ಕೊಪ್ಪಳ: ಗಂಗಾವತಿಯ ಆನೆಗೊಂದಿ ಅಂಜನಾದ್ರಿ ಬೆಟ್ಟಕ್ಕೆ ಇಂದು ರಾಜ್ಯಪಾಲ ವಾಜುಭಾಯಿ ವಾಲ ಭೇಟಿ ನೀಡಿದ್ದಾರೆ. ಆನೆಗೊಂದಿ ಬಯಲು ಪ್ರದೇಶದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿಳಿದ ರಾಜ್ಯಪಾಲರು, ಅಂಜನಾದ್ರಿ ಬೆಟ್ಟದ ಮೆಟ್ಟಿಲು ಹತ್ತದೇ ಮುಖದ್ವಾರದಲ್ಲಿಯೇ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ರಾಮ ಭಕ್ತರಿರುವಷ್ಟೇ ಹನುಮನಿಗೆ ಭಕ್ತರಿದ್ದಾರೆ. ಕರ್ಮ ಮಾಡು ಅದರಿಂದ ಫಲ ನಿರೀಕ್ಷೆ ಮಾಡಬೇಡಿ ಎಂಬಂತೆ ಹನುಮ ಎಂದಿಗೂ ರಾಮನಿಂದ ಯಾವುದೇ ಫಲ ನಿರೀಕ್ಷೆ ಮಾಡಲಿಲ್ಲ.ಇದು ಹನುಮ ರಾಮನ ಮೇಲೆ ಇಟ್ಟಿದ್ದ ಭಕ್ತಿ. ಆದ್ದರಿಂದ ಹನುಮನಿಗೆ ಅಷ್ಟು ಭಕ್ತರಿದ್ದಾರೆ. ಈ ಭಾಗದಲ್ಲಿ ಅಂಜನಾದ್ರಿ ಬೆಟ್ಟ ವಿಶ್ವಕ್ಕೆ ಮಾದರಿಯಾಗಿದ್ದು, ಭಕ್ತರು ಮೂಲೆ ಮೂಲೆಯಿಂದ ಆಗಮಿಸುತ್ತಾರೆ ಎಂದರು.
ಇಂದು ಹನುಮನ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸಿರುವೆ. ಇಲ್ಲಿ ಶಿಲೆಗಳನ್ನು ಪೂಜಿಸಿ ಅದನ್ನು ತೆಗೆದುಕೊಂಡು ಹೋಗುತ್ತೇವೆ. ಗುಜರಾತಿನ ಆನಂದ ಜಿಲ್ಲೆಯ ಲಂಬಾವೇಲಾ ಸ್ವಗ್ರಾಮದಲ್ಲಿ 500 ವರ್ಷದ ಹನುಮಂದಿರದ ಜೀರ್ಣೋದ್ಧಾರಕ್ಕಾಗಿ ಇಲ್ಲಿನ ಶಿಲೆಯನ್ನು ಕೊಂಡೊಯ್ಯಲು ಬಂದಿರುವೆ ಎಂದು ತಿಳಿಸಿದರು.
ನಮ್ಮ ಧರ್ಮವೇ ನಮ್ಮ ಕರ್ಮ. ಇದಕ್ಕೆ ಹುನುಮನೇ ಪ್ರೇರಣೆ. ಹನುಮನ ಈ ಜನ್ಮ ಸ್ಥಳ ರಾಮನ ಮಂದಿರಕ್ಕೆ ಸಮಾನ. ಅಂಜನಾದ್ರಿ ಬೆಟ್ಟ ಅತ್ಯಂತ ಉನ್ನತ ಮಟ್ಟದಲ್ಲಿ ಅಭಿವೃದ್ಧಿಯಾಗಲಿದೆ. ಭಾರತದಲ್ಲಿ ಅಷ್ಟೇ ಅಲ್ಲ, ಇಡೀ ವಿಶ್ವದ ಭಕ್ತರು ತಿರುಗಿ ನೋಡಲಿದ್ದಾರೆ. ಇಲ್ಲಿ ಕೆಲವು ನಿರ್ಬಂಧಗಳಿವೆ, ಅವನ್ನ ಸರ್ಕಾರ ಮುಖಾಂತರ ತೆಗೆಯಲಾಗುವುದು. ಭವಿಷ್ಯದಲ್ಲಿ ಈ ಸ್ಥಾನ ಉತ್ತುಂಗ ಮಟ್ಟದಲ್ಲಿ ಅಭಿವೃದ್ಧಿಯಾಗಲಿದ್ದು, ಸರ್ಕಾರ ಯಾವುದೇ ಕೆಲಸ ಮಾಡಿದರು ಅದಕ್ಕೆ ಸಮಿತಿ ರಚನೆ ಮಾಡುತ್ತೆ. ಇದರಿಂದ ಏನು ಅಗತ್ಯವಿದೆ ಎಲ್ಲವನ್ನು ಪೂರೈಸುತ್ತದೆ ಎಂದರು. ಈ ವೇಳೆ ಹಾಜರಿದ್ದ ಸಂಸದ ಕರಡಿ ಸಂಗಣ್ಣ ಹಾಗೂ ಶಾಸಕ ಪರಣ್ಣ ಮುನವಳ್ಳಿ ಅವರು ರಾಜ್ಯಪಾಲರಿಗೆ ಹನುಮನ ಮೂರ್ತಿಕೊಟ್ಟು ಸನ್ಮಾನಿಸಿದರು.
– ಶುಕ್ರಾಜ ಕುಮಾರ್ ಕೊಪ್ಪಳ