ಬೆಂಗಳೂರಲ್ಲಿ ಇಂಡೋ – ಆಸೀಸ್​ ಹೈ ವೋಲ್ಟೇಜ್​ ಮ್ಯಾಚ್​​ಗೆ ಕ್ಷಣಗಣನೆ..!

0
243

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸೋಲುಂಡಿರುವ ಟೀಮ್​ಇಂಡಿಯಾ, ಇಂದು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಇಂದು ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ 2ನೇ ಟಿ-20 ಮ್ಯಾಚ್​ ನಡೆಯಲಿದ್ದು ಪ್ರವಾಸಿ ತಂಡ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ರೆ, ಟೀಮ್​ಇಂಡಿಯಾ ಸರಣಿಯನ್ನು ಸಮಬಲ ಸಾಧಿಸಿ ಅಂತ್ಯಗೊಳಿಸುವ ಒತ್ತಡದಲ್ಲಿದೆ. ಈಗಾಗಲೇ ವಿಶಾಖ ಪಟ್ಟಣದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸೋಲುಂಡಿರುವ ಟೀಮ್​ಇಂಡಿಯಾ ಇಂದಿನ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆದರೆ ತವರಿನಲ್ಲಿ ಭಾರತದ ವಿರುದ್ಧ ಮುಖಭಂಗ ಅನುಭವಿಸಿರುವ ಆಸ್ಟ್ರೇಲಿಯಾ, ಭಾರತದಲ್ಲಿ ಸರಣಿ ಜಯಿಸುವ ಯೋಜನೆಯಲ್ಲಿದೆ.

ಮೆಟ್ರೋ ಸಮಯ ಬದಲಾವಣೆ: ಪಂದ್ಯದ ಪ್ರಯುಕ್ತ ಜನರ ಅನೂಕೂಲಕ್ಕಾಗಿ ‘ನಮ್ಮ ಮೆಟ್ರೋ’ ಕೂಡ ಸಂಚಾರಿ ಸಮಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವುದರಿಂದ ಮೆಟ್ರೋ ಸಂಚಾರದ ಸಮಯವನ್ನು ಪ್ರಯಾಣಿಕರ ಅನೂಕೂಲಕ್ಕಾಗಿ ರಾತ್ರಿ 11.55 ವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಬೈಯಪ್ಪನ ಹಳ್ಳಿ, ಮೈಸೂರು ರಸ್ತೆ, ಯಲಚೇನಹಳ್ಳಿ, ನಾಗಸಂದ್ರದಿಂದ ರಾತ್ರಿ 11.30ಕ್ಕೆ ಕೊನೆಯ ಮೆಟ್ರೋ ರೈಲು ಸಂಚರಿಸಲಿದೆ. 4 ಕಡೆಗಳಿಗೂ ಮೆಜೆಸ್ಟಿಕ್​ನಿಂದ 11.55ಕ್ಕೆ ಕೊನೆಯ ರೈಲು ಹೊರಡಲಿದೆ. ಇದಲ್ಲದೇ ಪಂದ್ಯ ಮುಗಿದ ನಂತರ ಪ್ರಯಾಣಿಕರು ತ್ವರಿತವಾಗಿ‌ ಪ್ರಯಾಣಿಸಲು ಪೇಪರ್ ಟಿಕೆಟ್ ವ್ಯವಸ್ಥೆಯೂ ಮಾಡಲಾಗಿದೆ. ಇಂದು ಮದ್ಯಾಹ್ನ 3 ಗಂಟೆಯಿಂದ 7 ಗಂಟೆಯವರೆಗೆ ಯಾವುದೇ ಮೆಟ್ರೋ ನಿಲ್ದಾಣದಲ್ಲಿಯೂ ಪೇಪರ್ ಟಿಕೆಟ್ ‌ಖರೀದಿಸಬಹುದು. ಪೇಪರ್​​ ಟಿಕೆಟ್​​ ದರ 50 ರೂಪಾಯಿ ಇರಲಿದ್ದು, ಈ ಟಿಕೆಟ್​​ನಲ್ಲಿ ಪಂದ್ಯ ಮುಗಿದ ನಂತರ ಮಾತ್ರ ಪ್ರಯಾಣಿಸಬಹುದಾಗಿದೆ.

ಹಲವೆಡೆ ಪಾರ್ಕಿಂಗ್​ ನಿಷೇಧ: ಇಂದಿನ ಪಂದ್ಯದ ಸಂದರ್ಭದಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪೋಲೀಸ್​​ ಇಲಾಖೆಯೂ ಕೆಲವು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನ ಹಲವೆಡೆ ವಾಹನ ನಿಲುಗಡೆ ನಿಷೇಧ ಹೇರಲಾಗಿದ್ದು, ಸುಗಮ ಸಂಚಾರ ವ್ಯವಸ್ಥೆಗಾಗಿ ಈ ರೀತಿ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ11:30ರವರೆಗೆ ಜನರು ಪಾರ್ಕಿಂಗ್​ ವಿಚಾರವಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸರು ಗಮನವಿರಿಸಲಿದ್ದಾರೆ. ಕ್ವೀನ್ಸ್​ ರಸ್ತೆ, ಬಾಳೇಕುಂದ್ರಿ, ಎಂ.ಜಿ.ರೋಡ್, ಅನಿಲ್ ಕುಂಬ್ಳೆ ವೃತ್ತದಲ್ಲಿ ವಾಹನ ನಿಲುಗಡೆ ನಿಷೇಧ ಹೇರಲಾಗಿದ್ದು, ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಯು.ಬಿ.ಸಿಟಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

LEAVE A REPLY

Please enter your comment!
Please enter your name here