ನಂಜನಗೂಡು : ನಂಜನಗೂಡು ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ನಿಗೂಢ ಕೊಲೆ ರಹಸ್ಯ ಬಯಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಛಾಪ್ಟರ್ ಕ್ಲೋಸ್ ಮಾಡಿದ ಪತ್ನಿ ಅಂದರ್ ಆಗಿದ್ದಾಳೆ. ಪ್ರಿಯತಮೆಯ ಆದೇಶ ಪಾಲಿಸಿ ಕೊಲೆಗೈದ ಪ್ರಿಯಕರ ಹಾಗೂ ಸ್ನೇಹಿತ ಜೈಲು ಕಂಬಿ ಎಣಿಸುತ್ತಿದ್ದಾರೆ.
ಮೂವರು ಹಂತಕರ ಹೆಡೆಮುರಿ ಕಟ್ಟುವಲ್ಲಿ ನಂಜನಗೂಡು ಠಾಣೆ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಅಂಡ್ ಟೀಂ ಯಶಸ್ವಿಯಾಗಿದೆ. ಸೌಮ್ಯ (24) ಹಾಗೂ ಈಕೆಯ ಪ್ರಿಯಕರ ಯೋಗೇಶ್ ಮತ್ತು ಸ್ನೇಹಿತ ಚೆಲುವರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಡಿಸೆಂಬರ್ 16 ರಂದು ನಂಜನಗೂಡಿನ ಕಪ್ಪುಸೋಗೆ ಗ್ರಾಮದ ಕಬಿನಿ ಬಲದಂಡೆ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು. ಕೈಕಾಲುಗಳನ್ನ ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದು ಕೊಲೆ ಎಂದು ಸಾಬೀತಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಹುಲ್ಲಹಳ್ಳಿ ಪೊಲೀಸರು ಮೃತನ ಮಾಹಿತಿ ಕಲೆ ಹಾಕಿದ್ದರು. ನಂಜನಗೂಡಿನ ಅಡಹಳ್ಳಿ ಗ್ರಾಮದ ಶಿವರಾಜ್ (29) ಮೃತ ದುರ್ದೈವಿಯಾಗಿದ್ದ. 6 ವರ್ಷಗಳ ಹಿಂದೆ ಸೌಮ್ಯಾಳನ್ನ ವಿವಾಹವಾಗಿದ್ದ ಶಿವರಾಜ್ ಅನ್ಯೋನ್ಯ ಸಂಸಾರ ನಡೆಸುತ್ತಿದ್ದ. ಕೊರೊನಾ ಹಿನ್ನಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪರಿಣಾಮ 6 ತಿಂಗಳಿಂದ ಸೌಮ್ಯ ಶುಂಠಿ ಕೆಲಸಕ್ಕೆ ಪ್ರತಿದಿನ ಆಟೋದಲ್ಲಿ ತರಳುತ್ತಿದ್ದಳು.
ಇದೇ ವೇಳೆ ಆಟೋ ಡ್ರೈವರ್ ಯೋಗೇಶ್ ಜೊತೆ ಸೌಮ್ಯ ಸಲುಗೆ ಬೆಳೆಸಿಕೊಂಡಿದ್ದಳು. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತು. ಪತ್ನಿಯ ಅಕ್ರಮ ಸಂಬಂಧ ಪತಿ ಶಿವರಾಜ್ಗೆ ತಿಳಿಯಿತು. ಈ ಸಂಬಂಧ ಇಬ್ಬರ ನಡುವೆ ಗಲಾಟೆ ಸಹ ನಡೆದಿತ್ತು. ಶುಂಠಿ ಕೆಲಸಕ್ಕೆ ಹೋಗದಂತೆ ಶಿವರಾಜ್ ತಡೆ ಒಡ್ಡಿದ. ಈ ಬೆಳವಣಿಗೆ ಸೌಮ್ಯಾಳಿಗೆ ಪರಿತಪಿಸುವಂತೆ ಮಾಡಿತು. ಪ್ರಿಯಕರನಿಂದ ದೂರವಾಗುವ ಆತಂಕವೂ ಶುರುವಾಯಿತು.
ಅಕ್ರಮ ಸಂಭಂಧಕ್ಕೆ ಅಡ್ಡಿಯಾದ ಪತಿರಾಯನನ್ನ ಮುಗಿಸುವಂತೆ ಸೌಮ್ಯ ಪ್ರಿಯಕರ ಯೋಗೇಶ್ ಮೊರೆ ಹೋದಳು. ಪ್ರಿಯತಮೆಯ ಆದೇಶಕ್ಕೆ ತಲೆಬಾಗಿದ ಯೋಗೇಶ್ ಸ್ನೇಹಿತ ಚೆಲುವರಾಜ್ ನೆರವಿನಿಂದ ಡಿಸೆಂಬರ್ 7 ರಂದು ಶಿವರಾಜ್ ಗೆ ಕಂಠಪೂರ್ತಿ ಕುಡಿಸಿ ಕೈಕಾಲುಗಳನ್ನ ಕಟ್ಟಿ ಜೀವಂತವಾಗಿ ನಾಲೆಗೆ ಎಸೆದರು. ಅಡಹಳ್ಳಿ ಗ್ರಾಮದಲ್ಲಿ ಜೀವಂತವಾಗಿ ನಾಲೆಗೆ ಎಸೆಯಲ್ಪಟ್ಟ ಶಿವರಾಜ್ ಶವ ಡೆಸೆಂಬರ್ 15 ರಂದು ನಾಲೆಯಲ್ಲಿ ತೇಲಿ ಬಂದು ಕಪ್ಪುಸೋಗೆಯಲ್ಲಿ ಪತ್ತೆಯಾಯಿತು. ಮೃತನ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಪತ್ನಿ ಸೌಮ್ಯಾಳ ಮೇಲೆ ಡೌಟ್ ಶುರುವಾಯಿತು. ಕಾರಣ ಶಿವರಾಜ್ ನಾಪತ್ತೆಯಾಗಿ ಒಂದು ವಾರ ಕಳೆದರೂ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿರಲಿಲ್ಲ. ಇದೇ ಸುಳಿವಿನ ಆಧಾರದ ಮೇಲೆ ನಂಜನಗೂಡು ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ತನಿಖೆ ಆರಂಭಿಸಿದರು. ಸೌಮ್ಯಾಳನ್ನ ಪೊಲೀಸ್ ಸ್ಟೈಲಿನಲ್ಲಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಿಚ್ಚಿಟ್ಟಳು. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಹಿನ್ನಲೆ ಪತಿರಾಯನನ್ನ ಮುಗಿಸಿದ ಹಂತಕಿ ತನ್ನ ಪ್ರಿಯತಮನ ಜೊತೆ ಜೈಲು ಕಂಬಿ ಎಣಿಸುತ್ತಿದ್ದಾಳೆ.