ಮೈಸೂರು: ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿ ಮೈಸೂರು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಡನ್ ಸುದ್ದಿಗೋಷ್ಠಿ ನಡೆಸಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ತಮ್ಮ ಅಸಹಾಯಕತೆಯನ್ನ ತೋಡಿಕೊಂಡ್ರು.
ಸಂಜೆವರೆಗೂ ಪಟ್ಟು ಸಡಿಲಿಸದ ಜೆಡಿಎಸ್ನ ಸ್ಥಳೀಯ ನಾಯಕರು ವರಿಷ್ಠರ ತೀರ್ಮಾನವನ್ನು ಪಾಲಿಸಿದ್ದಾರೆ. ವೈಯುಕ್ತಿಕ ಅಭಿಪ್ರಾಯವನ್ನು ಬದಿಗೊತ್ತಿ, 32 ತಿಂಗಳ ಬಿಜೆಪಿ ಜೊತೆಗಿನ ಮೈತ್ರಿಗೆ ಎಳ್ಳುನೀರು ಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಕೈ-ತೆನೆ ಪಕ್ಷಗಳು ಒಂದಾಗಿ ಹೋಗುತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ ಅಂತಿದ್ದಾರೆ ಸ್ಥಳೀಯ ಕಾಂಗ್ರೆಸ್ ನಾಯಕರು.
ಸದ್ಯ ಜಿಲ್ಲಾ ಪಂಚಾಯಿತಿಯಲ್ಲಿ ಉಳಿದ ಅವಧಿಯನ್ನು ಒಂದೊಂದು ವರ್ಷ ಹಂಚಿಕೆ ಮಾಡಿಕೊಳ್ಳುವ ಒಡಂಬಡಿಕೆ ಆಗಿದೆ. ಮೊದಲ ವರ್ಷ ಜೆಡಿಎಸ್ಗೆ ಅಧ್ಯಕ್ಷ ಸ್ಥಾನ, ಕಾಂಗ್ರಸ್ ಗೆ ಉಪಾಧ್ಯಕ್ಷ ಸ್ಥಾನ. ಎರಡನೇ ವರ್ಷ ಕಾಂಗ್ರಸ್ ಗೇ ಅಧ್ಯಕ್ಷ ಸ್ಥಾನ ಹಾಗೂ ಜೆಡಿಎಸ್ ಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವ ಒಪ್ಪಂದ ಮಾಡಿಕೊಳ್ಳಲಾಗಿದೆ.
32 ತಿಂಗಳು ಕುಚ್ಚಿಕ್ಕು ಕುಚ್ಚಿಕ್ಕು ಅಂತಿದ್ದ ಜೆಡಿಎಸ್ ದಿಢೀರನೇ ಬಣ್ಣ ಬದಲಿಸಿದೆ. ಹೈಕಮಾಂಡ್ ನಿರ್ಧಾರ ಸ್ಥಳೀಯ ತೆನೆ ನಾಯಕರಲ್ಲಿ ಮುಜುಗರ ಮೂಡಿಸಿದ್ರೆ, ಅಧ್ಯಕ್ಷ ಗಾದಿಗಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿತಾ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರ್ತಿದೆ. ಜೆಡಿಎಸ್ನ ಹೊಸ ವರಸೆಗೆ ಕಮಲ ಪಡೆ ಅಧಿಕಾರ ಕಳೆದುಕೊಂಡು ಕಂಗಾಲಾಗಿದೆ.