ಆತ ದೇಶ ಕಾಯೋ ಯೋಧ. ಮದುವೆ ರಜೆಗೆಂದು ತನ್ನೂರಿಗೆ ಮರಳಿದ್ದಾನೆ. ಆದ್ರೆ ಕೊರೋನಾ ದೆಸೆಯಿಂದ ಕ್ವಾರಂಟೈನ್ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ದೇಶ ರಕ್ಷಣೆ ಜವಾಬ್ದಾರಿ ಹೊತ್ತಿರೋ ಯೋಧ ತನ್ನ ಕುಟುಂಬ ಹಾಗೂ ಗ್ರಾಮದ ರಕ್ಷಣೆಯ ಕಾಳಜಿಯನ್ನೂ ತೆಗೆದುಕೊಂಡಿದ್ದಾನೆ. ಏನು ಈ ಯೋಧನ ಕಾಳಜಿ ಅಂತೀರಾ? ಮುಂದೆ ಓದಿ…
ರೈಫಲ್ ಹಿಡಿದ ಯೋಧ ಹೊಲದಲ್ಲಿ ಕಳೆ ಕೀಳ್ತಿದ್ದಾರೆ. ಜಮ್ಮು ಕಾಶ್ಮಿರದಿಂದ ಬಂದು ಜಮೀನಿನಲ್ಲಿ ವಾಸವಾಗಿದ್ದಾರೆ! ಸೈನ್ಯದಿಂದ ಮದುವೆ ರಜೆ ಮೇಲೆ ತನ್ನೂರಿಗೆ ಬಂದಿರೋ ಸೈನಿಕ ಕೊರೋನಾ ಹರಡಬಹುದು ಅನ್ನೋ ಭೀತಿಯಿಂದ ಗ್ರಾಮದ ಒಳಗೆ ಬಾರದೇ ಇರಲು ನಿರ್ಧಿಸಿದ್ದಾರೆ..!
ಅವರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರು ಗ್ರಾಮದ ಸೋಮೇಶ್ ಪೂಜಾರ. ಯೋಧರಾಗಿರೋ ಅವರು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಜಮ್ಮು-ಕಾಶ್ಮೀರದಿಂದ ಮದುವೆ ರಜೆಗೆಂದು ಸ್ವಗ್ರಾಮಕ್ಕೆ ಬಂದಿದ್ದಾರೆ.ವಿಮಾನದ ಮೂಲಕ ಬಂದಿರೋ ಅವರಿಗೆ ಕೊವಿಡ್-19 ಟೆಸ್ಟ್ ಮಾಡಲಾಗಿದ್ದು, ಹೋಂ ಕ್ವಾರಂಟೈನ್ ಆಗುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆದರೆ ಯೋಧ ಸೋಮೇಶ್ ತನ್ನಿಂದಾಗಿ ತನ್ನ ತನ್ನ ಅವಿಭಕ್ತ ಕುಟುಂಬ ಹಾಗೂ ಗ್ರಾಮಕ್ಕೆ ಯಾವುದೇ ತೊಂದರೆ ಆಗಬಾರದು ಅಂತ ಗ್ರಾಮದಿಂದ 2 ಕಿಲೋಮೀಟರ್ ದೂರದ ತಮ್ಮ ಹೊಲದಲ್ಲಿರೋ ಇಂಜಿನ್ ಮನೆಯಲ್ಲಿ ವಾಸವಾಗಿದ್ದಾರೆ. ವೃದ್ಧ ತಂದೆ ತಾಯಿ ಸೇರಿದಂತೆ ಸಹೋದರರ ಕುಟುಂಬ ಹಾಗೂ ಚಿಕ್ಕಮಕ್ಕಳನ್ನ ಒಳಗೊಂಡು ಸುಮಾರು 20 ಸದಸ್ಯರು ಸೋಮೇಶ್ ಕುಟುಂಬದಲ್ಲಿದ್ದಾರೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಅನ್ನೋದು ಯೋಧ ಸೋಮೇಶ್ ಮಾತು.
