ಭಾರತದಲ್ಲಿ ಬ್ಯಾನ್​ ಆಗುತ್ತಾ ಹುವಾವೇ..? ಹಾಗಾದ್ರೆ ಖರೀದಿ ಮಾಡಿರೋ ಫೋನ್​​ಗಳ ಗತಿ ಏನು?

0
282

ಹುವಾವೇ..ಬಹುಶಃ ಈ ಹೆಸ್ರು ಕೇಳ್ದೇ ಇರೋರೇ ಇಲ್ಲ. ಟೆಲಿಕಮ್ಯನಿಕೇಷನ್​ ಹಾಗೂ ಎಕ್ವಿಪ್​ ಮೆಂಟ್ಸ್​ ಉತ್ಪಾದನೆಯಲ್ಲಿ ವಿಶ್ವದ ನಂಬರ್ 1 ಸಂಸ್ಥೆ ಈ ಹುವಾವೇ..! ಚೀನಾ ಮೂಲದ ಈ ಸಂಸ್ಥೆ ಜಗತ್ತಿನ 195 ರಾಷ್ಟ್ರಗಳ ಪೈಕಿ ಸುಮಾರು 175 ರಾಷ್ಟ್ರಗಳಲ್ಲಿ ಸಖತ್ ಸೌಂಡು ಮಾಡ್ತಿದೆ. 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ.

ಸ್ಮಾರ್ಟ್ ಫೋನ್​ ತಯಾರಿಕೆಯಲ್ಲಿ ಸ್ಯಾಮ್​ಸಂಗ್ ನಂತರದ ಸ್ಥಾನದಲ್ಲಿ, ಅಂದ್ರೆ ವಿಶ್ವದ 2ನೇ ಅತೀ ದೊಡ್ಡ ಸಂಸ್ಥೆ ಅನ್ನೋ ಹೆಗ್ಗಳಿಕೆ ಈ ಹುವಾವೇಯದ್ದು. ಫಾರ್ಚುನ್​ ಗ್ಲೋಬಲ್​ 500 ಸಂಸ್ಥೆಗಳ ಪಟ್ಟಿಯಲ್ಲಿ 72ನೇ ಸ್ಥಾನದಲ್ಲಿದೆ. 1987ರಲ್ಲಿ ರೆನ್​ ಝೆಂಗ್​ ಫಿ ಅನ್ನೋರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ರು. ಚೈನಾ ಭಾಷೆಯಲ್ಲಿ ಹುವಾ ಎಂದರೆ ಚೀನಾ, ವೇ ಎಂದರೆ ಸಾಧನೆ ಅಂತ ಅರ್ಥ. ಹೆಸರಿಗೆ ತಕ್ಕಂತೆ ಹುವಾವೇ ಟೆಲಿಕಮ್ಯುನಿಕೇಷನ್ ಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಬೆಳೆದು ನಿಂತಿದೆ.

ಚೀನಾದ ವಸ್ತುಗಳು ಅಂದ್ರೆ ಅದಕ್ಕೆ ಗ್ಯಾರೆಂಟಿನೂ ಇಲ್ಲ, ವಾರೆಂಟಿನೂ ಇಲ್ಲ ಅನ್ನೋ ಕಾಲದಲ್ಲಿ ಹುವಾವೇ ಕ್ರಾಂತಿಯನ್ನೇ ಮಾಡಿ ಬಿಟ್ಟಿತು. ವಾರೆಂಟಿ, ಗ್ಯಾರೆಂಟಿ ಜೊತೆಗೆ ಗ್ರಾಹಕರ ನಂಬಿಕೆಯನ್ನು ಗಳಿಸಿಕೊಂಡು ವಿಶ್ವದಾದ್ಯಂತ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ವಾರ್ಷಿಕ ಶೇಕಡ 10ರಷ್ಟು ಹೆಚ್ಚಿನ ಆದಾಯವನ್ನು ಗಳಿಸುತ್ತಿದೆ. 2018ರ ಅಂತ್ಯದೊಳಗೆ ಬರೋಬ್ಬರಿ 20 ಕೋಟಿಗೂ ಹೆಚ್ಚು ಮೊಬೈಲ್​ಗಳನ್ನು ಮಾರಾಟ ಮಾಡಿದ್ದ ಹುವಾವೇ 900 ಕೋಟಿಗೂ ಹೆಚ್ಚಿನ ಲಾಭಗಳಿಸಿತ್ತು.

