ಪುಟ್ಟಕೋಣೆಯಲ್ಲಿ ಬದುಕು ಸವೆಸಿದ ಬಾಲಕ ದೇಶದ ಪ್ರತಿಷ್ಠಿತ ಕಂಪನಿ ಸಂಸ್ಥಾಪಕ..!

0
148

ಅವರು ಹನುಮಂತ್ ರಾಮ್ದಾಸ್ ಗಾಯಕ್ವಾಡ್ , ದೇಶದ ಪ್ರತಿಷ್ಠಿತ ಬಿವಿಜಿ ಇಂಡಿಯಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್. ಒಂದು ಕಾಲದಲ್ಲಿ ಒಂದು ಹೊತ್ತಿನ ತುತ್ತಿಗೂ ಪರದಾಡುತ್ತಿದ್ದರು. ಇಂದು ಸಾವಿರ ಕೋಟಿ ರೂಪಾಯಿ ಒಡೆಯರು. ಅಷ್ಟೇಅಲ್ಲ, ಸಾವಿರಾರು ಜನರ ಬದುಕಿಗೆ ಆಶ್ರಯದಾತರು!
‘ಬಿವಿಜಿ ಇಂಡಿಯಾ’ ಭಾರತದ ಸಮಗ್ರ ಸೇವೆಗಳ ಉದ್ಯಮದಲ್ಲಿ ಸಾಕಷ್ಟು ಯಶಸ್ಸು ಕಂಡಿದೆ. ಕಷ್ಟದ ದಿನಗಳನ್ನು ಮೆಟ್ಟಿನಿಂತು ಯಶಸ್ಸಿನ ಹಾದಿಯಲ್ಲಿ ಓಡುತ್ತಿದೆ. ಹನುಮಂತ್ ಅವರು ಹುಟ್ಟಿದ್ದು ಮಹಾರಾಷ್ಟ್ರದ ಸತಾರ ಜಿಲ್ಲೆಯ ರಹೀಮತ್ಪುರದಲ್ಲಿ. ಇವರ ಕುಟುಂಬ ಬಡತನ ಬೆನ್ನಿಗೆ ಕಟ್ಟಿಕೊಂಡೇ ಜೀವನ ನಡೆಸುತ್ತಿತ್ತು.
ಹನುಮಂತ್ ಕುಟುಂಬ ಒಂದು ಹೊತ್ತಿನ ಊಟಕ್ಕೂ ಸಾಕಷ್ಟು ಪರದಾಡುತ್ತಿತ್ತು. ಕೇವಲ 10 ಬೈ 10 ಸುತ್ತಳತೆಯ ಒಂದೇ ಒಂದು ರೂಮ್ನಲ್ಲಿ ಜೀವನ ಸಾಗುತ್ತಿತ್ತು. ಕತ್ತಲಾದ್ರೆ ವಿದ್ಯುತ್ ಇಲ್ಲದೆ ಬೆಳಕೇ ಇರುತ್ತಿರಲಿಲ್ಲ. ಬದುಕಿನ ಎಲ್ಲಾ ಕಷ್ಟಗಳನ್ನು ಹನುಮಂತ್ ಜೀವನದ ಆರಂಭದಲ್ಲೇ ಅನುಭವಿಸಿದ್ದರು.
ಆದ್ರೆ, ಇವರ ಕನಸುಗಳನ್ನು ಮಾತ್ರ ಕೈ ಬಿಟ್ಟಿರಲಿಲ್ಲ. ಬದುಕಿನ ಎಲ್ಲಾ ಕಷ್ಟಗಳನ್ನು ದೂರ ಮಾಡಬೇಕಾದರೆ ಕಠಿಣ ಪರಿಶ್ರಮ ಬೇಕು ಅನ್ನುವುದನ್ನು ಅರಿತುಕೊಂಡ್ರು. ತನ್ನ ಮುಂದೆ ಇರುವ ದಾರಿ ಕೇವಲ ಓದು ಮಾತ್ರ ಅನ್ನುವುದು ಹನುಮಂತ್ ಅವರಿಗೆ ಬೇಗನೆ ಅರ್ಥವಾಯಿತು. ಅದರಂತೆ ಓದಿನ ಕಡೆ ಹೆಚ್ಚು ಗಮನಕೊಟ್ರು. 4ನೇ ತರಗತಿಯಿಂದಲೇ ಹನುಮಂತ್ ಸರಕಾರದಿಂದ 10 ರೂಪಾಯಿ ವಿದ್ಯಾರ್ಥಿವೇತನ ಪಡೆಯಲು ಆರಂಭಿಸಿದ್ದರು. ಆಮೇಲೆ, ಸ್ಕಾಲರ್ ಶಿಫ್ ಎಂಜಿನಿಯರಿಂಗ್ ಓದುವಿಗೆ ನೆರವಾಯಿತು.
ಹನುಮಂತ್ ಅವರು, ಬಾಲಕನಾಗಿದ್ದ ಬರೀ ಶಾಲೆಗೆ ಹೋಗಿಬರುವ ಕೆಲಸವನ್ನಷ್ಟೇ ಮಾಡುತ್ತಿರಲಿಲ್ಲ. ಮನೆಯಲ್ಲಿ ತಾಯಿಗೆ ಸಹಾಯ ಮಾಡುವುದು, ರೈಲ್ವೆ ಸ್ಟೇಷನ್ ನಲ್ಲಿ ಹಣ್ಣು ಮಾರುವುದು, ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುವುದು, ಸ್ವಲ್ಪ ದೊಡ್ಡವನಾದ ಮೇಲೆ ಶಾಲೆಯೊಂದರಲ್ಲಿ ಟೀಚರ್ ಆಗಿಯೂ ಕೆಲಸ ಮಾಡಿ, ಅದರಿಂದ ಬಂದ ಹಣ, ತಮ್ಮ ಕುಟುಂಬಕ್ಕೆ, ಮತ್ತೆ ಓದುವಿಗೂ ಬಳಸುತ್ತಿದ್ದರು.
