ಶಿವಮೊಗ್ಗದಲ್ಲಿ: ನಿನ್ನೆ ರಾತ್ರಿ ಸುರಿದ ಮಳೆಗೆ ರಾಜಕಾಲುವೆ ತುಂಬಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಗರದ ಹೊಸಮನೆ ಬಡಾವಣೆಯ ನಾಲ್ಕನೇ ತಿರುವಿನಲ್ಲಿ ಹಲವಾರು ಮನೆಗಳಲ್ಲಿ ಎರಡರಿಂದ ಮೂರು ಅಡಿಯಷ್ಟು ನೀರು ತುಂಬಿ ಪೀಠೋಪಕರಣಗಳು, ಮನೆಯ ವಸ್ತುಗಳೆಲ್ಲಾ ಸಂಪೂರ್ಣವಾಗಿ ಹಾಳಾಗಿವೆ. ಅದರಲ್ಲೂ, ಇಲ್ಲಿನ ಜನರು, ಸಣ್ಣ ಸಣ್ಣ ಮಕ್ಕಳು, ವೃದ್ಧರು, ರಾತ್ರಿ ಪೂರ ನಿದ್ರೆಯಿಲ್ಲದೇ, ಪರಿತಪಿಸುವಂತಾಗಿತ್ತು. ಮನೆಯ ಅಡುಗೆ ಮನೆಯಲ್ಲಿನ ದಿನಬಳಕೆ ವಸ್ತುಗಳೆಲ್ಲಾ ಹಾಳಾಗಿ ಹೋಗಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದ್ದರೂ ಕೂಡ, ಮೂಲವಾಗಿ ತೆಗೆದುಕೊಳ್ಳದ ಕಾರ್ಯ, ಕಾಮಗಾರಿ ಮಾಡದೇ ಪಾಲಿಕೆ ಸೋತಿದೆ ಎಂದೇ ಹೇಳಬಹುದಾಗಿದೆ. ಇಲ್ಲಿರುವ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೇ, ಪ್ರತಿಬಾರಿ ಅಲ್ಪ ಮಳೆ ಬಂದರೂ ಕೂಡ ಇಲ್ಲಿನ ನಿವಾಸಿಗಳ ಪರಿಸ್ಥಿತಿ ಹೇಳತೀರದಾಗುತ್ತದೆ.
ಅದರಲ್ಲೂ, ಇದೀಗ ಎಲ್ಲಿ ನೋಡಿದರೂ ಸ್ಮಾರ್ಟ್ ಸಿಟಿ ಹೆಸರಲ್ಲಿ ಗುಂಡಿ-ಗೊಟರುಗಳಿಂದ ಕೂಡಿದೆ. ಇಲ್ಲಿ ಓಡಾಡುವುದೇ ದುಸ್ತರವಾಗಿದೆ. ರಾಜಕಾಲುವೆಯಲ್ಲಿ ಇರುವ ಹೂಳನ್ನು ತೆಗೆಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಿದ್ದು.ಈಗಲಾದರೂ ಪಾಲಿಕೆ ಕಮಿಷನರ್ ಆಗಲೀ, ಮೇಯರ್ ಆಗಲೀ ಎಚ್ಚೆತ್ತುಕೊಳ್ಳಬೇಕಿದೆ.