Saturday, October 1, 2022
Powertv Logo
Homeರಾಜ್ಯಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ ರಸಭರಿತ ಮಾವುಗಳು

ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ ರಸಭರಿತ ಮಾವುಗಳು

ಬೇಸಿಗೆಯಲ್ಲಿ ಬಹುತೇಕರು ಹೆಚ್ಚು ಇಷ್ಟಪಟ್ಟು ಸೇವಿಸುವ ಹಣ್ಣು ಅಂದ್ರೆ ಅದು ಮಾವು. ಹಾಗಾಗಿ ಮಾವಿನ ಸೀಜನ್ ಬಂತು ಅಂದ್ರೆ ಮುಗೀತು, ಎಲ್ಲೆಲ್ಲೂ ಮಾವಿನ ಹಣ್ಣುಗಳು ಘಮಘಮಿಸುತ್ತವೆ. ಮಾವುಗಳು ಹೆಚ್ಚು ರುಚಿಯಾಗಿರುವ ಹಣ್ಣುಗಳಾಗಿದ್ದು, ಇದು ಆರೋಗ್ಯದ ದೃಷ್ಟಿಯಿಂದಲೂ ಸಾಕಷ್ಟು ಒಳ್ಳೆಯದು. ಇದೇ ಕಾರಣಕ್ಕೆ ಮಾವಿನ ಹಣ್ಣನ್ನ ಹಣ್ಣುಗಳ ರಾಜ ಎಂದು ಕರೆಯಲಾಗುತ್ತೆ. ಹಾಗಾಗಿ ಇವತ್ತಿಗೂ ಮಾವಿನ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ. ಇಂದು ಮಾವಿನ ಹಣ್ಣಿಗೆ ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದ್ದು, ಜ್ಯೂಸ್ ಕಂಪನಿಗಳಿಂದ ಹಿಡಿದು ಸಾಮಾನ್ಯ ಜನ್ರವರೆಗೂ ಮಾವಿನ ಹಣ್ಣಿನ ಖರೀದಿಗೆ ಮುಗಿಬೀಳ್ತಾರೆ. ಹೀಗಾಗಿ ಮಾವಿನ ಹಣ್ಣಿನ ಬೇಡಿಕೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗ್ತಾನೇ ಇದೆ.

ಮಾವಿನ ಹಣ್ಣಿನ ಕೃಷಿಯಲ್ಲಿ ತೊಡಗಿರುವವರು, ಹೆಚ್ಚು ಇಳುವರಿಯನ್ನ ಪಡೆಯಲು ನಾನಾ ರೀತಿಯಾದ ಕಸರತ್ತು ಮಾಡುತ್ತಲೇ ಇರುತ್ತಾರೆ. ಇಂದು ವಿಶ್ವಕ್ಕೆ ಅತಿಹೆಚ್ಚು ಮಾವಿನ ಹಣ್ಣುಗಳನ್ನ ಸರಬರಾಜು ಮಾಡುವ ದೇಶ ಅಂದ್ರೆ ಅದು ಭಾರತ. ಒಂದು ವರ್ಷದಲ್ಲಿ ಭಾರತ ಸುಮಾರು 20 ಮಿಲಿಯನ್ ಟನ್ನಷ್ಟು ಮಾವಿನ ಹಣ್ಣುಗಳ ಉತ್ಪಾದನೆ ಮಾಡುತ್ತೆ. ಒಂದು ಅಧ್ಯಯನ ವರದಿಯ ಪ್ರಕಾರ ಭಾರತ ಇವತ್ತು ಜಗತ್ತಿಗೆ ಶೇ. 60ಕ್ಕಿಂತ ಹೆಚ್ಚು ಮಾವುಗಳನ್ನ ರಪ್ತು ಮಾಡ್ತಾ ಇದೆ. ಹಾಗಾಗಿ ದೇಶದ ಆರ್ಥಿಕತೆಗೆ ಕೂಡ ಮಾವು ವಿಶೇಷ ಕೊಡುಗೆಯನ್ನ ನೀಡ್ತಾ ಇದೆ. ಮಾವಿನ ಹಣ್ಣಿನಲ್ಲಿ ವಿವಿಧ ರೀತಿಯ ತಳಿಗಳಿದ್ದು, ಅವುಗಳಲ್ಲಿ ಅವುಗಳಲ್ಲಿ ಪ್ರಮುಖವಾಗಿ ಮಲಗೋವಾ, ರಸಪುರಿ, ಆಮ್ರಪಾಲಿ, ಸೆಂದೂರ, ಹಿಮಾಮ್ ಪಸಂದ್, ದಶೇಹರಿ ಸೇರಿದಂತೆ ಹಲವು ತಳಿಗಳಿವೆ. ಹೀಗೆ ಒಂದೊಂದು ತಳಿಗೂ ಬೇರೆ ಬೇರೆಯಾದ ಬೆಲೆ ಕೂಡ ನಿಗಧಿಯಾಗಿದ್ದು, ಇತ್ತೀಚೆಗೆ ಎಲ್ಲಾ ಮಾವುಗಳ ತಳಿಗಳು ಕೂಡ ಸಿಕ್ಕಾಪಟ್ಟೆ ದುಬಾರಿಯಾಗಿವೆ.

