ಇಂದು ಧೋನಿಗೆ ರೆಸ್ಟ್​, ಪಂತ್​ಗೆ ಟೆಸ್ಟ್​..!

0
99

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯ ಸೋಲಿನ ಬಳಿಕ ಏಕದಿನ ಸರಣಿಯಲ್ಲಿ ಕಮ್​​ಬ್ಯಾಕ್​​ ಮಾಡಿದ್ದ ಟೀಮ್ಇಂಡಿಯಾ 3ನೇ ಪಂದ್ಯದಲ್ಲಿ ಮುಗ್ಗರಿಸಿತು. ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆಬಾಗಿದ ಟೀಮ್ಇಂಡಿಯಾ 32 ರನ್​ಗಳ ಸೋಲುಂಡಿತು. ಪರಿಣಾಮ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಜಯ ದಾಖಲಿಸಿತು.
ಇದೀಗ ಸರಣಿಯ 4ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಮೊಹಾಲಿಯಲ್ಲಿಂದು 4ನೇ ಏಕದಿನ ಪಂದ್ಯ ನಡೆಯಲಿದ್ದು, ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳಲು ಕೊಹ್ಲಿ ಪಡೆ ತಯಾರಿ ನಡೆಸಿದೆ. ಆದರೆ, 3ನೇ ಪಂದ್ಯದಲ್ಲಿ ಜಯ ಸಾಧಿಸಿ ಸರಣಿ ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ಸಿಯಾಗಿರುವ ಪ್ರವಾಸಿ ಬಳಗ, ಈ ಪಂದ್ಯದಲ್ಲೂ ಗೆಲ್ಲಲು ಶತಾಯುಗತಾಯ ಪ್ರಯತ್ನಕ್ಕಿಳಿದಿದೆ.
3ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಟೀಮ್ಇಂಡಿಯಾ ವೈಫಲ್ಯ ಕಂಡಿತ್ತು. ವಿರಾಟ್ ಕೊಹ್ಲಿ ಹೊರತು ಪಡಿಸಿದ್ರೆ ಉಳಿದೆಲ್ಲಾ ಬ್ಯಾಟ್ಸ್​​​​​ಮನ್​ಗಳು ಆಸೀಸ್ ಪಡೆಯ ಬೌಲಿಂಗ್ ಎದುರಿಸುವಲ್ಲಿ ವಿಫಲರಾದರು. ಟಾಪ್ ಆರ್ಡರ್ ಬ್ಯಾಟ್ಸ್​ಮನ್​​ಗಳ ವೈಫಲ್ಯತೆ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು.

4, 5ನೇ ಪಂದ್ಯದಿಂದ ಧೋನಿಗೆ ರೆಸ್ಟ್ :
ಮುಂಬರುವ ವಿಶ್ವಕಪ್​​ಗೂ ಮುನ್ನ ಭಾರತದ ಪಾಲಿಗೆ ಇದು ಕೊನೆಯ ಸರಣಿಯಾಗಿದೆ. ಹೀಗಾಗಿ ಮೊದಲ 3 ಪಂದ್ಯಗಳಲ್ಲಿ ಆಡುವ ಹನ್ನೊಂದರ ತಂಡದೊಂದಿಗೆ ಕಣಕ್ಕಿಳಿದಿದ್ದ ಟೀಮ್ಇಂಡಿಯಾ 4 ಮತ್ತು 5ನೇ ಪಂದ್ಯಗಳಲ್ಲಿ ತಂಡದಲ್ಲಿ ಬದಲಾವಣೆಯನ್ನ ನಿರೀಕ್ಷಿಸಬಹುದು.

ಸರಣಿಯೂದ್ದಕ್ಕೂ ವೈಫಲ್ಯ ಅನುಭವಿಸಿರುವ ಶಿಖರ್ ಧವನ್ ಬದಲು ಕೆ ಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಜೊತೆಗೆ ಸರಣಿಯಿಂದ ಧೋನಿಗೆ ವಿಶ್ರಾಂತಿ ನೀಡಿರುವುದರಿಂದ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಕುಲ್ ದೀಪ್ ಯಾದವ್, ಮೊಹಮದ್ ಶಮಿಗೆ ರೆಸ್ಟ್ ನೀಡಿ ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್​ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.
ಇನ್ನೊಂದೆಡೆ ಸರಣಿಯಲ್ಲಿ ಕಮ್​​ಬ್ಯಾಕ್​ ಮಾಡಿರುವ ಫಿಂಚ್ ಪಡೆಯೂ ಗೆಲುವಿಗೆ ಕಠಿಣ ತಯಾರಿ ನಡೆಸಿದೆ. ರಾಂಚಿ ಪಂದ್ಯದಲ್ಲಿ ಕಮ್​​ಬ್ಯಾಕ್​ ಮಾಡಿರುವ ನಾಯಕ ಫಿಂಚ್, ಶತಕ ಸಿಡಿಸಿ ಮಿಂಚಿದ ಉಸ್ಮಾನ್ ಖ್ವಾಜಾ ಹಾಗೂ ಮ್ಯಾಕ್ಸ್​​ವೆಲ್​ ಕಾಂಗರೂ ಬಳಗದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​​ಮನ್​​ಗಳನ್ನು ಕಟ್ಟಿ ಹಾಕುವಲ್ಲಿ ಆಸೀಸ್ ಬೌಲರ್​ಗಳು ಯಶಸ್ಸಿಯಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.
ಭಾರತ-ಆಸ್ಟ್ರೇಲಿಯಾ ಮೊಹಾಲಿ ಪಿಚ್​ನಲ್ಲಿ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, 1996ರಲ್ಲಿ ಜಯಸಿದ್ದು ಬಿಟ್ಟರೆ ಆ ಬಳಿಕ ಆಡಿದ 3 ಪಂದ್ಯಗಳಲ್ಲೂ ಭಾರತ ಸೋಲುಂಡಿದೆ. ಜೊತೆಗೆ 2006ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲೂ ಆಸ್ಟ್ರೇಲಿಯಾ ಜಯ ಸಾಧಿಸಿದೆ. ಮೈದಾನದ ಅಂಕಿ-ಅಂಶಗಳೂ ಆಸ್ಟ್ರೇಲಿಯಾ ಪರವಾಗಿರುವುದರಿಂದ ಇಂದಿನ ಪಂದ್ಯದ ರಿಸಲ್ಟ್ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ವಿಶ್ವಕಪ್​​ಗೂ ಮುನ್ನ ಉಭಯ ತಂಡಗಳಿಗೂ ತಯಾರಿಯ ಸರಣಿ ಇದಾಗಿದೆ. ಭಾರತ 2011ರ ವಿಶ್ವಕಪ್ ಚಾಂಪಿಯನ್ ಆಗಿದ್ರೆ, ಆಸ್ಟ್ರೇಲಿಯಾ ಹಾಲಿ ಚಾಂಪಿಯನ್. ವಿಶ್ವಕಪ್​​ಗೂ ಮುನ್ನ ಅಂತಿಮ 15 ಆಟಗಾರರ ಬಳಗವನ್ನ ನಿರ್ಧರಿಸಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಉಭಯ ತಂಡಗಳ ಪ್ರತಿ ಆಟಗಾರನಿಗೂ ಉತ್ತಮ ಪ್ರದರ್ಶನ ನೀಡಲೇ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಇಂದಿನ ಪಂದ್ಯದ ಗೆಲುವು ಉಭಯ ತಂಡಗಳ ಪಾಲಿಗೂ ಬಹು ಮುಖ್ಯವಾಗಿದೆ.

LEAVE A REPLY

Please enter your comment!
Please enter your name here