Tuesday, January 18, 2022
Powertv Logo
HomePower Specialನೀರಿನ ಒಪ್ಪಂದಕ್ಕೆ ಜೋರ್ಡಾನ್​ ಪ್ರಜೆಗಳು ಕೆಂಡ

ನೀರಿನ ಒಪ್ಪಂದಕ್ಕೆ ಜೋರ್ಡಾನ್​ ಪ್ರಜೆಗಳು ಕೆಂಡ

ಹಲವು ವರ್ಷಗಳಿಂದ ಹಳಸಿದ್ದ ಇಸ್ರೇಲ್​ ಹಾಗು ಜೋರ್ಡಾನ್​ ಸಂಬಂಧ ಈಗ ಸುಧಾರಿಸುವ ಹಂತಕ್ಕೆ ಬರುತ್ತಿದೆ. ಹೀಗಾಗಿ ಈ ಎರಡೂ ರಾಷ್ಟ್ರಗಳು ವಿದ್ಯುತ್​ ಹಾಗು ಜಲ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ಇನ್ನೇನು ಎಲ್ಲಾ ಸರಿಯಾಯ್ತು, ಮಧ್ಯ ಪ್ರಾಚ್ಯದಲ್ಲಿ ಹೊಸ ಸಂಬಂಧ ಚಿಗುರೊಡೆಯಿತು ಅನ್ನೋ ಭಾವನೆ ಮೂಡಿತ್ತು. ಆದ್ರೆ ಈಗ ಸ್ವತಃ ಜೊರ್ಡಾನ್​ ಪ್ರಜೆಗಳೇ ಈ ಹೊಸ ಗೆಳೆತನವನ್ನ ಹೊಸಕಿ ಹಾಕ್ತಿದ್ದಾರೆ. ಅರೆ ಇದ್ಯಾಕೆ ಇವ್ರು ಹೀಗ್​ ಮಾಡ್ತಾ ಇದ್ದಾರೆ ಅಂತ ಯೋಚ್ನೆ ಮಾಡ್ತಾ ಇದ್ದೀರಾ?

ಮಧ್ಯಪ್ರಾಚ್ಯದ ರಾಷ್ಟ್ರಗಳೇ ಹಾಗೆ, ಸದಾ ಒಂದಲ್ಲ ಒಂದು ಬೆಂಕಿಯ ಬೇಗುದಿಯಲ್ಲಿ ಬೇಯ್ತಾನೆ ಇರುತ್ತವೆ. ಒಂದು ಕಡೆ ಇಸ್ಲಾಂ ರಾಷ್ಟ್ರಗಳ ನಡುವೆ ಷಿಯಾ-ಸುನ್ನಿ ಅನ್ನೋ ಸಂಘರ್ಷ ನಡೀತಾ ಇದ್ರೆ, ಮತ್ತೊಂದು ಕಡೆ ಯಹೂದಿ ರಾಷ್ಟ್ರವಾದ ಇಸ್ರೇಲ್​ ವಿರುದ್ಧ ಎಲ್ಲಾ ಇಸ್ಲಾಂ ರಾಷ್ಟ್ರಗಳು ಒಂದಾಗಿ ಸಂಘರ್ಷಕ್ಕೆ ಇಳಿದಿವೆ. ಇನ್ನು ಕಳೆದ ಒಂದು ವರ್ಷದಿಂದ ಇಸ್ರೇಲ್​ ಹಾಗು ಪ್ಯಾಲೆಸ್ಟೈನ್​ ನಡುವಿನ ಎಲ್ಲಾ ಸಂಬಂಧಗಳು ಸಂಪೂರ್ಣವಾಗಿ ಅಳಿಸಿ ಹೋಗಿವೆ. ಇದೀಗ ಈ ಎರಡೂ ರಾಷ್ಟ್ರಗಳ ನಡುವೆ ಇನ್ನೂ ಕೂಡ ಸಂಘರ್ಷ ಹಾಗು ಯುದ್ಧಪೀಡಿತ ವಾತಾವರಣ ನಿರ್ಮಾಣವಾಗಿದೆ.. ಸದ್ಯಕ್ಕೆ ಈ ವಿಚಾರ ಜಾಗತಿಕವಾಗಿ ಕೂಡ ಗಮನಸೆಳೆದಿದ್ದು ಕೆಲ ರಾಷ್ಟ್ರಗಳು ಇಸ್ರೇಲ್​ ಪರ ನಿಂತರೆ, ಇನ್ನೂ ಕೆಲ ರಾಷ್ಟ್ರಗಳು ಪ್ಯಾಲೆಸ್ಟೈನ್​ ಪರವಾಗಿ ನಿಂತುಕೊಂಡಿವೆ.

