ಮೈಸೂರು: ಮಹಾನಗರ ಪಾಲಿಕೆ ಮಾಡಿದ ಎಡವಟ್ಟಿಗೆ ಭಿಕ್ಷುಕರ ಪುನರ್ವಸತಿ ಕೇಂದ್ರದ ಅಧಿಕಾರಿಗಳು ತಮ್ಮ ಪಾಲಿಗೆ ಬರಬೇಕಾದ ಹಣಕ್ಕಾಗಿ ಪರಿತಪಿಸುವಂತಾಗಿದೆ. ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ತಲುಪಬೇಕಾದ ಕೋಟ್ಯಾಂತರ ಸೆಸ್(CESS) ಬಾಕಿ ಉಳಿಸಿಕೊಂಡ ಪಾಲಿಕೆ ಮಹಾ ಎಡವಟ್ಟು ಮಾಡಿದೆ.
13 ವರ್ಷಗಳಿಂದ 12 ಕೋಟಿ 30 ಲಕ್ಷ ಸಂದಾಯವಾಗಬೇಕಿದ್ದ ಭಿಕ್ಷುಕರ ಕರ ಬಾಕಿ ಉಳಿಸಿಕೊಂಡಿದೆ.
ಕಳೆದ 12-13 ವರ್ಷಗಳಿಂದ ಅಲೆದಾಡಿದ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಬಸವಳಿದಿದ್ದಾರೆ.
ಭಿಕ್ಷಾಟನಾ ನಿಷೇಧ ಅಧಿನಿಯಮಗಳ ಅನ್ವಯ ವಸೂಲಿ ಮಾಡುವ ಸೆಸ್ ಇದಾಗಿದೆ. ಭೂಮಿ ಹಾಗೂ ಕಟ್ಟಡಗಳ ಮೇಲೆ ವಿಧಿಸಲಾಗುವ ಆಸ್ತಿ ತೆರಿಗೆ ಮೇಲೆ ಶೇಕಡಾ 3 ರಷ್ಟು ಭಿಕ್ಷುಕರ ತೆರಿಗೆ ಸಂಗ್ರಹಿಸಲಾಗುತ್ತದೆ. ಪ್ರತಿ ವರ್ಷ ಪಸಲಿಕೆ ಸುಮಾರು 2 ಕೋಟಿ ಸೆಸ್ ಸಂಗ್ರಹಿಸುತ್ತದೆ. ಕೇಂದ್ರ ಪರಿಹಾರ ಸಮಿತಿ ಮೂಲಕ ತೆರಿಗೆ ಪುನರ್ವಸತಿ ಕೇಂದ್ರಗಳಿಗೆ ಪಾವತಿಸುವ ವ್ಯವಸ್ಥೆ ಇದೆ.
1997-98 ರಿಂದ ಸಂಗ್ರಹಿಸಲಾದ ತೆರಿಗೆಯನ್ನ ಪಾವತಿಸದೆ ಪಾಲಿಕೆ ಬಾಕಿ ಉಳಿಸಿಕೊಂಡಿದೆ. ಸುಮಾರು 250 ಭಿಕ್ಷುಕರು ಪುನರ್ವಸತಿ ಕೇಂದ್ರ ಆಶ್ರಯಿಸಿದ್ದಾರೆ. ಪಾಲಿಕೆ ಸಂಗ್ರಹಿಸಿರುವ ಹಣವೇ ನಿರ್ವಹಣೆಗೆ ಮೂಲ ಆದಾಯ.
ಮೈಸೂರಿನ ಜ್ಯೋತಿನಗರದಲ್ಲಿದೆ ಪುನರ್ವಸತಿ ಕೇಂದ್ರ. 13 ವರ್ಷಗಳಲ್ಲಿ ಸಂಗ್ರಹವಾದ ಮೊತ್ತ ಅಂದಾಜು 14 ಕೋಟಿ ಇದೆ. ಇದುವರೆಗೆ ಪಾಲಿಕೆ ಪಾವತಿಸಿರುವುದು ಕೇವಲ 50 ರಿಂದ 60 ಲಕ್ಷ ಮಾತ್ರ. ಇತರ ಉದ್ದೇಶಗಳಿಗೆ ಭಿಕ್ಷುಕರ ಕರ ಬಳಸಿಕೊಂಡಿರುವ ಪಾಲಿಕೆ ಎಡವಟ್ಟು ಮಾಡಿದೆ. ಲೋಕಾಯುಕ್ತದಿಂದ ಸೆಸ್ ಪಾವತಿಸುವಂತೆ ಆದೇಶ ಬಂದರೂ ಲೆಕ್ಕಿಸದ ಪಾಲಿಕೆ ಅಧಿಕಾರಿಗಳು ಜಡ್ಡು ಹಿಡಿದು ಕುಳಿತಿದ್ದಾರೆ. ಶೀಘ್ರದಲ್ಲೇ ಕರ ಪಾವತಿಸುವುದಾಗಿ ಆಯುಕ್ತ ಡಾ.ಗುರುದತ್ ಹೆಗ್ಡೆ ಭರವಸೆ ಕೊಟ್ಟಿದ್ದಾರೆ. ಇನ್ಮುಂದೆ ಇಂತಹ ಅಚಾತುರ್ಯ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದಿದ್ದಾರೆ.