Thursday, September 29, 2022
Powertv Logo
HomePower Specialಸಿಎಂ ತವರಿನಲ್ಲೇ ಹಾಳು ಬಿದ್ದಿದೆ ವಾಲ್ಮೀಕಿ ಭವನ

ಸಿಎಂ ತವರಿನಲ್ಲೇ ಹಾಳು ಬಿದ್ದಿದೆ ವಾಲ್ಮೀಕಿ ಭವನ

ಹಾವೇರಿ : ನಗರದ ಹಾನಗಲ್ ರಸ್ತೆಯಲ್ಲಿ ಭವ್ಯವಾದ ಜಿಲ್ಲಾ ವಾಲ್ಮೀಕಿ ಭವನ ಕಟ್ಟಡ ತಲೆ ಎತ್ತಿದೆ. ಅಂದುಕೊಂಡಂತೆ ಎಲ್ಲವೂ ಮುಗಿದಿದ್ದರೆ ಇಷ್ಟೊತ್ತಿಗಾಗಲೇ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಅನುಕೂಲವಾಗುತ್ತಿತ್ತು. ಆದ್ರೆ, ಹತ್ತು ವರ್ಷಗಳ ಹಿಂದೆ ಕಟ್ಟಡ ಕಾಮಗಾರಿ ಆರಂಭವಾಗಿದ್ರೂ ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಟ್ಟಡ ಕಾಮಗಾರಿಗೆ ಮೂರು ಕೋಟಿ ಅನುದಾನ‌ ನೀಡಲಾಗಿತ್ತು. ಸರಕಾರದಿಂದ ನೀಡಿದ ಮೂರು ಕೋಟಿ ವೆಚ್ಚ ಮಾಡಲಾಗಿದೆ. ಆದ್ರೆ, ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕಳಪೆ ಕಾಮಗಾರಿ ಹಣ ಕೊಳ್ಳೆ ಹೊಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿಯಲ್ಲಿ 28 ಲಕ್ಷ ಅವ್ಯವಹಾರ ನಡೆಸಿದ್ದಾರೆ ಎಂದು ಆಂತರಿಕ ತನಿಖೆ ವೇಳೆ ಬಹಿರಂಗವಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಕಳಪೆ ಕಟ್ಟಡ ಕಾಮಗಾರಿಯಿಂದಾಗಿ ಕಟ್ಟಡದ ನೆಲಮಹಡಿ ಈಜುಕೊಳವಾಗಿ ಬದಲಾಗಿದೆ. ಮಳೆಗಾಲದಲ್ಲಿ ಸಾಕಷ್ಟು ನೀರು ನಿಂತು ಕಟ್ಟಡಕ್ಕೆ ಹಾನಿಯುಂಟು ಮಾಡುತ್ತಿದೆ. ಮತ್ತೊಂದೆಡೆ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಸಲಕರಣೆಗಳು ಚೆಲ್ಲಾಪಿಲ್ಲಿಯಾಗಿವೆ. ಕಿಟಕಿ ಗಾಜುಗಳು ಒಡೆದು ಹೋಗಿದ್ದು, ಆವರಣದ ತುಂಬೆಲ್ಲಾ ಗಿಡಗಂಟಿಗಳು ಬೆಳೆದು ಒಳಗಡೆ ಹೋಗಲು‌ ಆಗದ ಸ್ಥಿತಿ ನಿರ್ಮಾಣವಾಗಿದೆ. ಮತ್ತದೆ ಕಟ್ಟಡಕ್ಕೆ ಎರಡು ಕೋಟಿ ಅನುದಾನ‌ ಮಂಜೂರಾಗಿದ್ದು, ಕಳಪೆ ಕಾಮಗಾರಿ ಮಾಡಿದ್ದ ಲೋಕೋಪಯೋಗಿ ಇಲಾಖೆಗೆ ಮತ್ತೆ ಕಾಮಗಾರಿ ನೀಡಲು ಮುಂದಾಗಿರೋದು ವಾಲ್ಮೀಕಿ ಸಮಾಜದವರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ನಲ್ಲಿ ಹಾವೇರಿ ಜಿಲ್ಲಾ ವಾಲ್ಮೀಕಿ ಭವನ ನಿರ್ಮಾಣದ ಹೆಸರಿನಲ್ಲಿ ಜೇಬು ತುಂಬಿಸಿಕೊಂಡವರು ಸಾಕಷ್ಟು ಮಂದಿ. ಆದ್ರೆ, ಕೋಟಿ ಕೋಟಿ ಹಣ ವೆಚ್ಚವಾದ್ರೂ ಕಾಮಗಾರಿ ಮಾತ್ರ ಮುಗಿಯದೆ ಕಟ್ಟಡ ಹಾಳಾಗುತ್ತಿರೋದು ಮಾತ್ರ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ವೀರೇಶ ಬಾರ್ಕಿ, ಪವರ್ ಟಿವಿ,ಹಾವೇರಿ.

- Advertisment -

Most Popular

Recent Comments