ಅಹ್ಮದಾಬಾದ್ : ಇಸ್ಲಾಮಿಕ್ ಭಯೋತ್ಪಾದನೆಯನ್ನು ಮಟ್ಟಹಾಕಲು ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಅಮೇರಿಕಾದ ಹೊರಾಟ ಮುಂದುವರೆಯಲಿದೆ. ಐಸಿಸ್ ಎಂಬ ಉಗ್ರ ಸಂಘಟನೆಯನ್ನು ಅಮೇರಿಕಾ ಈಗಾಗಲೇ ಮಟ್ಟ ಹಾಕಿದೆ. ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಯನ್ನು ಮಟ್ಟ ಹಾಕಲು ಅಮೇರಿಕಾ ಒತ್ತಡ ಹೇರಿದೆ. ಉಭಯ ದೇಶಗಳನ್ನು ಕೆಣಕದವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಎರಡು ದಿನಗಳ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ ಡೋನಾಲ್ಡ್ ಟ್ರಂಪ್, ವಿಶ್ವದ ಅತೀ ದೊಡ್ಡ ಕ್ರೀಡಾ ಮೈದಾನ ಮೊಟೆರಾದಲ್ಲಿ ಆಯೋಜಿಸಿದ್ದ `ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಮತ್ತು ಅಮೇರಿಕಾ ನಡುವೆ 3 ಬಿಲಿಯನ್ ಅಮೇರಿಕನ್ ಡಾಲರ್ ವ್ಯಾಪಾರ ಒಪ್ಪಂದ ನಡೆಯಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಒಪ್ಪಂದದಿಂದ ಬಾರತೀಯ ಸೇನಾ ಪಡೆಗೆ ಬೃಹತ್ ಬಲ ತುಂಬುವ ನಿರೀಕ್ಷೆಯಿದೆ. ಭಾರತ ಮತ್ತು ಅಮೇರಿಕಾ ನಡುವಿನ ರಕ್ಷಣಾ ಸಹಕಾರ ಹೀಗೆ ಮುಂದುವರೆಯಲಿದೆ. ಅಮೇರಿಕಾ ನಿರ್ಮಿತ ಅತ್ಯಾಧುನಿಕ ಸೇನಾ ಶಸ್ತ್ರಾಸ್ತ್ರ ಮಾರಾಟ ಮಾಡಲು ನಾವು ಎದುರು ನೋಡುತ್ತಿದ್ದೇವೆ. ಈಗಾಗಲೇ ಹಲವಾರು ಆಧುನಿಕ ಶಸ್ತ್ರಾಸ್ತ್ರವನ್ನು ನಾವು ತಯಾರಿಸಿದ್ದೇವೆ. ಭಾರತ ಮತ್ತು ಅಮೇರಿಕಾ ನಡುವಿನ ಬೃಹತ್ ಒಪ್ಪಂದ ನಡೆಯಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಎಲ್ಲಾ ದೇಶಕ್ಕೂ ತಮ್ಮ ಗಡಿ ಪ್ರದೇಶವನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ಭಾರತ ಮತ್ತು ಅಮೇರಿಕಾ ಎರಡೂ ದೇಶಗಳೂ ಭಯೋತ್ಪಾದನೆಯ ಸಮಸ್ಯೆಗೆ ಒಳಗಾಗಿದೆ ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತ ನಮ್ಮ ಪ್ರಮುಖ ರಕ್ಷಣಾ ಪಾಲುದಾರ ದೇಶವಾಗಬೇಕೆಂಬುದು ನಮ್ಮ ಅಪೇಕ್ಷೆ ಎಂದರು.