ಇನ್ನು ಈ ಇಸ್ರೇಲ್​ ಕೂಡ ಇದುವರೆಗೆ ತನ್ನ ಸುತ್ತಲಿನ ಎಲ್ಲಾ ರಾಷ್ಟ್ರಗಳೊಂದಿಗೆ ಶತ್ರುತ್ವವನ್ನ ಬೆಳೆಸಿಕೊಂಡು ಬಂದಿದೆ. ಇದೆಲ್ಲಾ ಮೇಲ್ನೋಟಕ್ಕೆ ಗಡಿ ವಿಚಾರಕ್ಕೆ ಈ ವಿವಾದ ಅಂತ ಅಂದುಕೊಳ್ಳುವ ಹಾಗಿದ್ರೂ, ಇದು ಯಹೂದಿಗಳು ಹಾಗು ಇಸ್ಲಾಂ ಅನುಯಾಯಿಗಳ ನಡುವಿನ ವಿವಾದ ಅಂತ ವರ್ಣಿಸಲಾಗ್ತಾ ಇದೆ. ಹೀಗಾಗಿ ಈ ದೈತ್ಯ ರಾಷ್ಟ್ರಗಳ ವಿರುದ್ಧ ಸದಾ ಯುದ್ಧಕ್ಕೆ ಸಿದ್ಧವಾಗಿರುತ್ತೆ ಇಸ್ರೇಲ್. ತನ್ನ ದೇಶಕ್ಕೆ ಏನೇ ತೊಂದ್ರೆ ಬಂದ್ರು ತನ್ನ ದೇಶದ ಒಬ್ಬ ಪ್ರಜೆ ಸತ್ರೂ ಅದಕ್ಕೆ ಕಾರಣರಾದವರನ್ನ ಹುಡುಕಿ ಕೊಲ್ಲದೇ ಬಿಡೋದಿಲ್ಲ ಈ ದೇಶ. ಹಾಗಾಗಿ ಇಸ್ರೇಲ್​ನ ಬುದ್ಧಿ ಗೊತ್ತಿರೋದ್ರಿಂದಲೇ ಈ ಇಸ್ರೇಲ್ ಜೊತೆ ಸುಖಾಸುಮ್ಮನೆ ಜಗಳ ಯಾಕೆ ಅಂತ ಹಲವು ರಾಷ್ಟ್ರಗಳು ಈ ಪುಟ್ಟ ರಾಷ್ಟ್ರದ ಗೆಳೆತನ ಮಾಡೋದಕ್ಕೆ ಮುಂದೆ ಬಂದಿವೆ.

