Sunday, May 29, 2022
Powertv Logo
Homeರಾಜ್ಯಹುಬ್ಬಳ್ಳಿ ಗಲಭೆ ಕೇಸ್​ : ವಾಸೀಂ ಹರಿಬಿಟ್ಟ ವಿಡಿಯೋದಲ್ಲಿ ಏನಿದೆ ಗೊತ್ತಾ..?

ಹುಬ್ಬಳ್ಳಿ ಗಲಭೆ ಕೇಸ್​ : ವಾಸೀಂ ಹರಿಬಿಟ್ಟ ವಿಡಿಯೋದಲ್ಲಿ ಏನಿದೆ ಗೊತ್ತಾ..?

ಹುಬ್ಬಳ್ಳಿ : ಕರುನಾಡನ್ನೇ ಕಂಗೆಡಿಸಿದ್ದ ಹಳೇ ಹುಬ್ಬಳ್ಳಿ ಗಲಭೆಯ ತನಿಖೆ ಚುರುಕುಗೊಂಡಿದೆ.ವಾಣಿಜ್ಯ ನಗರಿಯನ್ನು ಹೊತ್ತಿ ಉರಿಸಿದ್ದ ಈ ಪ್ರಕರಣದ ಬೆನ್ನು ಬಿದ್ದಿದ್ದ ಖಾಕಿಪಡೆಗೆ ಗಲಭೆಯ ಮಾಸ್ಟರ್‌ಮೈಂಡ್‌ ಹಾಗೂ ಆತನ ಸಹಚರರಾದ ಇಬ್ಬರು ರೌಡಿಶೀಟರ್‌ಗಳು ಸಿಕ್ಕಿಬಿದ್ದಿದ್ದಾರೆ.ಈ ಮೂಲಕ ಪ್ರಕರಣದಲ್ಲಿ ಈವರೆಗೂ ಬಂಧನವಾದವ ಆರೋಪಿಗಳ ಸಂಖ್ಯೆ 133ಕ್ಕೆ ಏರಿಕೆಯಾಗಿದೆ.

ರಾಜ್ಯ ಮಾತ್ರವಲ್ಲದೆ, ಇಡೀ ದೇಶದ ಗಮನ ಸೆಳೆದಿದ್ದ ಹಳೇ ಹುಬ್ಬಳ್ಳಿ ಗಲಭೆಯ ಮಾಸ್ಟರ್‌ಮೈಂಡ್ ಮೌಲ್ವಿ ವಾಸೀಂ ಪಠಾಣ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ.ಗಲಾಟೆ ವೇಳೆ ಕಮಿಷನರ್ ಕಾರಿನ ಮೇಲೇರಿ ಗಲಭೆಗೆ ಪ್ರಚೋದನೆ ನೀಡಿದ್ದ ವಾಸೀಂ ಪಠಾಣ್‌ ಮುಂಬೈಗೆ ಹಾರಿದ್ದ. ಅಜ್ಞಾತ ಸ್ಥಳದಿಂದಲೇ ವಿಡಿಯೋ ಹರಿಬಿಟ್ಟಿದ್ದ.ತಾನೇ ಶರಣಾಗುವುದಾಗಿ ಹೇಳಿದ್ದ.ಅಲ್ಲದೆ, ಹುಬ್ಬಳ್ಳಿ ಮೂಲದ ವ್ಯಕ್ತಿ ಜೊತೆ ನಿರಂತರ ಫೋನ್‌ ಸಂಪರ್ಕದಲ್ಲಿದ್ದ.

ಇಸ್ಲಾಂ ಧರ್ಮಕ್ಕೆ ಅಪಮಾನ ಮಾಡಿದ ಬಗ್ಗೆ ಮುಸ್ಲಿಂ ಯುವಕರಲ್ಲಿ ಅಸಮಾಧಾನ ಇತ್ತು. ಈ ಕುರಿತು ದೂರು ನೀಡಲು ಹಲವಾರು ಯುವಕರು ಅಲ್ಲಿ ಜಮಾಯಿಸಿದ್ದರು. ಜನರ ಜೊತೆಗೆ ಮಾತನಾಡಲು ನನ್ನನ್ನು ಕರೆಸಿದ್ದರು. ನಾನು ಅಲ್ಲಿ ಸೇರಿದ್ದ ಜನರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದೇನೆ ಹೊರತು ಯಾವದೇ ಪ್ರಚೋದನೆ ಹೇಳಿಕೆ ನೀಡಿಲ್ಲ.ಪೊಲೀಸರೇ ನನಗೆ ಜೀಪ್ ಹತ್ತಿ ಜನರಿಗೆ ತಿಳಿ ಹೇಳಲು ತಿಳಿಸಿದರು ಎಂದಿದ್ದಾನೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಬೆಳಗಾವಿಗೆ ಬಂದು ಸಂಬಂಧಿಕರ ಮನೆಯಲ್ಲಿ ಅವಿತಿದ್ದ.ಇದನ್ನು ಅರಿತ ಪೊಲೀಸರು,ವಾಸೀಂ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನೇ ಖೆಡ್ಡಾಕ್ಕೆ ಬೀಳಿಸಿದರು.ಬಳಿಕ ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್‌ ಜಗದೀಶ್ ಹಂಚಿನಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೌಲ್ವಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.

