ಬಾಗಲಕೋಟೆ: ಅಕ್ರಮವಾಗಿ ಕ್ಷೀರ ಭಾಗ್ಯ ಯೋಜನೆಯ ನಂದಿನಿ ಹಾಲಿನ ಪೌಡರ್ ಸಂಗ್ರಹಿಸಿದ ಮನೆಯೊಂದರ ಮೇಲೆ ಅಕ್ಷರ ದಾಸೋಹ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ 2 ಲಕ್ಷ 60 ಸಾವಿರ ಮೌಲ್ಯದ ಹಾಲಿನ ಪೌಡರ್ ಜಪ್ತಿ ಮಾಡಿರೋ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆದಿದೆ.
ಜಿಲ್ಲೆಯ ಜಮಖಂಡಿ ನಗರದ ಮೋಮಿನ ಗಲ್ಲಿಯ ಆಯೇಷಾ ಎಂಬುವರ ಮನೆಯಲ್ಲಿ ಅಕ್ರಮವಾಗಿ ಅಕ್ಷರ ದಾಸೋಹ ಯೋಜನೆಯ 59 ಕೆಜಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 271ಕೆಜಿ, ಹಾಗೂ ಇತರೆ 650ಕೆಜಿ ಹಾಲಿನ ಪೌಡರ್ ಸೇರಿ ಒಟ್ಟು 2ಲಕ್ಷ 60ಸಾವಿರ ಮೌಲ್ಯದ ಹಾಲಿನ ಪೌಡರ್ ಜಪ್ತಿ ಮಾಡಲಾಗಿದೆ.
ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಪರಿಶೀಲನೆ ನಡೆಸಿದಾಗ ಅಕ್ರಮ ಹಾಲಿನ ಪೌಡರ್ ಸಂಗ್ರಹ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಈ ಹಾಲಿನ ಪೌಡರ್ ಎಲ್ಲಿಂದ ತರಲಾಗಿದೆ ಎನ್ನುವುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ದಾಳಿ ವೇಳೆ ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಐನಾಪೂರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆನಂದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು. ಈ ಕುರಿತಂತೆ ಜಮಖಂಡಿ ನಗರದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.