Monday, January 17, 2022
Powertv Logo
HomePower Specialಸಮಾಜಮುಖಿ ಕಾರ್ಯಗಳಿಗೆ 'ಗೌತಮ'ನಾದ ಗಂಭೀರ್

ಸಮಾಜಮುಖಿ ಕಾರ್ಯಗಳಿಗೆ ‘ಗೌತಮ’ನಾದ ಗಂಭೀರ್

ಇವರು ಟೀಮ್ಇಂಡಿಯಾದ ಆರಂಭಿಕ ಆಟಗಾರನಾಗಿ, ಹಲವು ಪಂದ್ಯಗಳನ್ನ ಗೆಲ್ಲಿಸಿ ಕೊಟ್ಟವರು. ತಮ್ಮ ಅದ್ಭುತ ಬ್ಯಾಟಿಂಗ್ ಖದರ್​ನಿಂದ ವಿಶ್ವ ಕ್ರಿಕೆಟ್​ನ ಸಾಮ್ರಾಟನಾಗಿ, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಆಟಗಾರ. ಸದ್ಯ ಈ ಸ್ಟಾರ್ ಪ್ಲೇಯರ್ ಕ್ರಿಕೆಟ್​ನ ಹೊರತಾಗಿ ಸಾಮಾಜಿಕ ಕಾರ್ಯಗಳ ಮೂಲಕ ದೇಶದ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಆಷ್ಟಕ್ಕೂ ಆ ಆಟಗಾರ ಯಾರು? ಅವರು ಮಾಡಿರುವ ಸಮಾಜಮುಖಿ ಕಾರ್ಯಗಳೇನು ಅನ್ನೋದರ ಬಗ್ಗೆ ಡೀಟೆಲ್ಸ್ ಇಲ್ಲಿದೆ.
ಅದೊಂದು ಕಾಲ, ಟೀಮ್ಇಂಡಿಯಾದ ಆರಂಭಿಕನಾಗಿ ಈ ಆಟಗಾರ ಕಣಕ್ಕಿಳಿದರೆ ಎದುರಾಳಿ ಬೌಲರ್ ಗಳಿಗೆ ನಡುಕ ಶರುವಾಗುತ್ತಿತ್ತು. ಭಾರತೀಯ ಅಭಿಮಾನಿಗಳ ಮೊಗದಲ್ಲಿ ಆತ್ವವಿಶ್ವಾಸ ಹೆಚ್ಚುತ್ತಿತ್ತು. ಚೆಂಡು ಇರುವುದೇ ದಂಡಿಸಲು ಎಂಬ ಜಾತಿ ಈ ಆಟಗಾರನದ್ದಾಗಿತ್ತು. ಈ ಆಟಗಾರ ಬೇರೆ ಯಾರೂ ಅಲ್ಲ ಟೀಮ್ಇಂಡಿಯಾ ಕಂಡ ಬೆಸ್ಟ್ ಓಪನರ್, ಎಡಗೈ ಬ್ಯಾಟ್ಸ್​ಮನ್ ಗೌತಮ್ ಗಂಭೀರ್.

ಇವರು ಟೀಮ್ಇಂಡಿಯಾ ಕಂಡ ಮೋಸ್ಟ್ ಸಕ್ಸಸ್ ಫುಲ್ ಪ್ಲೇಯರ್. ತಮ್ಮ ಅಗ್ರೇಸ್ಸಿವ್ ಬ್ಯಾಟಿಂಗ್ ಶೈಲಿಯಿಂದಲೇ ಅಭಿಮಾನಿಗಳಿಗೆ ಹತ್ತಿರವಾದ ಗೌತಿ ಟೀಮ್ಇಂಡಿಯಾದ 2011ರ ವರ್ಲ್ಡ್ ಕಪ್ ಗೆಲುವಿನ ರೂವಾರಿಯೂ ಹೌದು. 2011ರ ವಿಶ್ವಕಪ್ ಫೈನಲ್ ನಲ್ಲಿ ಕ್ರೀಸ್ ಕಚ್ಚಿ ನಿಂತಿದ್ದ ಗೌತಿ ಸಿಂಹಳೀಯ ಬೌಲರ್​ಗಳನ್ನು ಇನ್ನಿಲ್ಲದಂತೆ ಕಾಡಿದ್ರು. 127 ಬಾಲ್ ಗಳನ್ನು ಎದುರಿಸಿ 97 ರನ್ ಸಿಡಿಸಿ ಕೇವಲ ಮೂರೇ ಮೂರು ರನ್​ಗಳಿಂದ ಶತಕ ವಂಚಿತರಾದ ಗಂಭೀರ್ ಟೀಮ್ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು..!
ಟೀಮ್ಇಂಡಿಯಾ ಮಾತ್ರವಲ್ಲ.. ಐಪಿಎಲ್​ ನಲ್ಲೂ ಗಂಭೀರ್ ಮೋಡಿ ಮಾಡಿದ್ದಾರೆ. 2012 ಮತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಕೀರ್ತಿ ಗಂಭೀರ್​ಗೇ ಸಲ್ಲುತ್ತೆ. ಆದ್ರೆ, ಹಲವು ವರ್ಷಗಳ ಕಾಲ ಭಾರತೀಯ ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ನೀಡಿದ ಗೌತಿ ಇಂದು (ಮಂಗಳವಾರ) (ಡಿಸೆಂಬರ್ 4) ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ಆದ್ರೆ, ತಮ್ಮ ಸಮಾಜಮುಖಿ ಕಾರ್ಯಗಳಿಂದಲೂ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರೋ ಗೌತಿ ಬಗ್ಗೆ ಹೇಳಲೇ ಬೇಕು.