ನಾವು ತಿನ್ನುವ ಮಾವು ಹಲವು ರೀತಿಯಾದ ಹಿನ್ನೆಲೆಯನ್ನ ಹೊಂದಿದೆ. ಜಗತ್ತಿಗೆ ತಿಳಿದಿರುವ ಹಾಗೆ ಮಾವಿನ ಮೂಲ ಭಾರತ. ಅಸಲಿಗೆ ಆಂಗ್ಲದ ‘ಮ್ಯಾಂಗೋ’ ಎಂಬ ಪದ, ಮಲಯಾಳಂ ಪದವಾಗಿರುವ ‘ಮಂಕಾ’ ಎಂಬ ಪದದಿಂದ ಬಂದಿದೆ ಅಂತ ಆಹಾರ ತಜ್ಞರು ಹೇಳ್ತಾರೆ. ಇತಿಹಾಸದ ಪ್ರಕಾರ ಪೋರ್ಚುಗೀಸರು ಮಸಾಲೆ ವ್ಯಾಪಾರಕ್ಕಾಗಿ 1498ರಲ್ಲಿ ಕೇರಳಕ್ಕೆ ಬಂದಿದ್ರು. ಈ ವೇಳೆ ಹಣ್ಣಿನ ವ್ಯಾಪಾರಕ್ಕೆ ಮುಂದಾದ ಅವರು, ಮಾವಿನ ಹಣ್ಣಿನ ಹೆಸರನ್ನ ಸ್ಥಳೀಯ ಭಾಷೆಯಲ್ಲಿ ಉಚ್ಚರಿಸೋಕ್ಕಾಗದೆ ಅದನ್ನ ‘ಮಾಂಗಾ’ ಎಂದು ಕರೆಯುತ್ತಾರೆ. 1500ರಲ್ಲಿ ಮಾವಿನ ಹಣ್ಣನ್ನ ಹಲವು ಕಡೆಗಳಲ್ಲಿ ಮಾರಾಟ ಮಾಡಲಾಗಿತ್ತಾದ್ರೂ 1700ರವರೆಗೆ ಬ್ರೆಜಿಲ್‌ನಲ್ಲಿ ಮಾವಿನ ಹಣ್ಣಿನ ಬಗ್ಗೆ ಜನರಿಗೆ ತಿಳಿದೇ ಇರ್ಲಿಲ್ಲವಂತೆ. 1740 ರಲ್ಲಿ ವೆಸ್ಟ್ ಇಂಡೀಸ್​ ಹಾಗು ಬ್ರೆಜಿಲ್​ಗೆ ಮಾವು ಪರಿಚಯವಾಗುತ್ತದೆ.

ಇವತ್ತು ಜಗತ್ತಿನಾದ್ಯಂತ ಮಾವಿನ ಹಣ್ಣನ್ನ ಸೇವಿಸಲಾಗ್ತಾ ಇದೆ. ಮಲೆನಾಡು, ಮಂಗಳೂರು ಸೇರಿದ ಹಾಗೆ ಹಲವು ಕಡೆಗಳಲ್ಲಿ ಮಾವಿನ ಸಾಂಬಾರು, ಗೊಜ್ಜು, ಮಾವಿನ ಚಟ್ನಿ, ಉಪ್ಪಿನ ಕಾಯಿಯಂತಹ ದೇಸಿ ಖಾದ್ಯವನ್ನ ತಯಾರಿಸಿದ್ರೆ, ವಿದೇಶಗಳಲ್ಲಿ ಮಾವಿನಿಂದ ಐಸ್​ಕ್ರೀಮ್​, ಮಾವಿನ ಮಿಲ್ಕ್​ ಶೇಕ್​, ಮಾವಿನ ಸಲಾಡ್​ ಸೇರಿದ ಹಾಗೆ ಹಲವು ರೀತಿಯಾದ ಖಾದ್ಯಗಳನ್ನ ತಯಾರಿಸಲಾಗುತ್ತೆ. ಮಾವಿನ ಹಣ್ಣಿನಲ್ಲಿ ಯಾವುದೇ ಖಾದ್ಯವನ್ನ ತಯಾರಿಸಿದ್ರು ಅಲ್ಲಿ ಮಾವಿನ ರುಚಿಯೇ ಪ್ರಧಾನವಾಗಿರುತ್ತೆ. ಹಾಗಾಗಿ ಮಾವು ಎಲ್ಲರಿಗೂ ಹೆಚ್ಚು ಇಷ್ಟವಾಗುತ್ತೆ. ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ದೇಹದ ಆಯಾಸವನ್ನ ಕಡಿಮೆ ಮಾಡುತ್ತದೆ. ಇದರಿಂದ ದೇಹಕ್ಕೆ ಚೈತನ್ಯವೂ ಸಿಗುತ್ತದೆ. ಇನ್ನು ಮಾವಿನಲ್ಲಿ ವಿಟಮಿನ್​ ಎ, ಬಿ ಹಾಗೂ ಸಿ ಜೀವಸತ್ವಗಳಿವೆ. ಇವು ಮಾವನ್ನ ಕಡಿಮೆ ಸೇವಿಸುವವರಿಗೆ ದೇಹದಲ್ಲಿ ತೂಕ ಇಳಿಸಿಕೊಳ್ಳಲು ಬೇಕಾದ ಅನೇಕ ಪೋಷಕಾಂಶವನ್ನು ಒದಗಿಸುತ್ತದೆ. ಹಾಗಂತ ಮಾವನ್ನ ಹೆಚ್ಚು ತಿಂದ್ರು ಕೂಡ ಅಪಾಯ ಎದುರಾಗುತ್ತೆ.

