಾದರೆ ಎಲ್ಲರನ್ನೂ ಮಾಡಿ. ಇಲ್ಲವಾದರೆ ಯಾರನ್ನೂ ಬೇಡ. ನನ್ನ ಮಗನನ್ನು ವಿಶೇಷವಾಗಿ ನಡೆಸಿಕೊಳ್ಳುವ ಅಗತ್ಯವಿಲ್ಲ” ಅಂತ ಖಡಕ್ಕಾಗಿ ಹೇಳಿ ಫೋನ್ ಕೆಳಗಿಟ್ಟಿದ್ದರು.
ಇದು ಭಾರತದ ಯೋಧರ ಶಕ್ತಿ, ಭಾರತದ ನೆಲದ ತಾಕತ್ತು.. ಇದುವೇ ನಮ್ಮ ಹೆಮ್ಮೆ… ದೇಶವೇ ಮೊದಲು ಎನ್ನುವ ಯೋಧರಿಗೆ ನಮ್ಮದೊಂದು ಸಲಾಂ.. ದೇಶದ ಪ್ರತಿಯೊಬ್ಬ ಪ್ರಜೆಯೂ ಯೋಧರಿಗೆ ಋಣಿಗಳು. ಅವರ ಋಣ ತೀರಿಸೋಕೆ ಸಾಧ್ಯವೇ ಇಲ್ಲ.

LEAVE A REPLY

Please enter your comment!
Please enter your name here