Thursday, December 1, 2022
Powertv Logo
Homeವಿದೇಶಧೋನಿ- ಜಾಧವ್​ ಕಮಾಲ್​ - ಗೆಲುವಿನ ಹಳಿಗೆ ಮರಳಿದ ಕೊಹ್ಲಿ ಬಾಯ್ಸ್​​

ಧೋನಿ- ಜಾಧವ್​ ಕಮಾಲ್​ – ಗೆಲುವಿನ ಹಳಿಗೆ ಮರಳಿದ ಕೊಹ್ಲಿ ಬಾಯ್ಸ್​​

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯನ್ನ ಕೈ ಚೆಲ್ಲಿದ್ದ ಟೀಮ್​ಇಂಡಿಯಾ ಏಕದಿನ ಸರಣಿಯಲ್ಲಿ ಕಮ್​ಬ್ಯಾಕ್​ ಮಾಡಿದೆ. ನಿನ್ನೆಯ ಪಂದ್ಯದಲ್ಲಿ ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡರಲ್ಲೂ ಆಲ್​ರೌಂಡಿಗ್​ ಪ್ರದರ್ಶನ ನೀಡಿದ ಕೊಹ್ಲಿ ಪಡೆ ಗೆಲುವಿನ ಹಳಿಗೆ ಮರಳಿತು. ಹೈದ್ರಾಬಾದ್​ನ ರಾಜೀವ್​ ಗಾಂಧಿ ಮೈದಾನದಲ್ಲಿ ನಡೆದ ರೋಚಕ ಹೋರಾಟದ ಹೈಲೆಟ್ಸ್​​ ಇಲ್ಲಿದೆ.

ಆಸ್ಟ್ರೇಲಿಯಾ ಟಿ-20 ಸರಣಿಯಲ್ಲಿ ಮುಗ್ಗರಿಸಿದ್ದ ಟೀಮ್​ಇಂಡಿಯಾ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ. ನಿನ್ನೆ ಹೈದ್ರಾಬಾದ್​​ನ ರಾಜೀವ್​ ಗಾಂಧಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್​ಇಂಡಿಯಾ 6 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿತು. ಮ್ಯಾಜಿಕ್​ ಫಿನಿಷರ್​ ಎಮ್​ಎಸ್​​ ಧೋನಿ, ಕೇದಾರ್ ಜಾಧವ್ ಮಾಡಿದ ಅದ್ಭುತ ಬ್ಯಾಟಿಂಗ್​ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆಯನ್ನ ಮಣಿಸಿದ ಕೊಹ್ಲಿ ಪಡೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು. 

 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸೀಸ್​ 2ನೇ ಓವರ್​​ನಲ್ಲಿಯೇ ಆಘಾತ ಎದುರಿಸಿತು. ತಂಡದ ಖಾತೆ ತೆರುವುದರೊಳಗೆ ಆಸ್ಟ್ರೇಲಿಯಾ ನಾಯಕ ಆ್ಯರೋನ್​ ಫಿಂಚ್​ಗೆ ಯಾರ್ಕರ್​​ ಸ್ಪೆಷಲಿಸ್ಟ್​​ ಜಸ್ಪ್ರೀತ್ ಬುಮ್ರಾ ಪೆವಿಲಿಯನ್ ದಾರಿ ತೋರಿಸಿದ್ರು. ಬುಮ್ರಾ ಬೌಲಿಂಗ್​ನಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿದ ಫಿಂಚ್​​ ಧೋನಿಗೆ ಕ್ಯಾಚಿತ್ತು ನಿರ್ಗಮಿಸಿದ್ರು.

ನಾಯಕನ ವಿಕೆಟ್​​ ಕಳೆದುಕೊಂಡು ಆರಂಭದಲ್ಲೇ ಸಂಕಷ್ಟಕ್ಕೆ ಒಳಗಾದ ತಂಡಕ್ಕೆ 2ನೇ ವಿಕೆಟ್​ಗೆ ಜೊತೆಯಾದ ಉಸ್ಮಾನ್​ ಖವಾಜಾ ಹಾಗೂ ಮಾರ್ಕಸ್ ಸ್ಟೋಯಿನಿಸ್​ ನೆರವಾದ್ರು. 2ನೇ ವಿಕೆಟ್​​ಗೆ ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ ತಂಡವನ್ನ ಆರಂಭಿಕ ಸಂಕಷ್ಟದಿಂದ ಪಾರು ಮಾಡಿದ್ರು. ಸ್ಟೋಯಿನಿಸ್​​ 37 ರನ್​ಗಳಿಸಿ ಔಟಾದ್ರೆ, ಖವಾಜಾ ಅರ್ಧಶತಕ ಸಿಡಿಸಿ ಕುಲ್​ದೀಪ್​ ಯಾದವ್​ ವಿಕೆಟ್ ಒಪ್ಪಿಸಿದ್ರು.

ನಂತರ ಕಣಕ್ಕಿಳಿದ ಆಸ್ಟನ್ ಟರ್ನರ್ ಆಟ 21 ರನ್​ಗಳಿಗೆ ಕೊನೆಯಾಯ್ತು. ಇನ್ನು ಟಿ-20 ಸರಣಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಗ್ಲೇನ್​ ಮ್ಯಾಕ್ಸ್​​ವೆಲ್​ 40 ರನ್​ಗಳಿಸಿ ಮೊಹಮದ್​​ ಶಮಿ ಎಸೆತದಲ್ಲಿ ಔಟಾದ್ರು. ಆದ್ರೆ ಕೊನೆಯಲ್ಲಿ 62 ರನ್​ಗಳ ಜೊತೆಯಾಟವಾಡಿದ ಅಲೆಕ್ಸ್​​ ಕೇರಿ ಹಾಗು ನಾಥಾನ್ ಕೌಂಟರ್ ನೈಲ್​ ತಂಡದ ಮೊತ್ತವನ್ನ 230ರ ಗಡಿ ದಾಟಿಸಿದ್ರು. ಅಂತಿಮವಾಗಿ ಆಸಿಸ್​ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 237 ರನ್​ ಕಲೆಹಾಕಿತು.