ಸದ್ಯಕ್ಕೆ ಈಗ ಮಾರುಕಟ್ಟೆಗೆ ಮಾವುಗಳು ಲಗ್ಗೆ ಇಡುತ್ತಿವೆ. ಆದ್ರೆ ಈ ಬಾರಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಮಾವಿನ ಬೆಲೆ ಅಧಿಕೃತವಾಗಿ ಎಷ್ಟಿರಲಿದೆ ಎಂಬ ಭಯ ಕೂಡ ಜನರಲ್ಲಿದೆ. ಇದರ ಜೊತೆಗೆ ಜಗತ್ತಿನ ಅತಿ ದುಬಾರಿ ಮಾವು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಮಿಯಾಝಾಕಿ ತಳಿಯ ಮಾವಿನ ಮೇಲೂ ಕುತೂಹಲ ಹೆಚ್ಚಾಗಿದೆ. ಯಾಕಂದ್ರೆ ಈ ಮಾವಿನ ಹಣ್ಣು ಒಂದು ಕೆಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗುತ್ತೆ. ಈ ಬಾರಿ ಈ ತಳಿಯ ಮಾವಿಗೆ ಇನ್ನೂ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ. ಇದರ ಹೆಸರೇ ಹೇಳುವ ಹಾಗೆ ಇದು ಜಪಾನಿ ತಳಿಯಾಗಿದ್ದು, ಜಪಾನಿನ ಮಿಯಾಝಾಕಿ ಇದರ ಮೂಲವಂತೆ. ಈ ತಳಿಯ ಒಂದು ಮಾವಿನ ಹಣ್ಣು ಸುಮಾರು 350 ಗ್ರಾಂನವರಗೆ ತೂಗಲಿದ್ದು, ಮಿಯಾಝಾಕಿ ತಳಿಯ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಮಾವು ವಿಟಮಿನ್ ಎ, ಸಿ ಜತೆಗೆ ತಾಮ್ರ, ಪೊಟ್ಯಾಷಿಯಮ್​​ನಂತಹ ಅನೇಕ ಖನಿಜಗಳನ್ನು ಹೊಂದಿರುತ್ತದೆ. ಇದು ದೇಹಕ್ಕೆ ಸತ್ವವನ್ನು ನೀಡುತ್ತದೆ. ಆದ್ರೆ ಹೆಚ್ಚು ಸೇವನೆ ಮಾಡಿದ್ರೆ ತೂಕ ಕೂಡ ಹೆಚ್ಚಾಗೋದ್ರಲ್ಲಿ ಅನುಮಾನವಿಲ್ಲ. ಆಹಾರ ತಜ್ಞರು ಹೇಳುವ ಪ್ರಕಾರ ದಿನಕ್ಕೆ ಗರಿಷ್ಠ ಅಂದ್ರೆ 5 ಮಾವುಗಳನ್ನಷ್ಟೇ ಸೇವನೆ ಮಾಡಬೇಕಂತೆ. ಹೆಚ್ಚು ಸೇವನೆ ಮಾಡಿದ್ರೆ ಒಣಶೀತ, ಕೆಮ್ಮಿಗೆ ಕೂಡ ಕಾರಣವಾಗಲಿದೆಯಂತೆ. ಅದ್ರಲ್ಲೂ ಶೀತ, ಜ್ವರದಂತಹ ಪರಿಸ್ಥಿತಿಯಲ್ಲಿ ಅತಿಯಾದ ಮಾವು ಸೇವನೆ ಸ್ವಲ್ಪ ಅಪಾಯ ತಂದೊಡ್ಡಬಹುದು ಅಂತಾ ಹಲವರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಒಟ್ಟಾರೆಯಾಗಿ ಇದೀಗ ಮಾವಿನ ಸೀಸನ್​ ಆರಂಭವಾಗಿದೆ. ಹಿತಮಿತವಾಗಿ ಭಿನ್ನ-ವಿಭಿನ್ನ ಮಾವಿನ ಹಣ್ಣುಗಳನ್ನ ಸವಿಯುವುದು ಉತ್ತಮ ಎಂಬುದು ಆಹಾರತಜ್ಞರು ನೀಡುವ ಸಲಹೆ.

 

- Advertisment -

Most Popular

Recent Comments