ವಿಜಯಪುರ : ಆಧುನಿಕತೆಯ ಭರಾಟೆಯಲ್ಲಿ ಅದೆಷ್ಟೋ ಅರ್ಥಪೂರ್ಣ ಆಚರಣೆಗಳು ಮೂಲೆ ಹಿಡಿದಿವೆ. ಇದರಲ್ಲಿ ಜೋಕುಮಾರಸ್ವಾಮಿ ಹಬ್ಬ ಕೂಡ ಒಂದು. ಕಾಮನನ್ನ ಪೂಜಿಸುವಂತೆ ಉತ್ತರ ಕರ್ನಾಟಕದಲ್ಲಿ ಕಾಮುಕ ಜೋಕುಮಾರನನ್ನು ಪೂಜೆ ಮಾಡ್ತಾರೆ. ಕುಂಬಾರ ಮನೆಯಲ್ಲಿ ಹುಟ್ಟಿದ ಜೋಕುಮಾರನನ್ನ ತಳವಾರ ಸಮುದಾಯದ ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಮನೆ ಮನೆಗೆ ಹೋಗ್ತಾರೆ. ಮಕ್ಕಳಾಗದವರು ಮಣ್ಣಿನ ಜೋಕುಮಾರ ಸ್ವಾಮಿಗೆ ಬೆಣ್ಣೆ ಹಚ್ಚಿ ಪೂಜೆ ಮಾಡ್ತಾರೆ. ರೈತ ಸಮೂದಾಯದವರು ಕಾಳು, ಧಾನ್ಯಗಳನ್ನ ನೀಡಿ ಮಳೆಗಾಗಿ ಪ್ರಾರ್ಥಿಸುತ್ತಾರೆ. ಈ ಸಂಪ್ರದಾಯವೀಗ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜೀವಂತವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಹತ್ತ ಹಲವು ಆಚರಣೆಗಳು, ಸಂಪ್ರದಾಯಗಳಲ್ಲಿ ಜೋಕುಮಾರ ಸ್ವಾಮಿ ಆರಾಧನೆಯು ಒಂದು. ಗಣೇಶ ಚತುರ್ಥಿಯ ನಂತರ ಗಣೇಶ ಹೋದ ಮೇಲೆ ಬರೋದೆ ಜೋಕುಮಾರನ ಹಬ್ಬ. ಗಣೇಶನಂತೆಯೇ ಜೋಕುಮಾರ ಕೂಡ ಪಾರ್ವತಿ ಪರಮೇಶ್ವರನ ಪುತ್ರ ಎನ್ನಲಾಗುತ್ತೆ. ಹರಿಜನ ಸಮುದಾಯದಲ್ಲಿ ಹುಟ್ಟುವ ಜೋಕುಮಾರನಿಗೆ ಕುಂಬಾರ ಸಮುದಾಯದವರು ಮಣ್ಣಿನಲ್ಲಿ ಮೂರ್ತಿ ಮಾಡಿ ಜೀವ ನೀಡ್ತಾರೆ. ಬಡಿಗ ಸಮುದಾಯದವರು ಕಣ್ಣು ಕೊಡ್ತಾರೆ. ಹಾಗೇ ಜೋಕುಮಾರನನ್ನ ಬುಟ್ಟಿಯಲ್ಲಿಟ್ಟುಕೊಂಡು ಗೌಡರು, ರೈತರ ಮನೆಗಳಿಗೆ ಹೊಗೋರು ತಳವಾರ ಸಮುದಾಯದವರು.
ಈ ವೇಳೆ ಜೋಕುಮಾರನ ಕುರಿತಾದ ಹಾಡು ಹೇಳ್ತಾರೆ. ಗಣೇಶನ ಹಬ್ಬದ ನಂತರ 9 ದಿನಗಳ ಕಾಲ ಜೋಕುಮಾರನ ಆರಾಧನೆ ಮಾಡಲಾಗುತ್ತೆ. ರೈತರು ತಾವು ಬೆಳೆದ ಕಾಳು, ದವಸ-ಧಾನ್ಯಗಳನ್ನ ನೀಡಿ ಪೂಜೆ ಮಾಡ್ತಾರೆ. ಹೀಗೆ ಮನೆ-ಮನೆ ಅಡ್ಡಾಡುವ ಜೋಕುಮಾರ ಪೂಜೆಗೊಂಡು ಜೋಕುಮಾರನ ಹುಣ್ಣಿಮೆಯಂದು ಕೆರೆಯ ದಡದಲ್ಲಿ ಮಡಿವಾಳ ಕಟ್ಟೆಯಲ್ಲಿ ಸಾಯ್ತಾನೆ ಅನ್ನೋ ನಂಬಿಕೆ ಇದೆ. ಹೀಗೆ ಬಂದು ಹೋಗುವ ಜೋಕುಮಾರ ಮಳೆ ತರ್ತಾನೆ ಅನ್ನೋ ನಂಬಿಕೆ ರೈತಾಪಿ ಸಮುದಾಯದಲ್ಲಿ ಗಾಢವಾಗಿದೆ.
