ಹುಬ್ಬಳ್ಳಿ: ಪ್ರೇಮ ವೈಫಲ್ಯದಿಂದ ಮನ ನೊಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ.
ಮುಸ್ಕಾನ್ ಎಂಬ ಯುವತಿಯೇ ಬಣ್ಣಕ್ಕೆ ಸೇರ್ಪಡೆ ಮಾಡುವ ಟಿನ್ನರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಯುವತಿಯನ್ನು ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಸ್ಕಾನ್ ಕೆಲವು ವರ್ಷಗಳಿಂದ ತಮ್ಮದೇ ಓಣಿಯ ಮುಜಮ್ಮಿಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಅದರೆ ಇಬ್ಬರು ಪ್ರೇಮಿಗಳ ನಡುವೇ ವೈಮನಸ್ಸು ಬಂದು ದೂರವಾಗಿದ್ದರು. ಆದರೆ ಪ್ರೇಮಿಗಳ ಮದುವೆ ಮಾಡಿಸುವುದಾಗಿ ಮಧ್ಯೆ ಪ್ರವೇಶ ಮಾಡಿದ್ದ ಇಮಾಮ್ ತೊರಗಲ್ ಎಂಬ ವ್ಯಕ್ತಿ ಮದುವೆ ಮಾಡಿಸದೇ ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇವರಿಬ್ಬರಿಂದಲೂ ದೈಹಿಕ ಮತ್ತು ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿ ಪ್ರೀಯಕರ ಮುಜಮ್ಮಿಲ್ ಹಾಗೂ ಇಮಾಮ್ ತೊರಗಲ್ ವಿರುದ್ಧ ದೂರು ನೀಡಲು ಮುಂದಾಗಿದ್ದಾಳೆ.