ಬೆಂಗಳೂರು: ಹಿಂದೂಗಳ ಆರಾಧ್ಯ ದೈವ, ರಾಮನ ಬಂಟ ಆಂಜನೇಯನ ಜನ್ಮ ದಿನವನ್ನು ದೇಶಾದ್ಯಂತ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಆದ್ರೆ ದಕ್ಷಿಣ ಭಾರತದಲ್ಲಿ ಹಾಗೂ ಉತ್ತರ ಭಾರತದಲ್ಲಿ ಈ ಹಬ್ಬವನ್ನ ಬೇರೆ ಬೇರೆ ಸಮಯಗಳಲ್ಲಿ ಆಚರಿಸಲಾಗ್ತಿರೋದು ವಿಶೇಷ. ಅಂತೆಯೇ, ಉತ್ತರ ಭಾರತದಲ್ಲಿ ಏಪ್ರಿಲ್ 16 ರಂದು ಆಚರಿಸಿದ್ರೆ, ದಕ್ಷಿಣದಲ್ಲಿ ಡಿಸೆಂಬರ್ನಲ್ಲಿ ಆಚರಿಸಲಾಗುತ್ತದೆ. ಹಾಗಾಗಿ ನಗರದಲ್ಲಿ ಹೆಚ್ಚಿನ ಆಂಜನೇಯ ದೇವಸ್ಥಾನಗಳಲ್ಲಿ ದೈನಂದಿನ ಪೂಜೆಗಳನ್ನ ಬಿಟ್ರೆ ಹನುಮ ಜಯಂತಿ ಅಂತ ಪ್ರತ್ಯೇಕವಾಗಿ ಆಚರಿಸಿಲ್ಲ.
ನಗರದಲ್ಲಿ ಅದ್ದೂರಿಯಾಗಿ ಹನುಮ ಜಯಂತಿ ನಡೆಯದಿದ್ದರೂ ಭಕ್ತರು ಮಾತ್ರ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇನ್ನು, ಪಂಚಾಂಗದ ಪ್ರಕಾರ, ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಆಂಜನೇಯ ಸ್ವಾಮಿ ಹುಟ್ಟಿದ್ದು. ಹಾಗಾಗಿ ಮಂಗಳವಾರ ಮತ್ತು ಶನಿವಾರ ಆಂಜನೇಯನಿಗೆ ಶ್ರೇಷ್ಠ ವಾರಗಳಾಗಿದ್ದು, ಈ ಬಾರಿ ಶನಿವಾರದಂದೇ ಹನುಮ ಜಯಂತಿ ಬಂದಿದ್ದು ವಿಶೇಷವಾಗಿದೆ.
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 16ರಂದು ಹನುಮ ಜಯಂತಿ. ಆದ್ರೆ ಬೆಂಗಳೂರಿನ ಉತ್ತರ ಭಾರತದವರೂ ಇರುವುದ್ರಿಂದ ಅಂತಹವರಿಗಾಗಿ ಕೆಲವು ದೇವಸ್ಥಾನಗಳಲ್ಲಿ ಹನುಮನಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನ ಮಾಡಲಾಯ್ತು.
ವಿವಿಧತೆಯಲ್ಲಿ ಏಕತೆ ಎಂದು ಸಾರುವ ಭಾರತದಲ್ಲಿ ಬಹುತೇಕ ಹಬ್ಬಗಳನ್ನೂ ಒಂದೊಂದು ಕಡೆ ವಿಭಿನ್ನ ರೀತಿಯಲ್ಲಿ ಆಚರಿಸಲಾಗ್ತಿದೆ. ಉತ್ತರ ಭಾರತದಲ್ಲಿ ಒಂದು ದಿನ ಆಚರಿಸಿದೆ. ದಕ್ಷಿಣ ಭಾರತದಲ್ಲಿ ಒಂದು ದಿನ ಆಚರಿಸಲಾಗುತ್ತದೆ. ಹಾಗಾಗಿ ಇದು ಭಾರತದಲ್ಲಿ ಮಾತ್ರ ಕಾಣಸಿಗುವ ವಿಶೇಷತೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.