ಮಂಡ್ಯ : ವೀರ ಕನ್ನಡಿಗ, ಮಂಡ್ಯದ ಹೆಮ್ಮೆಯ ಸುಪುತ್ರ ಗುರು ಅವರ ಅಗಲಿಕೆಯಿಂದ ಇಡೀ ನಾಡು ದುಃಖದ ಮಡುವಿನಲ್ಲಿದೆ. ಪುಲ್ವಾಮಾದ ಆವಂತಿಪೊರಾದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಗುರು ಅವರು ಸೇರಿದಂತೆ 40 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಯೋಧರ ಜೀವ ತೆಗೆದ ಉಗ್ರರನ್ನು ಮತ್ತು ಅವರನ್ನು ಪೋಷಿಸುತ್ತಿರುವ ಪಾಪಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳೋಕೆ ಇಡೀ ದೇಶ ಎದುರು ನೋಡುತ್ತಿದೆ. ಅಂತೆಯೇ ಗುರು ಅವರ ಸ್ನೇಹಿತರೊಬ್ಬರು ಪ್ರತೀಕಾರದ ಪ್ರತಿಜ್ಞೆ ಮಾಡಿದ್ದಾರೆ.
ಗುಡಿಗೆರೆಯ ಗುರು ಅವರ ಮನೆಗೆ ಭೇಟಿ ನೀಡಿದ ಅವರ ಸ್ನೇಹಿತ ಮಲ್ಲೇಶ್, ಗುರು ಅವರ ಭಾವಚಿತ್ರಕ್ಕೆ ಹೂವಿಟ್ಟು ನಮನ ಸಲ್ಲಿಸಿದರು. ಅಗಲಿದ ಸ್ನೇಹಿತನ ನೆನೆದು ಭಾವುಕರಾಗಿ ಕಣ್ಣೀರಟ್ಟರು. ಅಮ್ಮನಿಗೆ ಸಾಂತ್ವನ ಹೇಳಿದರು. ಅಷ್ಟೇ ಅಲ್ಲದೆ ಸ್ನೇಹಿತನ ಸಾವಿನ ಪ್ರತೀಕಾರಕ್ಕಾಗಿ ಅವಕಾಶ ಕೊಟ್ರೆ ನಾನು ಸೈನ್ಯಕ್ಕೆ ಸೇರ್ತೀನಿ ಅಂತ ಪ್ರತಿಜ್ಞೆ ಮಾಡಿದ್ದಾರೆ.