ಹುಬ್ಬಳ್ಳಿ : ದೇವರಾಜ ಅರಸು ಅವರು ಸಾಮಾಜಿಕ ಪರಿವರ್ತನೆ ಚಿಂತನೆಯನ್ನು ಹೊಂದಿದ್ದ ಧೀಮಂತ ನಾಯಕರಾಗಿದ್ದರು. ರಾಜ್ಯದ ಮುಖ್ಯ ಮಂತ್ರಿಗಳಾಗಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಿ, ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಹುಬ್ಬಳ್ಳಿ ನಗರ ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು.
ಹುಬ್ಬಳ್ಳಿಯ ಮಿನಿ ವಿಧಾನ ಸೌಧದಲ್ಲಿ ತಾಲ್ಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ 105ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ಬಡವರು, ಅವಕಾಶ ವಂಚಿತರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದ ದೇವರಾಜ ಅರಸು ರಾಜಯಕೀಯ ಹಾಗೂ ಸಾಮಾಜಿಕವಾಗಿ ಇವರ ಏಳಿಗೆಗೆ ಶ್ರಮಿಸಿದರು. ಉಳುವವನೇ ಭೂಮಿ ಒಡಯ ಕಾಯ್ದೆಯ ಅನುಷ್ಠಾನ ಇವರ ಕಾಲ ಚಾರಿತ್ರಿಕ ಸಾಧನೆಯಾಗಿದೆ ಎಂದರು.
ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಸದ್ಬಾವನಾ ದಿನಾಚರಣೆ ಅಂಗವಾಗಿ ಭಾವೈಕ್ಯತಾ ಪ್ರತಿಜ್ಞೆ ಬೋಧಿಸಿದರು. ಕೊವಿಡ್ 19 ಹಿನ್ನಲೆಯಲ್ಲಿ ಸರಳವಾಗಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಾ.ಪಂ. ಇ.ಓ ಎಂ.ಎಂ. ಸವದತ್ತಿ, ಸಮಾಜಕಲ್ಯಾಣಧಿಕಾರಿ ನಂದಾ ಹಣಬರಟ್ಟಿ, ಹಿಂದುಳಿದ ವರ್ಗದ ಇಲಾಖಾ ವಿಸ್ತರಣಾಧಿಕಾರಿ ಸಿ.ವ್ಹಿ. ಕರವೀರಮಠ, ವಾರ್ತಾ ಇಲಾಖೆಯ ಅಧೀಕ್ಷಕ ವಿನೋದಕುಮಾರ ಮತ್ತಿತರರು ಉಪಸ್ಥಿತರಿದ್ದರು.