ಇದೇ ಸಾಲಿಗೆ ಇದೀಗ ಜೋರ್ಡಾನ್​ ಸೇರ್ಪಡೆಯಾಗ್ತಾ ಇತ್ತು. ಇದಕ್ಕಾಗಿ ಎಲ್ಲಾ ರೀತಿಯಾದ ತಯಾರಿಗಳನ್ನ ನಡೆಸಿದ್ದ ಜೋರ್ಡಾನ್,​ ತನ್ನ ದೇಶದ ಪ್ರಜೆಗಳ ರಕ್ಷಣೆಗಾಗಿ ಹಾಗು ಶಾಂತಿ ಸ್ಥಾಪನೆಗಾಗಿ ಇಸ್ರೇಲ್​ ಜೊತೆ ಸಂಬಂಧ ಸುಧಾರಣೆಯತ್ತ ಹೆಜ್ಜೆ ಹಾಕಿತ್ತು. ಈ ವಿಚಾರವಾಗಿ ಇಸ್ರೇಲ್​ ಜೊತೆ ಮೊನ್ನೆ ಮೊನ್ನೆಯಷ್ಟೇ ಒಂದು ಒಪ್ಪಂದಕ್ಕೆ ಜೋರ್ಡಾನ್​ ಸಹಿ ಹಾಕಿತ್ತು. ಆದ್ರೆ ಇದೀಗ ಇದೇ ಒಪ್ಪಂದ ಜೋರ್ಡಾನ್​ನ ಪ್ರಜೆಗಳ ಆಕ್ರೋಶಕ್ಕೆ ಕಾರಣವಾಗಿದೆ.. ಅರೆ ಈ ಒಪ್ಪಂದ ಚೆನ್ನಾಗಿದೆ ಅಲ್ವಾ? ಒಂದು ವೇಳೆ ಈ ಒಪ್ಪಂದ ಕಾರ್ಯ ರೂಪಕ್ಕೆ ಬಂದ್ರೆ ಈ ಎರಡೂ ದೇಶಗಳಲ್ಲಿ ಶಾಂತಿ ನೆಲೆಸೋ ಹಾಗಾಗುತ್ತಲ್ವಾ? ಆದ್ರೆ ಇವ್ರ್ಯಾಕೆ ಈ ರೀತಿ ಪ್ರತಿಭಟನೆ ಮಾಡ್ತಾ ಇದ್ದಾರೆ ಅಂತ ಹಲವರು ಅನುಮಾನ ವ್ಯಕ್ತ ಪಡಿಸ್ತಿದ್ದಾರೆ.. ಆದ್ರೆ ಇಲ್ಲಿ ವಿಷ್ಯ ಅದಲ್ಲ, ಬದಲಿಗೆ ಇಲ್ಲಿ ಆಗ್ತಾ ಇರೋದು ಕೇವಲ ಬಿಸಿನೆಸ್​ ಒಪ್ಪಂದವಷ್ಟೇ.. ಇದು ಎರಡೂ ರಾಷ್ಟ್ರಗಳ ಸಂಬಂಧ ಸುಧಾರಿಸುತ್ತೆ ಅಂತ ಹೇಳೋದಕ್ಕೆ ಸಾಧ್ಯವಿಲ್ಲ. ಬದಲಾಗಿ ಇದ್ರಿಂದ ತೊಂದರೆಗಳೇ ಹೆಚ್ಚು ಅಂತ ಹೇಳಲಾಗ್ತಿದೆ.

ಅಷ್ಟಕ್ಕೂ ಮೊನ್ನೆ ನಡೆದ ಈ ಒಪ್ಪಂದದ ಪ್ರಕಾರ ಜೋರ್ಡಾನ್​ಗೆ ಇಸ್ರೇಲ್​ 200 ಮಿಲಿಯನ್​ ಕ್ಯೂಬಿಕ್​ ಲೀಟರ್​ ಲವಣ ರಹಿತ ನೀರನ್ನ ಕೊಡಬೇಕು. ಇದಕ್ಕೆ ಪ್ರತಿಯಾಗಿ ಜೋರ್ಡಾನ್​ ತನ್ನಲ್ಲಿರುವ ಯುಎಇ ಅನುದಾನಿತ ಸೌರ ವಿದ್ಯುತ್​ ಘಟಕದಿಂದ ಇಸ್ರೇಲ್​ಗೆ 600 ಮೆಗಾವ್ಯಾಟ್​ ವಿದ್ಯುತ್​ ಒದಗಿಸಬೇಕು. ಒಂದು ವೇಳೆ ಈ ಒಪ್ಪಂದ ಕಾರ್ಯ ರೂಪಕ್ಕೆ ಬಂದ್ರೆ ಇಸ್ರೇಲ್​ ಹಾಗು ಜೋರ್ಡಾನ್​ ನಡುವೆ 27 ವರ್ಷಗಳ ಹಿಂದೆ ನಡೆದಿದ್ದ ಶಾಂತಿ ಒಪ್ಪಂದ ಕಾರ್ಯ ರೂಪಕ್ಕೆ ಬಂದ ಹಾಗೆ ಆಗ್ತಾ ಇತ್ತು. ಆದ್ರೆ ಈ ಒಪ್ಪಂದ ಶಾಶ್ವತವಾಗಿ ಎರಡೂ ದೇಶಗಳ ನಡುವೆ ಶಾಂತಿ ಸ್ಥಾಪಿಸುತ್ತೆ ಅಂತ ಹೇಳೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ನಾಳೆ ಒಂದು ವೇಳೆ ಇಸ್ರೇಲ್​​ ನೇರವಾಗಿ ಪ್ಯಾಲೆಸ್ಟೈನಿಗಳ ವಿರುದ್ಧನೋ ಅಥವಾ ಸಿರಿಯಾ ವಿರುದ್ಧನೋ ಯುದ್ಧ ಘೋಷಿಸಿದ್ರೆ ಆಗ ಜೋರ್ಡಾನ್​ ತಮ್ಮ ಮತದ ಅನುಯಾಯಿ ರಾಷ್ಟ್ರಗಳ ಬೆಂಬಲಕ್ಕೆ ನಿಲ್ಲಲೇ ಬೇಕಾಗುತ್ತೆ. ಆಗ ಇಸ್ರೇಲ್​ ಮತ್ತು ಜೋರ್ಡಾನ್​ ಸಂಬಂಧ ಹಾಳಾಗೋದ್ರಲ್ಲಿ ಅನುಮಾನವಿಲ್ಲ

