ಕೊಪ್ಪಳ : ಜಿಲ್ಲೆಯ ಭಾನಾಪೂರ ಗ್ರಾಮದ ಬಳಿ ಆಟಿಕೆ ಕ್ಲಸ್ಟರ್ ನಿರ್ಮಾಣವಾಗುತ್ತಿದೆ. ಗ್ರಾಮದ ಹೊರವಲಯದಲ್ಲಿ 400 ಎಕರೆ ಪ್ರದೇಶದಲ್ಲಿ ಏಕಸ್ ಎನ್ನುವ ಕಂಪನಿ 5 ಸಾವಿರ ಕೋಟಿ ಬಂಡವಾಳದೊಂದಿಗೆ ಆಟಿಕೆ ಕ್ಲಸ್ಟರ್ ನಿರ್ಮಾಣ ಮಾಡುತ್ತಿದೆ. ಈ ಹಿಂದಿನ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಈ ಆಟಿಕೆ ಕ್ಲಸ್ಟರ್ ಗೆ ಅನುಮೋದನೆ ನೀಡಲಾಗಿತ್ತು. ಆದರೆ ಆಗ ಅನುಷ್ಠಾನಕ್ಕೆ ಬಂದಿದ್ದಿಲ್ಲ. ಆದರೆ ಈಗೀನ ಬಿಜೆಪಿ ಸರಕಾರದಲ್ಲಿ ಈ ಆಟಿಕೆ ಕ್ಲಸ್ಟರ್ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಇಂದು ಸಿಎಂ ಬಿ ಎಸ್ ಯಡಿಯೂರಪ್ಪ ಭೂಮಿ ಪೂಜೆ ನೆರವೆರಿಸಿದರು. ಈ ವೇಳೆ ಮಾತನಾಡಿದ ಸಿಎಂ ಆಟಿಕೆ ಕ್ಲಸ್ಟರ್ ನಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗಲಿದ್ದು, ಇದರ ಉದ್ಘಾಟನೆಗೆ ಖುದ್ದು ಪ್ರಧಾನಿ ಮೋದಿಯವರನ್ನೇ ಕರೆಸುವುದಾಗಿ ತಿಳಿಸಿದರು. ಇನ್ನು ಬೆಳಗಾವಿ ಮೂಲದ ಏಕಸ್ ಎನ್ನುವ ಕಂಪನಿಯ ಅರವಿಂದ್ ಮೆಳ್ಳಿಗೇರಿ ಎನ್ನುವರು ಆತ್ಮನಿರ್ಭರ ಯೋಜನೆಯಡಿ ಈ ಕ್ಲಸ್ಟರ್ನ ನಿರ್ಮಾಣ ಮಾಡುತ್ತಿದ್ದಾರೆ. ಈ ಕ್ಲಸ್ಟರ್ನಲ್ಲಿ ಚೀನಾ, ಅಮೇರಿಕಾ ಸೇರಿದಂತೆ ವಿವಿಧ ದೇಶಗಳ 6 ಕಂಪನಿಗಳು ಈಗಾಗಲೇ ಒಡಂಬಡಿಕೆ ಮಾಡಿಕೊಂಡಿವೆ. ಈ ಕಂಪನಿಗಳು ಇಲ್ಲಿ ಆಟಿಕೆ ವಸ್ತುಗಳನ್ನು ತಯಾರಿಸಿ ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡುತ್ತವೆ. ಇದರಿಂದಾಗಿ ಸಹಜವಾಗಿಯೇ ರಾಜ್ಯದ ಆರ್ಥಿಕ ಸ್ಥಿತಿಗತಿಯೂ ಸಹ ಸುಧಾರಿಸಲಿದ್ದು, ಹೆಚ್ಚಿನ ಉದ್ಯೋಗ ಅವಕಾಶಗಳು ದೊರಕಲಿವೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಿರಿಕ್ ಮಾಡಿದರು. ನನ್ನನ್ನು ಕಾರ್ಯಕ್ರಮಕ್ಕೆ ಕರೆದು ಅವಮಾನಿಸಲಾಗಿದೆ ಎಂದರು. ಆದರೆ ಸಿಎಂ ಗರಂ ಆದ ಬಳಿಕ ರಾಯರೆಡ್ಡಿ ಸುಮ್ಮನಾದರು. ಚೀನಾಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವುದು ನಿಜಕ್ಕೂ ಹೆಮ್ಮೇಯ ಸಂಗತಿಯೇ.