ಆಗಸ್ಟ್ 13 ರಂದು ಸೋಮೇಶ್ ಮದುವೆ ನಿಗದಿಯಾಗಿದೆ. ಮದುವೆಗೆಂದು 47 ದಿನಗಳು ರಜೆ ಇದ್ದು, ಈಗಾಗಲೇ 07 ದಿನಗಳು ಕಳೆದಿವೆ. ಕೋವಿಡ್ ಟೆಸ್ಟ್ ವರದಿ ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಬರಲಿ ಇನ್ನೂ 07 ದಿನ ಇಲ್ಲಿಯೇ ಇದ್ದು ಕ್ವಾರಂಟೈನ್ ಪೂರ್ಣ ಮಾಡುತ್ತೇನೆ ಎಂದಿದ್ದಾರೆ. ಅಲ್ಲಿವರೆಗೂ ಯಾವುದೇ ಮದುವೆ ಕಾರ್ಯ ಕೈಗೊಳ್ಳಲ್ಲ ಅಂತ ಹೇಳಿದ್ದಾರೆ.
ಪ್ರತಿದಿನ ಮನೆಯಿಂದ ತನ್ನ ಸಹೋದರನಿಂದ ಊಟ ತರಿಸಿಕೊಳ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋ ಉದ್ದೇಶದಿಂದ ದೂರದಿಂದಲೇ ತನ್ನ ತಟ್ಟೆಯಲ್ಲಿ ಊಟ ಹಾಕಿಸಿಕೊಳ್ಳುತ್ತಾರೆ.
ಜಮ್ಮು ಕಾಶ್ಮೀರದ 17-ಮದ್ರಾಸ್ ಬಟಾಲಿಯನ್ ಪಡೆಯಲ್ಲಿರೋ ಸೋಮೇಶ್ ಪಾಕಿಸ್ತಾನದ ಗಡಿ ಮಾಲಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಮ್ಮುವಿನಿಂದ ಬೆಂಗಳೂರವರೆಗೂ ವಿಮಾನದ ಮೂಲಕ ಆಗಮಿಸಿ ಅಲ್ಲಿಂದ ಸಹೋದರನ ಮೂಲಕ ಬಾಡಿಗೆ ಕಾರಲ್ಲಿ ಬಂದು, ಗ್ರಾಮಕ್ಕೆ ಎಂಟ್ರಿ ಕೊಡದೇ ನೇರವಾಗಿ ಜಮೀನಿಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ.
ಕಳೆದ ಏಳು ದಿನಗಳಿಂದ ತನ್ನಷ್ಟಕ್ಕೆ ತಾನೇ ದಿಗ್ಭಂದನ ಹಾಕಿಕೊಂಡಿರೋ ಸೋಮೇಶ್ 14 ದಿನಗಳ ಕ್ವಾರಂಟೈನ್ ಸಮಯ ಮುಗಿದ ಮೇಲೆ ಕುಟುಂಬ ಭೇಟಿ ಮಾಡಲಿದ್ದಾರೆ. ಆನಂತರ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡೆ ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.
ಸದ್ಯ ಕೋವಿಡ್-19 ಟೆಸ್ಟ್ ವರದಿಗಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಾಯುತ್ತಿದ್ದು, ಸೋಮೇಶ್ ಮದುವೆ ಸಂಭ್ರಮಕ್ಕೆ ಹಾತೊರೆಯಿತ್ತಿದ್ದಾರೆ.ಈಗಾಗಲೇ ಜಿಲ್ಲೆಯಲ್ಲಿ ಅಂತೂರ ಬೆಂತೂರ ಗ್ರಾಮದ ಯೋಧರೊಬ್ಬರು ಸಹ ಇದೇ ರೀತಿ ಹೊಲದಲ್ಲಿ ಕ್ವಾರಂಟೈನ್ ಆಗಿ ಗ್ರಾಮದ ರಕ್ಷಣೆಗೆ ಮುಂದಾಗಿದ್ದರು. ಇದೀಗ ಇದೇ ಜಿಲ್ಲೆಯ ಮತ್ತೊಬ್ಬ ಯೋಧ ಅಂತಹದೇ ನಿರ್ಣಯ ತೆಗೆದುಕೊಂಡಿರೋದು ಜಿಲ್ಲೆಯ ಜನತೆ ಹೆಮ್ಮೆ ಪಡುವ ವಿಷಯವಾಗಿದೆ.
– ಮಹಾಲಿಂಗೇಶ್ ಹಿರೇಮಠ, ಗದಗ