ಆಕ್ಲೆಂಡ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಟ್ವೆಂಟಿ-20 ಪಂದ್ಯವು ಇಲ್ಲಿನ ಈಡನ್ ಪಾರ್ಕ್ ಮೈದಾನದಲ್ಲಿ ಇಂದು ಮಧ್ಯಾಹ್ನ 12.20 ಕ್ಕೆ ನಡೆಯಲಿದೆ. ಇದೇ ಮೈದಾನದಲ್ಲಿ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದ ಟೀಮ್ ಇಂಡಿಯಾ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.
ಮೊದಲ ಟಿ20 ಪಂದ್ಯದಂತೆ ದ್ವಿತೀಯ ಪಂದ್ಯದಲ್ಲೂ ರನ್ ಮಳೆಯನ್ನು ಸುರಿಸುವ ನಿರೀಕ್ಷಿಯಲ್ಲಿದೆ. ಹಾಗಾಗಿ ಟಾಸ್ ಗೆದ್ದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಳ್ಳುವುದು ನಿಶ್ಚಿತವೆನಿಸಿದೆ. ಒಂದು ವೇಳೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ ದೊಡ್ಡ ಮೊತ್ತದಲ್ಲಿ ರನ್ ಪಡೆಯುವುದು ಅನಿವಾರ್ಯವಾಗಿದೆ.
ಮೊದಲ ಪಂದ್ಯ ವಿಜೇತ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆಯಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಕೆ.ಎಲ್ ರಾಹುಲ್ ನಿರ್ವಹಿಸಲಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ನಲ್ಲಿ ರಾಹುಲ್ ಪರಿಪೂರ್ಣ ಆಟಗಾರನಾಗಿ ಭರವಸೆ ನೀಡಿದ್ದಾರೆ.
ಕೆ.ಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾಕ್ಕೆ ಆಧಾರ ಸ್ತಂಭವಾಗಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಫಿನಿಶರ್ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಇವರಿಗೆ ಕೆಳ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಬಲ ತುಂಬಲಿದ್ದಾರೆ.
ಆಲ್ ರೌಂಡರ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಹಾಗೂ ಶಿವಂ ದುಬೆ ಮುಂದುವರಿಯುವ ಸಾಧ್ಯತೆಯಿದೆ. ಇನ್ನು ರಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಪರಿಣಾಮಕಾರಿ ಎನಿಸಿದ್ದಾರೆ. ವೇಗದ ಪಡೆಯನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದು, ಮೊಹಮ್ಮದ್ ಶಮಿ ಸಾಥ್ ನೀಡಲಿದ್ದಾರೆ.
ಕಿವೀಸ್ ತಂಡವು ಬ್ಯಾಟಿಂಗ್ನಲ್ಲಿ 200ಕ್ಕೂ ಹೆಚ್ಚು ರನ್ ಕಲೆ ಹಾಕಿದರೂ ಬೌಲಿಂಗ್ ವಿಭಾಗವು ಕೈಕೊಟ್ಟಿದ್ದರಿಂದ ಈ ಬಾರಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಒಟ್ಟಿನಲ್ಲಿ ಆಕ್ಲೆಂಡ್ ಮಗದೊಂದು ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ.
ತಂಡಗಳು ಇಂತಿದೆ:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಕುಲ್ದೀಪ್ ಯಾದವ್ ಮತ್ತು ಶಿವಂ ದುಬೆ.
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ಟಿಮ್ ಸೀಫರ್ಟ್, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಡ್ಯಾರೆಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಬ್ಲೇರ್ ಟಿಕ್ನರ್, ಸ್ಕಾಟ್ ಕುಗ್ಗೆಲೆಜಿನ್ ಮತ್ತು ಹ್ಯಾಮಿಶ್ ಬೆನೆಟ್.