ಕಾಲೇಜು ಓದುತ್ತಿದ್ದಾಗಲೇ ತಂದೆಯನ್ನು ಕಳೆದಕೊಂಡ ಅವರು, ತಮ್ಮ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತರು. 1994ರಲ್ಲಿ ಪುಣೆಯ ಟಾಟಾ ಮೋಟಾರ್​ನ ಟ್ರೈನಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡ್ರು. ಅಲ್ಲಿ ಹನುಮಂತ್ ‘ಭಾರತ್ ವಿಕಾಸ್ ಪ್ರತಿಷ್ಠಾನ’ – ಬಿವಿಜಿ ಎನ್ನುವ ನಾನ್ ಪ್ರಾಫಿಟ್ ಟ್ರಸ್ಟ್ ಮೂಲಕ ಕೆಲಸ ಕೊಡುವ ಐಡಿಯಾವನ್ನು ನೀಡಿದ್ರು.
ಆರಂಭದಲ್ಲಿ ಹನುಮಂತ್ ಮತ್ತು ಅವರ 8 ಗೆಳೆಯರು ಬಿವಿಜಿ ಸಂಸ್ಥೆಯಲ್ಲಿ ಕೆಲಸ ಮಾಡತೊಡಗಿದ್ದರು. ಶ್ರಮಪಟ್ಟ ಸಂಸ್ಥೆಯನ್ನು ಬೆಳೆಸಿದ್ರು. ಇವತ್ತು ದೇಶದ 20 ರಾಜ್ಯಗಳಲ್ಲಿ ಬಿವಿಜಿ ಕಾರ್ಯ ನಡೆಸುತ್ತಿದೆ. ಈ ವಲಯದಲ್ಲಿ ಬಿವಿಜಿ ವಿಶ್ವದ ಹಲವು ಕಂಪನಿಗಳ ಜೊತೆ ಒಪ್ಪಂದಗಳನ್ನು ಕೂಡ ಮಾಡಿಕೊಂಡಿದೆ. ಸುಮಾರು 700 ಕ್ಲೈಂಟ್​ಗಳನ್ನು ಹೊಂದಿದೆ. ಏಷ್ಯಾದಲ್ಲೇ ತುರ್ತು ವೈದ್ಯಕೀಯ ಸೇವೆ ಒದಗಿಸುವ ಕಂಪನಿಗಳಲ್ಲಿ ಬಿಜಿವಿ ಅತೀ ದೊಡ್ಡ ಸಂಸ್ಥೆ ಎನಿಸಿದೆ.
ಹನುಮಂತ್ ಅವರ ಸಂಸ್ಥೆ, ಬಿವಿಜಿ ಪಾರ್ಲಿಮೆಂಟ್ ಶುದ್ಧಗೊಳಿಸುವ ಕೆಲಸವನ್ನು ಕೂಡ ಮಾಡುತ್ತಿದೆ. ದೆಹಲಿ ಹೈಕೋರ್ಟ್, ಪ್ರಧಾನಿ ನಿವಾಸ ಮತ್ತು ರಾಷ್ಟ್ರಪತಿ ಭವನವನ್ನು ಶುದ್ಧಗೊಳಿಸುವ ಕೆಲಸವನ್ನು ಕೂಡ ಬಿವಿಜಿ ಮಾಡುತ್ತಿದೆ. ಹನುಮಂತ್ ಕನಸುಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. 2017ರ ವೇಳೆಗೆ ಹನುಮಂತ್ ಸುಮಾರು 10 ಲಕ್ಷ ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನ ಕಾರ್ಯಗತಗೊಳಿಸಿದ್ದಾರೆ.
ಇಂದು ಬಿವಿಜಿ ಇಂಡಿಯಾ ಸುಮಾರು ಸಾವಿರ ಕೋಟಿಗೂ ಅಧಿಕ ಮೌಲ್ಯವನ್ನು ಹೊಂದಿದೆ. ಯಾವುದೇ ಬೆಂಬಲವಿಲ್ಲದೆ ಈ ಸಾಧನೆ ಮಾಡಿದ್ದಾರೆ ಹನುಮಂತ. ಕಠಿಣ ಪರಿಶ್ರಮ ಮತ್ತು ಗುರಿ ಸಾಧಿಸುವ ಛಲವಿದ್ದರೆ ಯಾವ ಸಾಧನೆಯನ್ನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಹನುಮಂತ್ ರಾಮ್ದಾಸ್ ಗಾಯಕ್ವಾಡ್ ಸಾಧನೆ ಅತ್ಯಂತ ದೊಡ್ಡ ಉದಾಹರಣೆ .
-ಎನ್ .ಜಿ.ರಮೇಶ್

LEAVE A REPLY

Please enter your comment!
Please enter your name here