ಇಂಥಾ ಬಹು ಜನಪ್ರಿಯ ಕಂಪನಿಯ ಸೆಲ್​ ಫೋನ್​ಗಳನ್ನು ಅಮೆರಿಕಾ ಬ್ಯಾನ್ ಮಾಡಿರೋದು ನಿಮ್ಗೆ ಈಗಾಗಲೇ ಗೊತ್ತಾಗಿರುತ್ತೆ. ಅಮೆರಿಕಾ ಮಾತ್ರವಲ್ಲದೆ ವಿಶ್ವದ ನಾನಾ ಮುಂದುವರೆದ ರಾಷ್ಟ್ರಗಳು ತಮ್ಮ ದೇಶದಲ್ಲಿ ಹುವಾವೇಯನ್ನು ನಿಷೇಧಿಸಿವೆ. ಇದೀಗ ಭಾರತ ಕೂಡ ದೇಶದಲ್ಲಿ ಹುವಾವೇಗೆ ಎಳ್ಳುನೀರು ಬಿಡೋ  ಚಿಂತನೆಯಲ್ಲಿದೆ.

ಅಷ್ಟಕ್ಕೂ ಅಮೆರಿಕಾ ಹುವಾವೇಯನ್ನು ಬ್ಯಾನ್ ಮಾಡಿದ್ದು ಏಕೆ?  :  ಚೀನಾ ಮತ್ತು ಆಫ್ರಿಕಾ ನಡುವಿನ ಮುನಿಸು ತಣ್ಣಗಾಗಿ, ಉಭಯ ರಾಷ್ಟ್ರಗಳ ಸಂಬಂಧ ಸುಧಾರಿಸಿತ್ತು. ಆ ವೇಳೆ ಇಥಿಯೋಪಿಯಾ ರಾಷ್ಟ್ರದಲ್ಲಿ ಹುವಾವೇ ಸಂಸ್ಥೆ ತನ್ನ ಕಚೇರಿಯನ್ನು ತೆರೆದಿತ್ತು, ಅಲ್ಲಿ ಉತ್ತಮ ಮಾರುಕಟ್ಟೆಯನ್ನು ಅದು ಪಡೆಯಿತು. ಆದ್ರೆ, ಕೆಲವೇ ಕೆಲವು ದಿನಗಳಲ್ಲಿ ಇಥಿಯೋಪಿಯಾದ ಆಂತರಿಕ ವಿಚಾರಗಳು ಚೀನಾದ ಶಾಂಘೈ ನಗರವನ್ನು ತಲುಪುತ್ತಿವೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಯ್ತು. ಹುವಾವೇ ಮೂಲಕ ಇಥಿಯೋಪಿಯಾದ ಡೇಟಾಗಳು ಚೀನಾ ತಲುಪುತ್ತಿವೆ ಅನ್ನೋ ಅರೋಪ ಕೇಳಿ ಬಂದಿತ್ತು.

ಆಗ ಅಮೆರಿಕಾ ಕೂಡ ಎಚ್ಚೆತ್ತುಕೊಂಡಿತ್ತು. ಚೀನಾ ಬೇಹುಗಾರಿಕೆ ನಡೆಸುತ್ತಿದೆ ಅಂತ ಅಮೆರಿಕಾ ತನ್ನ ದೇಶದಲ್ಲಿ ಹುವಾವೇಯನ್ನು 2018ರಲ್ಲಿ ಬ್ಯಾನ್ ಮಾಡಿದೆ. ”ಹುವಾವೇ ಸಂಸ್ಥಾಪಕ ರೆನ್​ ಝೆಂಗ್ ಫಿ ಚೀನಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ರು. ಹಾಗಾಗಿ ಚೀನಾ ಸರ್ಕಾರಕ್ಕೂ ಹುವಾವೇ ಸಂಸ್ಥೆಗೂ ನೇರ ಸಂಬಂಧವಿದೆ. 1987ರಿಂದಲೂ ಚೀನಾ ಸರ್ಕಾರ ಹುವಾವೇ ಮೇಲೆ ಹಕ್ಕುಸ್ವಾಮ್ಯ ಹೊಂದಿದೆ” ಅನ್ನೋದು ಅಮೆರಿಕಾ ಆರೋಪ.   ಅಮೆರಿಕಾ ಹುವಾವೇ ಬ್ಯಾನ್ ಮಾಡ್ತಾ ಇದ್ದಂತೆ ವಿಶ್ವದ ಅನೇಕ ರಾಷ್ಟ್ರಗಳು ಹುವಾವೇಗೆ ನಿಷೇಧ ಹೇರಲಾರಂಭಿಸಿವೆ.

ಭಾರತದಲ್ಲಿ ಹುವಾವೇ ಬ್ಯಾನ್ ಆಗುತ್ತಾ?  :  ಇನ್ನು ಇದೀಗ ಹುವಾವೇ ಭಾರತದಲ್ಲೂ ಬ್ಯಾನ್ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಭಾರತದಲ್ಲೂ ಹುವಾವೇ ಮೇಲೆ ಸಾಕಷ್ಟು ಅನುಮಾನಗಳಿವೆ. ಹೀಗಾಗಿ ಕೇಂದ್ರ ಸರ್ಕಾರ ಹುವಾವೇ ನಿಷೇಧದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ.