ಇನ್ನೊಂದೆಡೆ ಗಲಭೆ ಮಾಸ್ಟರ್‌ ಮೈಂಡ್ ಮೌಲ್ವಿ ಅರೆಸ್ಟ್‌ ಆಗುವ ಮುನ್ನವೇ ಬೆಂಗಳೂರಿನ ಕಾಟನ್‌ಪೇಟೆಯ ಲಾಡ್ಜ್‌ನಲ್ಲಿ ಅಡಗಿದ್ದ ಆತನ ಇಬ್ಬರು ಆಪ್ತ ರೌಡಿ ಶೀಟರ್‌ಗಳಾದ ತುಫೈಲ್‌ ಮುಲ್ಲಾ, ಅಬ್ದುಲ್‌ ಮಲ್ಲಿಕ್‌ನನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಗಲಭೆಯಲ್ಲಿ ಇವರಿಬ್ಬರ ಪ್ರಮುಖ ಪಾತ್ರವೂ ಇದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ವಾಸೀಂ ಕೊಡುವ ವಿಡಿಯೋ ಅಷ್ಟೇ ಅಲ್ಲ.ಬೇರೆ ಬೇರೆ ರೀತಿಯ ಸಾಕ್ಷ್ಯಾಧಾರಗಳು ಇರುತ್ತವೆ ಅಂತಾ ನಾನು ಯಾವುದೇ ತಪ್ಪು ಮಾಡಿಲ್ಲವೆಂಬ ಬಂಧಿತ ಮೌಲ್ವಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನೊಂದೆಡೆ ವಿವಾದದ ಕಿಡಿಯಿಂದಾಗಿ ಹೊತ್ತಿ ಉರಿದಿದ್ದ ಹುಬ್ಬಳ್ಳಿ ನಿಧಾನವಾಗಿ ಸಹಜಸ್ಥಿತಿಯತ್ತ ಮರಳುತ್ತಿದ್ದಂತೆ ಪ್ರಕರಣದಲ್ಲಿ ಎಸ್‌ಡಿಪಿಐ ನಾಯಕರು ಇದೀಗ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ, ತನ್ನ ಆಡಳಿತ ವೈಫಲ್ಯ ಮತ್ತು ಸಾಲು ಸಾಲು ಹಗರಣ ಹಾಗೂ 40% ಕಮಿಷನ್ ಲಂಚ ಪ್ರಕರಣ ಮುಚ್ಚಿ ಹಾಕಲು ಹುಬ್ಬಳ್ಳಿ ಗಲಭೆಗೆ ಷಡ್ಯಂತ್ರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗಲಭೆಯ ಹಿಂದೆ ಬಿಜೆಪಿಯ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಹಾಗೂ ಕೆ.ಎಸ್.ಈಶ್ವರಪ್ಪ ಅವರ ಕೈವಾಡವಿರುವ ಶಂಕೆ‌ಯಿದೆ. ಹಾಗಾಗಿ ಗಲಭೆಯ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಸಿಟಿಂಗ್ ಜಡ್ಜ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು.

ಇನ್ನೊಂದೆಡೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಗಲಭೆ ಕುರಿತು ಮಾಹಿತಿ ಪಡೆದರು.

ಒಟ್ಟಿನಲ್ಲಿ ವಾಣಿಜ್ಯ ನಗರಿ, ಗಲಭೆ ನಂತರ ಸಹಜ ಸ್ಥಿತಿಗೆ ಮರಳಿದೆ. ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ.ಇನ್ನಾದರೂ ಎಲ್ಲಾ ಧರ್ಮೀಯರು ಶಾಂತಿ ಸೌಹಾರ್ದತೆ ಕಾಪಾಡಬೇಕಿದೆ.

- Advertisment -

Most Popular

Recent Comments