ಆಸ್ಟ್ರೇಲಿಯಾ ನೀಡಿದ 237 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್​​ ಬೆನ್ನತ್ತಿದ್ದ ಟೀಮ್​ಇಂಡಿಯಾ ಕೂಡ ಆರಂಭಿಕ ಆಘಾತ ಎದುರಿಸಿತು. ಟೀಮ್​ಇಂಡಿಯಾ ಇನ್ನಿಂಗ್ಸ್​​ನಲ್ಲೂ ಖಾತೆ ತೆರಯುವ ಮುನ್ನವೇ ಆರಂಭಿಕ ಆಟಗಾರ ಶಿಖರ್ ಧವನ್, ವೇಗಿ ನಥಾನ್​ ಕೌಂಟರ್​ ನೈಲ್​ಗೆ ವಿಕೆಟ್​ ಒಪ್ಪಿಸಿದ್ರು.

ಬಳಿಕ ಎರಡನೇ ವಿಕೆಟ್​ಗೆ ಜೊತೆಯಾದ ನಾಯಕ ವಿರಾಟ್​ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, 76 ರನ್​ಗಳ ಜೊತೆಯಾಟವಾಡಿ ಆಸರೆಯಾದ್ರು. ಆದ್ರೆ ಆ ಹಂತದಲ್ಲಿ ಎಡವಿದ ಕೊಹ್ಲಿ, ಸ್ಪಿನ್ನರ್ ಆ್ಯಡಮ್ ಜಂಪಾ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಲೆಗೆ ಬಿದ್ರು. ಕೊಹ್ಲಿ ಬೆನ್ನಲ್ಲೇ ರೋಹಿತ್ ಶರ್ಮಾ ಕೂಡ ಪೆವಿಲಿಯನ್ ದಾರಿ ಹಿಡಿದ್ರು. ಪರಿಣಾಮವಾಗಿ ತಂಡ 100 ರನ್ ಗಳಿಸುವುದರೊಳಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇನ್ನು ಕೊಹ್ಲಿ ನಿರ್ಗಮನದ ಬಳಿಕ ಕಣಕ್ಕಿಳಿದ ಅಂಬಟಿ ರಾಯುಡು ಕೂಡ ಕ್ರೀಸ್​ ಕಚ್ಚಿ ನಿಲ್ಲಲಿಲ್ಲ. ಆ್ಯಡಮ್​ ಜಂಪಾ ಬೌಲಿಂಗ್​ನಲ್ಲಿ ಅಲೆಕ್ಸ್​ ಕ್ಯಾರಿಗೆ ಕ್ಯಾಚಿತ್ತ ರಾಯುಡು 13 ರನ್​ಗಳಿಸಿ ಔಟಾದ್ರು. ರಾಯುಡು ಪತನದ ಬೆನ್ನಲ್ಲೇ ಭಾರತೀಯ ಅಭಿಮಾನಿಗಳಲ್ಲಿ ಸೋಲಿನ ಆತಂಕ ಆರಂಭವಾದ್ರೆ, ಆಸೀಸ್​ ಪಾಳಯದಲ್ಲಿ ಗೆಲುವಿನ ಕನಸು ಚಿಗುರಿತ್ತು. ಆದ್ರೆ ಆ ಬಳಿಕ 5ನೇ ವಿಕೆಟ್​​ಗೆ ಜೊತೆಯಾದ ಎಮ್​ಎಸ್​​ ಧೋನಿ ಹಾಗೂ ಕೇದಾರ್​ ಜಾಧವ್​  ಆಸೀಸ್​​ ಕನಸಿಗೆ ತಣ್ಣೀರೆರಚಿದರು.

5ನೇ ವಿಕೆಟ್​​ಗೆ ಜೊತೆಯಾದ ಧೋನಿ-ಜಾಧವ್​ ಜೋಡಿ ಆಸ್ಟ್ರೇಲಿಯಾ ಬೌಲರ್​ಗಳನ್ನ ಕಾಡಿದ್ರು. ಆತುರಕ್ಕೆ ಒಳಗಾಗದೆ ರಕ್ಷಣಾತ್ಮಕ ಇನ್ನಿಂಗ್ಸ್​ ಕಟ್ಟಿದ​ ಈ ಜೋಡಿ ಫಿಂಚ್ ಪಡೆಯ ಲೆಕ್ಕಚಾರಗಳನ್ನ ಉಲ್ಟಾ ಮಾಡಿದ್ರು. ತಲಾ ಅರ್ಧ ಶತಕ ಬಾರಿಸಿದ ಇವರು ಅಜೇಯ 141 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ರು.

ಒಟ್ಟಿನಲ್ಲಿ ಟಿ-20 ಸರಣಿಯಲ್ಲಿ ಮುಗ್ಗರಿಸಿದ್ದ ಟೀಮ್​ಇಂಡಿಯಾ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಕಮ್​ ಬ್ಯಾಕ್​ ಮಾಡಿದೆ. ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಕೊಹ್ಲಿ ಬಳಗ ಸರಣಿಯ ಉಳಿದ ಪಂದ್ಯಗಳಲ್ಲೂ ಶ್ರೇಷ್ಠ ಪ್ರದರ್ಶನ ನೀಡಲಿ.

 

RELATED ARTICLES

25 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments

CarlosNat on
Micltok on
MichaelInsut on