ಭಾರತ ಹೀಗೊಂದು ಚಿಂತನೆ ನಡೆಸಿದೆ ಅನ್ನೋ ಗುಸುಗುಸು ಕೇಳಿ ಬರ್ತಿದ್ದಂತೆ ಚೀನಾ ಎಚ್ಚರಗೊಂಡಿದೆ. ಭಾರತದೊಡನೆ ಮಾತುಕತೆ ನಡೆಸಲು ಮುಂದಾಗಿದೆ. ಚೀನಾದ ವಸ್ತುಗಳಿಗೆ ಅತೀ ದೊಡ್ಡ ಮಾರುಕಟ್ಟೆ ಅಂದ್ರೆ ಅದು ಭಾರತ. ಜಗತ್ತಿನ ಯಾವ್ದೇ ದೇಶದಲ್ಲಿ ತನ್ನ ವಸ್ತುಗಳು ಬ್ಯಾನ್​ ಆದ್ರು ಚೀನಾಕ್ಕೆ ಅಷ್ಟೊಂದು ದೊಡ್ಡ ಹೊಡೆತ ಬೀಳಲ್ಲ. ಭಾರತದಲ್ಲಿ ಬ್ಯಾನ್ ಆದ್ರೆ ಭಾಗಶಃ ಕಂಪನಿಯೇ ಕ್ಲೋಸ್ ಆದಂತೆ..! ಆದ್ದರಿಂದ ಚೀನಾ ಭಾರತದ ಎದುರು ಕೈ ಕಟ್ಟಿಕೊಂಡಿದೆ. 5ಜಿ ಪ್ರಯೋಗಗಳು ಭಾರತದಲ್ಲೇ ನಡೆಯಬೇಕು ಅಂತ ಇಂಗಿತ ವ್ಯಕ್ತಪಡಿಸಿರೋ ಚೀನಾ ಹುವಾವೇ ವಿಚಾರದಲ್ಲಿ ಭಾರತ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಬೇಕು ಅಂತ ಮನವಿ ಮಾಡಿದೆ. ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕು.

 

ಹಾಗಾದ್ರೆ ಹುವಾವೇ- ಹಾನರ್ ಫೋನ್​ಗಳನ್ನು ಕೊಂಡುಕೊಳ್ಬೇಕೆ? ಬೇಡ್ವೆ? : ಅಮೆರಿಕಾ ಮೊದಲಾದ ರಾಷ್ಟ್ರಗಳು ಹುವಾವೇಯನ್ನು ಬ್ಯಾನ್ ಮಾಡಿವೆ. ಭಾರತ ಕೂಡ ಈ ಬಗ್ಗೆ ಚಿಂತನೆ ನಡೆಸ್ತಾ ಇದೆ ಅಂದಾಗ ಸಾಮಾನ್ಯವಾಗಿ ಮೂಡುವ ಪ್ರಶ್ನೆ ಈ ಹುವಾವೇ ಮತ್ತು ಇದೇ ಸಂಸ್ಥೆಯ ಹಾನರ್ ಫೋನ್​ಗಳನ್ನು ಖರೀದಿಸ ಬೇಕೇ ಬೇಡ್ವೆ ಅನ್ನೋದು.

ಈಗಾಗಲೇ ಈ ಸಂಸ್ಥೆಯ ಮೊಬೈಲ್ ಇರೋರು ಮಾರುವ ಯೋಚನೆಯನ್ನೂ ಮಾಡಿರಬಹುದು. ಆದರೆ, ಖಂಡಿತಾ ಅದರ ಅಗತ್ಯವಿಲ್ಲ. ಹುವಾವೇ ತನ್ನದೇಯಾದ ಆಪರೇಟಿಂಗ್ ಸಿಸ್ಟಮ್ ಅನ್ನು ಸಿದ್ಧಪಡಿಸಿಕೊಳ್ಳಲಿದ್ದು, ಆ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ. ಅಷ್ಟೇ ಅಲ್ಲದೆ ಭಾರತದಲ್ಲಂತೂ ಬ್ಯಾನ್ ಆಗುವುದಿಲ್ಲ. ಅಮೆರಿಕಾ- ಚೀನಾ ನಡುವಿನ ವೈಮನಸ್ಸು ಏನೇ ಇದ್ದರು ಹುವಾವೇ ವಿಚಾರದ ಕಿರಿಕಿರಿಯಂತೂ ಶೀಘ್ರದಲ್ಲೇ ಸುಖಾಂತ್ಯ ಕಾಣಲಿದೆ. ಆದ್ದರಿಂದ ಹುವಾವೇ ಸಂಸ್ಥೆಯ ಮೊಬೈಲ್ ಕೊಳ್ಳಲು ಯೋಚನೆ ಮಾಡೋದು ಬೇಡ.

 

LEAVE A REPLY

Please enter your comment!
Please enter your name here