ಕ್ರಿಕೆಟ್​​ ಗೆ ಗುಡ್​​ ಬೈ ಹೇಳಿದ ವರ್ಲ್ಡ್​​ಕಪ್ ಹೀರೋ ಗಂಭೀರ್..!

ಗೌತಮ್ ಗಂಭೀರ್ ತಮ್ಮದೇ ಹೆಸರಿನ ಫೌಂಡೇಶನ್ ಹುಟ್ಟುಹಾಕಿದ್ದಾರೆ. ಈ ಮೂಲಕ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನ ಗೌತಿ ಮಾಡ್ತಿದ್ದಾರೆ. ಗೌತಮ್ ಗಂಭೀರ್ ಫೌಂಡೇಶನ್ನ ವತಿಯಿಂದ ಹಲವರ ಪಾಲಿಗೆ ಗಂಭೀರ್ ಆಶಾಕಿರಣವಾಗಿದ್ದಾರೆ.
ಕಳೆದ ವರ್ಷ ಛತ್ತೀಸ್​ಘಡದ ಸುಕ್ಮಾದಲ್ಲಿ ನಡೆದಿದ್ದ ನಕ್ಸಲ್ ದಾಳಿಯಲ್ಲಿ ಭಾರತೀಯ ಸೇನೆಯ ಹಲವು ಯೋಧರು ಹುತಾತ್ಮರಾಗಿದ್ದರು. ಈ ದಾಳಿಯನ್ನ ಖಂಡಿಸಿದ್ದ ಗಂಭೀರ್ ಯೋಧರ ಕುಟುಂಬದ ನೆರವಿಗೆ ಧಾವಿಸಿದ್ರು. ಜೊತೆಗೆ ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸೋದಾಗಿ ಭರವಸೆ ನೀಡಿದ್ರು. ಮಾತಿಗೆ ತಪ್ಪದ ಗೌತಿ ಸದ್ಯ ತಮ್ಮ ಫೌಂಡೇಶನ್ನ ಮೂಲಕ ಹುತಾತ್ಮ ಯೋಧರ ಮಕ್ಕಳ ಶಿಕ್ಷಣವನ್ನ ತಮ್ಮ ಸಂಸ್ಥೆಯಿಂದ ನೋಡಿಕೊಳ್ಳುತ್ತಿದ್ದಾರೆ.
ಇವರಿಗೆ ದೇಶದ ಮೇಲೆ, ದೇಶದ ಗಡಿಯಲ್ಲಿ ನಿಂತು ಕಣ್ಣ ರೆಪ್ಪೆಯಂತೆ ಕಾಪಾಡುತ್ತಿರೋ ಯೋಧರ ಮೇಲೆ ಅಪಾರವಾದ ಪ್ರೀತಿ, ಗೌರವ ಜಾಸ್ತಿ ಎನ್ನಬಹುದು. ಯೋಧರಿಗೆ ನೋವಾದ್ರೆ ಈ ಆಟಗಾರನ ಕೈಯಲ್ಲಿ ತಡೆದುಕೊಳ್ಳುವ ಶಕ್ತಿ ಇಲ್ಲ. ಅವರಿಗಾಗಿ ಹತ್ತಾರು ಬಾರಿ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲಾ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಒಂದು ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಹುತಾತ್ಮ ಯೋಧರಿಗೆ ಅರ್ಪಿಸಿದ್ರು.
ಇಷ್ಟೇ ಅಲ್ಲ.. ತಮ್ಮ ಫೌಂಡೇಶನ್ನ ವತಿಯಿಂದ ಗಂಭೀರ್ ದೆಹಲಿಯಲ್ಲಿ ಕಮ್ಯೂನಿಟಿ ಕಿಚನ್ ಆರಂಭಿಸಿದ್ದಾರೆ. ಇದರ ಮೂಲಕ ಮಧ್ಯಾಹ್ನದ ವೇಳೆ ಉಚಿತವಾಗಿ ಬಡವರಿಗೆ, ನಿರ್ಗತಿಕರಿಗೆ, ಸ್ಲಂ ನಿವಾಸಿಗಳಿಗೆ ಬಿಸಿಯೂಟ ನೀಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ಫೌಂಡೇಷನ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಗಂಭೀರ್ ತೊಡಗಿಕೊಂಡಿದ್ದಾರೆ.
ಮೈದಾನದಲ್ಲಿ ತಮ್ಮ ಅಗ್ರೇಸ್ಸಿವ್ ಆ್ಯಟಿಟ್ಯೂಡ್ನಿಂದ ಎದುರಾಳಿ ಬೌಲರ್​ಗಳಲ್ಲಿ ನಡುಕ ಹುಟ್ಟಿಸಿ ಬೌಂಡರಿ, ಸಿಕ್ಸರ್ ಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಗಂಭೀರ್ ಇದೀಗ ಸಾಮಾಜಿಕ ಕಳಕಳಿಯ ಮೂಲಕ ಆ ಪ್ರೀತಿಯನ್ನ ಮತ್ತಷ್ಟು ಇಮ್ಮಡಿಗೊಳಿಸಿಕೊಂಡಿದ್ದಾರೆ. ಕ್ರಿಕೆಟ್ ಹೊರತಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರೋ ಗೌತಮ್ ಗಂಭೀರ್ ಅವರಿಗೆ ಶುಭವಾಗಲಿ.

-ಶಿವಪ್ರಸಾದ್. ಸ್ಪೋರ್ಟ್ಸ್ ಬ್ಯೂರೋ, ಪವರ್ ಟಿವಿ

LEAVE A REPLY

Please enter your comment!
Please enter your name here

- Advertisment -

Most Popular

Recent Comments