ಚಿಕ್ಕಮಗಳೂರು : ಶುಕ್ರವಾರ ಸಂಭ್ರಮದಿಂದ ಬರಮಾಡಿಕೊಂಡಿದ್ದ ಗೌರಿಯನ್ನು ಇಂದು ಹೆಂಗಳೆಯರು ಕಳಿಸಿಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯಲ್ಲಿ ಗೌರಿಗೆ ಹೇಮಾವತಿ ನದಿ ತೀರದಲ್ಲಿ ಪೂಜೆ ಮಾಡಲಾಯಿತು. ಹೇಮಾವತಿ ತೀರದಲ್ಲಿ ಸೇರಿದ ಹತ್ತಾರು ಮಹಿಳೆಯರು ಮಂಗಳ ಹಾಡಿ ಗೌರಮ್ಮನನ್ನ ಭಾರವಾದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ತವರು ಮನೆಗೆ ಆಗಮಿಸಿದ ಮಹಿಳೆಯರು ಗೌರಿ ಪೂಜೆಯಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು. ಕಳೆದ ಕೆಲವು ದಿನಗಳ ಹಿಂದೆ ಉಕ್ಕಿ ಹರಿದಿದ್ದ ಹೇಮಾವತಿ, ಸದ್ಯ ಶಾಂತಳಾಗಿದ್ದು, ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ವಾರದ ಹಿಂದೆ ಹೇಮಾವತಿ ನದಿ ನೀರು ಉಕ್ಕಿ ಹರಿದಿದ್ದರಿಂದ ಗದ್ದೆಗಳು ಜಲಾವೃತಗೊಂಡಿದ್ದವು. ಸದ್ಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಕಡಿಮೆ ಯಾಗಿರುವುದರಿಂದ ನದಿ ನೀರಿನ ಪ್ರಮಾಣವು ಇಳಿಕೆಯಾಗಿದೆ. ನದಿ ನೀರಿನ ಮಟ್ಟ ತಗ್ಗಿದ್ದರಿಂದ ಮಹಿಳೆಯರು ಹೇಮಾವತಿ ನದಿಗೆ ಇಳಿದು ಗೌರಿಯನ್ನು ಕಳುಹಿಸಿಕೊಟ್ಟರು. ಒಂದು ವಾರದ ಹಿಂದೆಯಷ್ಟೇ ಪ್ರವಾಹದ ಭೀತಿ ಹುಟ್ಟಿಸಿದ ಹೇಮೆಯಲ್ಲಿ ಗೌರಿ ಪಯಣಿಸೊದನ್ನ ಕಂಡು ಮಹಿಳೆಯರು ಖುಷಿಪಟ್ಟರು.
-ಸಚಿನ್ ಶೆಟ್ಟಿ