ಮುಂಬೈ : ಉಚಿತ ಕರೆ ಮತ್ತು ಅಗ್ಗದ ದರದಲ್ಲಿ ಇಂಟರ್ನೆಟ್ ಸೇವೆ ನೀಡಿ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದ ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಕಂಪೆನಿ ಇದೀಗ ಆನ್ಲೈನ್ ಮಾರಾಟ ಮತ್ತು ವಹಿವಾಟು ಕ್ಷೇತ್ರಕ್ಕೂ ಕಾಲಿಟ್ಟಿದೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮಾದರಿಯಲ್ಲಿ ಆನ್ಲೈನ್ ಸೇವೆ ಒದಗಿಸುವ ಜಿಯೋ ಮಾರ್ಟ್ ಸೇವೆ ಸಧ್ಯ ಮುಂಬೈನಲ್ಲಿ ಪ್ರಾರಂಭವಾಗಿದೆ.
ಪ್ರಾಯೋಗಿಕವಾಗಿ ಮುಂಬೈನ ನವಿಮುಂಬೈ, ಥಾಣೆ ಮತ್ತು ಕಲ್ಯಾಣ್ನಲ್ಲಿ ಸೇವೆ ಆರಂಭಿಸಿರುವ `ಜಿಯೋ ಮಾರ್ಟ್’ ಸಧ್ಯದಲ್ಲೇ ದೇಶವ್ಯಾಪ್ತಿ ಸೇವೆ ವಿಸ್ತರಿಸೋ ಗುರಿ ಹೊಂದಿದೆ.
3 ಕೋಟಿ ಚಿಲ್ಲರೆ ರಿಟೈಲರ್ಗಳ ಮೂಲಕ ದೇಶದ 20 ಕೋಟಿ ಕುಟುಂಬಗಳನ್ನು ತಲುಪಬೇಕೆಂಬ ಗುರಿ ಜಿಯೋ ಮಾರ್ಟ್ನದ್ದು. ಜಿಯೋ ಮಾರ್ಟ್ನಲ್ಲಿ ಸುಮಾರು 50,000ಕ್ಕೂ ಹೆಚ್ಚಿನ ಉತ್ಪನ್ನಗಳು ಲಭ್ಯವಿದ್ದು , ಯಾವುದೇ ಕನಿಷ್ಠ ಪ್ರಮಾಣದ ಖರೀದಿಯ ಅವಶ್ಯಕತೆಯಿಲ್ಲದೇ , ಮನೆಗೆ ಉಚಿತ ವಿತರಣೆ ಸೌಲಭ್ಯ ಮತ್ತು ತ್ವರಿತಗತಿ ವಿತರಣೆಯ ಸೇವೆ ನೀಡುವ ಭರವಸೆ ನೀಡಿದೆ.
ಜಿಯೋ ಮೂಲಕ ಬೇರೆ ಟೆಲಿಕಾಂ ಇತರೆ ಕಂಪೆನಿಗಳಿಗೆ ಭಾರಿ ಹೊಡೆತ ನೀಡಿದ್ದ ರಿಲಾಯನ್ಸ್ , ಈಗ ಆನ್ಲೈನ್ ವಹಿವಾಟಿಗೂ ಕಾಲಿಟ್ಟಿದ್ದು, ಈಗಾಗಲೇ ಬೇರೂರಿರುವ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲಿದೆಯಾ ಎಂಬುದನ್ನು ಕಾದು ನೋಡಬೇಕು.