ಜೋಕುಮಾರನ ಹಬ್ಬದ ಹಿಂದೆ ಒಂದು ಐತಿಹ್ಯವಿದೆ. ಹುಟ್ಟವಾಗ ತಾನು ಸ್ಪುರದೃಪಿಯಾಗರ್ಬೇಕು ಅಂತ ಶಿವನ ಬಳಿ ವರ ಪಡೆದು ಭೂಮಿಗೆ ಬಂದ ಜೋಕುಮಾರ ಕಾಮುಕನಾಗಿರ್ತಾನೆ. ಈತನ ಕಾಮುಕತನಕ್ಕೆ ಮಹಿಳೆಯರೆಲ್ಲಾ ತೀವ್ರ ತೊಂದರೆಗೆ ಒಳಗಾಗುತ್ತಾರಂತೆ. ಹೀಗಾಗಿ ಮಹಿಳೆಯರು ನೊಂದು ಜೋಕುಮಾರನಿಗೆ ನೀನು ಕೂರುಪಿಯಾಗಬೇಕೆಂದು ಶಾಪ ಹಾಕುತ್ತಾರಂತೆ. ಕಾಮಚೇಷ್ಟೆ ನಿಲ್ಲದೆ ಇದ್ದಾಗ ಒಂದು ಕೋಮಿನ ಮಹಿಳೆಯರು ಈತನ ಕಾಮಚೇಷ್ಟೆಗೆ ಬೇಸತ್ತು ನದಿಪಾತ್ರದಲ್ಲಿ ಜೋಕುಮಾರನನ್ನು ಕೊಲೆ ಮಾಡಿ ಮಡಿವಾಳರ ಕಲ್ಲಿನ ಕೆಳಗೆ ಬಿಸಾಕಿ ಹೋಗಿರ್ತಾರಂತೆ. ಇದರ ಪ್ರತೀಕವಾಗಿ 9 ದಿನಗಳ ಕಾಲ ಜೋಕುಮಾರನನ್ನ ಆರಾಧನೆ ಮಾಡಲಾಗುತ್ತೆ. ಪರಸ್ತ್ರೀಯರನ್ನ ಗೌರವಿಸಬೇಕು ಅನ್ನೋದನ್ನ ಈ ಮೂಲಕ ಜನಪದರು ಹೇಳಿದ್ದಾರೆ.
ಇನ್ನು ವಿಶೇಷ ಅಂದ್ರೆ ಮಕ್ಕಳಿಲ್ಲದವರು ಜೋಕುಮಾರನ ಮುಖ ಹಾಗೂ ಗುಪ್ತಾಂಗಕ್ಕೆ ಬೆಣ್ಣೆ ಹಚ್ಚಿ ಪೂಜೆ ಮಾಡಿದ್ರೆ ಮಕ್ಕಳಾಗುತ್ತೆ ಅನ್ನೋ ನಂಬಿಕೆ ಇದೆ. ಕಣ್ಣಿನ ಸೊಂಕಿಗೆ ಒಳಗಾದವರು ಈ ಬೆಣ್ಣೆಯನ್ನ ಹಚ್ಚಿಕೊಳ್ತಾರೆ. ಮಣ್ಣಿನಲ್ಲಿ ತಯಾರಿಸಿರುವ ಜೋಕುಮಾರನ ಮೂರ್ತಿ ಬಿರುಕು ಬಿಟ್ರೆ ಆ ವರ್ಷ ಉತ್ತಮವಾಗಿ ಮಳೆಯಾಗತ್ತೆ ಅನ್ನೋ ನಂಬಿಕೆಯು ಇದೆ. ಹೀಗಾಗಿ ಈ ಜೋಕುಮಾರ ಹಬ್ಬ ತೀರಾ ವಿಶೇಷ ಎನಿಸಿಕೊಂಡಿದೆ.
ಒಟ್ಟಾರೆ, ಪರಸ್ತ್ರೀಯರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಕಾಮುಕನಾಗಿ ವರ್ತಿಸಬಾರದು, ಯಾವುದೇ ಮಹಿಳೆಯನ್ನು ಕೆಟ್ಟ ದೃಷ್ಟಿಯಿಂದ ನೊಡಬಾರದು. ಇಲ್ಲದಿದ್ದರೆ ಅಂಥವರಿಗೆ ಕೆಟ್ಟ ಪರಿಣಾಮ ಆಗುತ್ತದೆ ಎಂಬ ತತ್ವ ಜೋಕುಮಾರನ ಹಬ್ಬದಲ್ಲಿ ಅಡಗಿದೆ. ನಮ್ಮ ಜನಪದ ಸಾಹಿತ್ಯದ ಮೂಲಕ ಜೋಕುಮಾರನ ಬಗ್ಗೆ ಹಾಡುಗಳಿವೆ ಅಂಥ ಹಾಡುಗಳ ಮೂಲಕ ತಿಳವಳಿಕೆಯನ್ನೂ ನೀಡಲಾಗುತ್ತಿದೆ.
-ಸುನೀಲ್ ಭಾಸ್ಕರ