ಚಿಕ್ಕಮಗಳೂರು: ಸದ್ಯ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಎಲೆಕ್ಷನದ್ದೇ ಹವಾ. ಆಕಾಂಕ್ಷಿಗಳು ನಾ ಮುಂದು, ತಾ ಮುಂದು ಅಂತ ರೆಡಿಯಾಗಿದ್ದಾರೆ. ಆದರೆ ಕಾಫಿನಾಡಲ್ಲಿ ಮಾತ್ರ ಸ್ಪರ್ಧೆ ಆಕಾಂಕ್ಷಿಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ನಾನು ಆಕಾಂಕ್ಷಿ ಅಂತ ಉಸಿರೆತ್ತದಂತಾ ಸ್ಥಿತಿ ಮಲೆನಾಡಿನಲ್ಲಿ ನಿರ್ಮಾಣವಾಗಿದೆ. ಮನಸೊಳಗೆ ಸ್ಪರ್ಧಿಸೋ ಆಸೆ ಇದ್ದರೂ, ಹೇಳುವ ಹಾಗೆ ಇಲ್ಲ
ಗ್ರಾ.ಪಂ. ಚುನಾವಣೆಯ ಸಭೆ ಮಾಡಲು ಗ್ರಾಮಕ್ಕೆ ಬಂದ ರಾಜಕಾರಣಿಗಳನ್ನ ತರಾಟೆ ತೆಗೆದುಕೊಂಡ ಜನ. ಚುನಾವಣಾ ಬಹಿಷ್ಕಾರದ ಬ್ಯಾನರ್ ತೆಗೆಯಲು ಬಂದ ಪಿಡಿಓಗಳಿಗೆ ಗ್ರಾಮಸ್ಥರಿಂದ ಕ್ಲಾಸ್. ಸಭೆ ಮೇಲೆ ಸಭೆ, ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ನೋ ಎಲೆಕ್ಷನ್, ಓನ್ಲಿ ಬದುಕು, ಭವಿಷ್ಯವಷ್ಟೇ ಅಂತಿರೋ ಜನ. ರಾಜ್ಯಾದ್ಯಂತ ಹಳ್ಳಿ ಫೈಟ್ ಶುರುವಾಗಿದೆ. ಆದರೆ ಕಾಫಿನಾಡಲ್ಲಿ ಚುನಾವಣೆ ಬಗ್ಗೆ ಮಾತಾಡಂಗಿಲ್ಲ. ಮಾತಾಡಿದರೆ ಅವನ ಕಥೆ ಅಷ್ಟೆ. ಮಲೆನಾಡಿಗರ ಮೇಲೆ ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಪರಿಸರ ಸೂಕ್ಷ್ಮ ಯೋಜನೆಯ ತೂಗುಗತ್ತಿ ತೂಗಾಡ್ತಿದೆ. ಈ ಯೋಜನೆಗಳು ಜಾರಿಯಾದ್ರೆ ನೂರಾರು ಗ್ರಾಮಗಳ ಜನರ ಬದುಕು ಬೀದಿಗೆ ಬೀಳುತ್ತೆ. ತಲೆಮಾರುಗಳಿಂದ ಕಟ್ಟಿಕೊಂಡ ಬದುಕು ಬೀದಿಗೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಈ ಹಿನ್ನೆಲೆ ಕಳೆದೆರಡು ತಿಂಗಳಿಂದ ಚಿಕ್ಕಮಗಳೂರು, ಎನ್.ಆರ್ ಪುರ, ಕೊಪ್ಪ, ಮೂಡಿಗೆರೆ ತಾಲೂಕು ಸೇರಿದಂತೆ ಹಲವೆಡೆ ಪ್ರತಿಭಟನೆ ಶುರುವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವೂ ಕೂಡ ಜನರ ನೆರವಿಗೆ ಬರುವ ಧೈರ್ಯ ಮಾಡಿಲ್ಲ. ಬಣ್ಣದ ಮಾತುಗಳಿಂದ ಜನರಿಗೆ ಯಾಮಾರಿಸೋ ಕೆಲಸ ಆಗ್ತಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನ ಬಹಿಷ್ಕಾರ ಮಾಡಲು ಎಲ್ಲಾ ಕಡೆ ತೀರ್ಮಾನಿಸಲಾಗಿದೆ. ಕೇವಲ ಬಹಿಷ್ಕಾರ ಮಾತ್ರವಲ್ಲ, ಚುನಾವಣೆಯ ಮೊದಲ ಪ್ರಕ್ರಿಯೆ ಆಗಿರೋ ನಾಮಪತ್ರವನ್ನೇ ಯಾರೂ ಕೂಡ ಸಲ್ಲಿಸೋ ಹಾಗಿಲ್ಲ ಅನ್ನೋ ಅಲಿಖಿತ ಫರ್ಮಾನನ್ನ ಜನರೇ ತೆಗೆದುಕೊಂಡಿದ್ದಾರೆ. ಯಾರಾದ್ರೂ ಸ್ಪರ್ಧಿಸೋ ಇಂಗಿತ ವ್ಯಕ್ತಪಡಿಸಿ ನಾಮಪತ್ರ ಸಲ್ಲಿಸಿದ್ರೆ, ಅವರ ಮನೆ ಮುಂದೆ ಚಪ್ಪಲಿ ಹಾರ ಹಾಕಿ ಧರಣಿ ನಡೆಸೋ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಬದುಕೇ ಬೀದಿಗೆ ಬೀಳೋ ಸಂದರ್ಭ ಬಂದಿದೆ. ಮಲೆನಾಡಿಗರ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಲು ಸದ್ದಿಲ್ಲದೇ ಎಲ್ಲಾವೂ ನಡೀತಿದ್ದು, ಈಗಲೂ ನಾವು ಸುಮ್ಮನಿದ್ರೆ ನಮ್ಮ ಉಸಿರನ್ನೇ ನಿಲ್ಲಿಸಿಬಿಡ್ತಾರೆ. ಹೀಗಾಗಿ ಪ್ರತಿಯೊಬ್ಬರು, ಪ್ರತಿ ಹಳ್ಳಿ ಹಳ್ಳಿಯಲ್ಲೂ ಎಚ್ಚೆತ್ತುಕೊಳ್ಳಲೇ ಬೇಕು ಅಂತಾ ಜನರು ತೀರ್ಮಾನಿಸಿದ್ದಾರೆ. ಎಷ್ಟೇ ಹೋರಾಟ ಮಾಡಿದ್ರು ಸ್ಪಂದಿಸದ ರಾಜ್ಯ-ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳಲು ಜನರಿಗೆ ಗ್ರಾಮ ಪಂಚಾಯ್ತಿ ಚುನಾವಣೆ ಪ್ರಬಲ ಅಸ್ತ್ರವಾಗಿದೆ. ಇದೇ ಅಸ್ತ್ರವನ್ನ ಹಿಡಿದುಕೊಂಡು ಇದೀಗ ಎಲ್ಲೆಡೆ ಜನರು ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕಾರ ಮಾಡೋ ತೀರ್ಮಾನ ಮಾಡಿರೋದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಜನ ರೊಚ್ವಿಗೆದ್ದಿದ್ದಾರೆ. ಚುನಾವಣಾ ಬಹಿಷ್ಕಾರದ ಬ್ಯಾನರ್ ಕೀಳಲು ಬಂದ ಪಿಡಿಓಗಳಿಗೆ ಮಂಗಳಾರತಿ ಮಾಡಿದ್ದಾರೆ. ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಕರೆಕೊಟ್ಟಿದ್ದು, ಪಕ್ಷಾತೀತವಾಗಿ ಜನ ಎಲೆಕ್ಷನ್ ಬೈಕಾಟ್ ಗೆ ಸಮ್ಮತಿ ಸೂಚಿಸಿದ್ದಾರೆ. ಬಿಜೆಪಿ ನಾಯಕರೂ ಜಿಲ್ಲೆಯಲ್ಲಿ ಚುನಾವಣೆ ಬಹಿಷ್ಕಾರ ಮಾಡಲು ಕರೆ ಕೊಟ್ಟಿರೋದು ವಿಶೇಷ. ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದರೂ ಕೂಡ, ಜನ ಒಪ್ಪಿಗೆ ನೀಡದ ಹಿನ್ನೆಲೆ ಅದೆಷ್ಟೋ ಮಂದಿಗೆ ಸ್ಪರ್ಧಿಸೋ ಇಂಗಿತವಿದ್ದರೂ ವ್ಯಕ್ತಪಡಿಸಲು ಆಗುತ್ತಿಲ್ಲ.