ಹಾಸನ : ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಇಂದು ನಿನ್ನೆಯದಲ್ಲ, ಈ ಸಂಘರ್ಷದಲ್ಲಿ ಕಾಡು ಪ್ರಾಣಿಗಳ ದಾಳಿಗೆ ಸಿಕ್ಕಿ ಜನಬಲಿಯಾಗುತ್ತಲೇ ಇದ್ದಾರೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಂತೂ ಕಾಡನೆಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಹದಿನೈದು ದಿನಗಳ ಅಂತರದಲ್ಲಿ ಇಬ್ಬರನ್ನು ಬಲಿಪಡೆದುಕೊಂಡಿದೆ. ಕೂಲಿ ಕಾರ್ಮಿಕರು ಕಾಫಿ ತೋಟದಲ್ಲಿ ಕೆಲಸ ಮಾಡೋದಕ್ಕೂ ಹಿಂದೇಟು ಹಾಕೋ ಪರಿಸ್ಥಿತಿ ನಿರ್ಮಾಣವಾಗಿದೆ, ಇದಕ್ಕೊಂದು ಶಾಶ್ವತವಾದ ಪರಿಹಾರ ಬೇಕು ಎಂಬ ಕೂಗು, ಕೂಗಾಗಿಯೇ ಉಳಿಯುತ್ತಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಂದರೆ ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಜನರು ನಿತ್ಯವೂ ಆತಂಕದಲ್ಲಿಯೇ ಓಡಾಡೋ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಮೂಲ ಕಾರಣ ಕಾಡಾನೆಗಳ ಹಿಂಡು. ಹೌದು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಗುಂಪು ಹಿಂಡು ಹಿಂಡಾಗಿ ದಾಂಗುಡಿ ಇಡುತ್ತಿದೆ. ದಾರಿ ಮಧ್ಯೆ ಸಿಕ್ಕ ಸಿಕ್ಕ ಬೆಳೆಗಳಿಂದ ಹಿಡಿದು, ಮನುಷ್ಯರ ಪ್ರಾಣಕ್ಕೂ ಕುತ್ತು ತರುತ್ತಿವೆ. ಕಳೆದ ಹದಿನೈದು ದಿನದೊಳಗೆ ಕಾಡಾನೆ ದಾಳಿಗೆ ಇಬ್ಬರು ಸಾವನ್ನಪ್ಪಿದ್ದಾರೆ.
ಡಿ. 19 ರಂದು ಆಲೂರು ತಾಲೂಕಿನ ಭಕ್ತರವಳ್ಳಿ ಗ್ರಾಮದ ಬಳಿ ಪ್ರಧಾನ್ ಎಂಬ ವ್ಯಕ್ತಿಯನ್ನು ಬಲಿಪಡೆದುಕೊಂಡದ್ರೆ, ಮೊನ್ನೆ ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ಬಳಿ ರಾಜನ್ ಎಂಬ ವ್ಯಕ್ತಿಯನ್ನು ತುಳಿದು ಸಾಯಿಸಿದೆ. ಇದರಿಂದ ಸುತ್ತಮುತ್ತಲ ಗ್ರಾಮದ ಜನರು ಆತಂಕಗೊಂಡಿದ್ದಾರಲ್ಲದೇ, ಮೂರೂ ತಾಲೂಕಿನ ಜನರು ಯಾವಾಗ ನಮ್ಮ ಸುತ್ತಮುತ್ತಕ್ಕೆ ಬರುತ್ತವೆಯೋ ಎಂದು ಗಾಬರಿಗೊಂಡಿದ್ದಾರೆ.
ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ಹಿಂಡು ಹಿಂಡಾಗಿ ಸಂಚಾರ ಮಾಡುವುದರಿಂದ ರೈತರು ಬೆಳೆದ ಕಾಫಿ, ಭತ್ತ, ಮೆಣಸು, ಬಾಳೆ ಸೇರಿದಂತೆ ಹತ್ತಾರು ಬೆಳೆಗಳನ್ನು ಹಾನಿ ಮಾಡುತ್ತಿದೆ. ನವೆಂಬರ್ ನಿಂದ ಫೆಬ್ರವರಿವರೆಗೂ ಮಲೆನಾಡು ಭಾಗದಲ್ಲಿ ಕಾಫಿ ಕೊಯ್ಲಿನ ಸಮಯ, ಆದರೆ ಈ ಕಾಡಾನೆ ದಾಳಿಯಿಂದ ಫಸಲಿಗೆ ಬಂದಿರೋ ಕಾಫಿಹಣ್ಣನ್ನು ಕೊಯ್ಲು ಮಾಡೋದಕ್ಕೆ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅಕ್ಕಪಕ್ಕದ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಕಲೇಶಪುರದತ್ತ ಓಡಿಸುತ್ತಿದ್ದಾರೆ, ಬೇರೆಡೆ ಹೋಗೋದಕ್ಕೆ ಅವಕಾಶ ಮಾಡಿಕೊಡ್ತಿಲ್ಲ. ಹಾಗಾಗಿ ಎಲ್ಲ ಕಾಡಾನೆಗಳು ಇಲ್ಲಿಯೇ ಸಂಚಾರ ಮಾಡ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ತಿಲ್ಲ, ಇದಕ್ಕೊಂದು ಶಾಶ್ವತ ಪರಿಹಾರದ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.
ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅನೇಕ ಯೋಜನೆಗಳಿಂದ ಅರಣ್ಯ ಭಾಗ ಕಡಿಮೆಯಾಗ್ತಿವೆ. ಅರಣ್ಯದೊಳಗಿದ್ದ ಕಾಡುಪ್ರಾಣಿಗಳು ನಾಡಿನತ್ತ ಧಾವಿಸುತ್ತಿವೆ. ಇದರಿಂದಲೇ ಕಾಡು ಪ್ರಾಣಿಗಳು ಹಾಗೂ ಮಾನವನ ನಡುವೆ ಸಂಘರ್ಷ ನಡೆಯುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಮುಂದೊಂದು ದಿನ ಮಲೆನಾಡಿನ ಜನ ಬಹುದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
– ಪ್ರತಾಪ್ ಹಿರೀಸಾವೆ ಹಾಸನ