ಇನ್ನು ಈ ಒಪ್ಪಂದವೇನು ಜೋರ್ಡಾನ್​ಗೆ ಅತ್ಯಗತ್ಯವೇನೂ ಅಲ್ಲ.. ಆದ್ರೆ ಅಲ್ಲಿನ ಸರ್ಕಾರಕ್ಕೆ ಇದು ರಾಜತಾಂತ್ರಿಕವಾದ ಮಾರ್ಗವಾಗಿದೆ. ಮುಂದೆ ಏನಾದ್ರೂ ತೊಂದ್ರೆ ಆದಾಗ ಅಲ್ಲಿ ಇಸ್ರೇಲ್​ ಜೋರ್ಡಾನ್​ ವಿರುದ್ಧ ಯಾವುದೇ ರೀತಿಯಾದ ಕ್ಷಿಪ್ರ ಕ್ರಮವನ್ನ ತೆಗೆದುಕೊಳ್ಳೋದಕ್ಕೆ ಸಾಧ್ಯವಿಲ್ಲ. ಇನ್ನು ಈ ಒಪ್ಪಂದ ಜೋರ್ಡಾನ್​ನ ಸರ್ಕಾರಕ್ಕೆ ಬೇಕಾಗಿದ್ರೆ, ಅಲ್ಲಿನ ಪ್ರಜೆಗಳಿಗೆ ಮಾತ್ರ ಈ ಒಪ್ಪಂದ ಒಂಚೂರು ಇಷ್ಟವಿಲ್ಲ. ಯಾಕಂದ್ರೆ ಜೋರ್ಡಾನ್​ ಈ ಹಿಂದಿನಿಂದಲೂ ಪ್ಯಾಲೆಸ್ಟೈನಿಗಳಿಗೆ ಬೆಂಬಲ ಕೊಟ್ಟುಕೊಂಡು ಬಂದಿದೆ. ಈ ಎರಡೂ ರಾಷ್ಟ್ರಗಳ ಜನರು ಸಹೋದರತ್ವದ ಭಾವನೆಯಿಂದ ಬದುಕುವಷ್ಟರ ಮಟ್ಟಿಗಿನ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ಹೀಗಾಗಿಯೇ ಅಲ್ಲಿನ ಜನ ನಾವೂ ಬದುಕಬೇಕು, ಪ್ಯಾಲೆಸ್ಟೈನಿಯರನ್ನೂ ಬದುಕಲು ಬಿಡಬೇಕು ಅಂತ ಘೋಷಣೆಗಳನ್ನ ಕೂಗ್ತಿದ್ದಾರೆ.. ಹೀಗಾಗಿ ಇದು ಜೋರ್ಡಾನ್​ ಸರ್ಕಾರಕ್ಕೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿರುವಂತೆ ಭಾಸವಾಗ್ತಿದೆ..

ಒಟ್ಟಾರೆಯಾಗಿ ಈಗ ಜೋರ್ಡಾನ್​ನಲ್ಲಿ ಜನಸಾಮಾನ್ಯರು ನಡೆಸ್ತಾ ಇರೋ ಹೋರಾಟ ಜಾಗತಿಕವಾಗಿ ಸುದ್ಧಿಯಾಗ್ತಾ ಇದೆ. ಜೊತೆಗೆ ಜೋರ್ಡಾನ್ ಹಾಗು ಪ್ಯಾಲೆಸ್ಟೈನ್​​​​ ಸಂಬಂಧ ಕೂಡ ಮುರಿದು ಬೀಳೊ ಸಾಧ್ಯತೆ ಇದೆ ಅಂತ ಹೇಳಲಾಗ್ತಾ ಇದೆ.. ಹೀಗಾಗಿ ಮುಂದಿನ ದಿನಗಳಲ್ಲಿ ಈ ವಿಚಾರ ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋದಕ್ಕೆ ಕಾಲವೇ ಉತ್ತರ ಕೊಡಬೇಕಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments