ಫಿಶ್​ ಮಾಫಿಯಾ: ಸ್ಥಳೀಯ ಮೀನುಗಾರರ ಹೊಟ್ಟೆಗೆ ತಣ್ಣೀರ ಬಟ್ಟೆ

0
349

ಕೊಪ್ಪಳ: ಮರಳು ಮಾಫಿಯಾ, ಗಣಿ ಮಾಫಿಯಾ ಮತ್ತು ಭೂ ಮಾಫಿಯಾದಿಂದ ರಾಜ್ಯದ ಸಂಪತ್ತನ್ನು ಲೂಟಿ ಹೊಡಿಯೋ ಬಗ್ಗೆ ವರದಿಗಳಾಗುತ್ತಿರುತ್ತದೆ. ಆದರೆ ಇಲ್ಲೊಂದು ಕಡೆ ಫಿಶ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ. ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯದ ಹಿನ್ನೀರಿನಲ್ಲಿ ಫಿಶ್ ಮಾಫಿಯಾ ನಡೆಯುತ್ತಿದೆ. ಜಲಾಶಯದಲ್ಲಿರುವ ಮೀನುಗಳನ್ನು ದೋಚಿ, ಸ್ಥಳೀಯ ಮೀನುಗಾರರಿಗೆ ಮೀನಿಲ್ಲದಂತೆ ಮಾಡಲಾಗ್ತಿದೆ. ಇದರಿಂದ ಸ್ಥಳೀಯ ಮೀನುಗಾರರ ಹೊಟ್ಟೆಗೆ ತಣ್ಣೀರ ಬಟ್ಟೆ ಕಟ್ಟುವಂತಾಗಿದೆ.

ಪ್ರತಿ ವರ್ಷ ಜಲಾಶಯ ಹಿನ್ನೀರಿನ ಭಾಗದ ಪ್ರದೇಶವನ್ನ ಮೀನುಗಾರಿಕೆಗಾಗಿ ಟೆಂಡರ್ ನೀಡಲಾಗುತ್ತೆ.  ಈ ಬಾರಿಯೂ  ಗದಗ ಜಿಲ್ಲೆಯ ಕೊರ್ಲಹಳ್ಳಿ ಮೀನು ಸಹಕಾರ ಸಂಘಕ್ಕೆ 1 ಕೋಟಿ 44 ಲಕ್ಷ ರೂಪಾಯಿಗೆ ಟೆಂಡರ್ ನೀಡಲಾಗಿದೆ. ಆದ್ರೆ,  ಮೀನುಗಾರರ ಸಹಕಾರ ಸಂಘ, ತಮ್ಮ ಮೀನುಗಾರರಿಗೆ ಮೀನು ಹಿಡಿಯಲು ಅವಕಾಶ ಮಾಡಿಕೊಡುವ ಬದಲು, ಕಡಿಮೆ ಹಣದ ಆಮಿಷಕ್ಕೆ ಬಲಿಯಾಗಿ  ಆಂಧ್ರ ಮೂಲದ ಬಂಡವಾಳಶಾಹಿ ಮೀನುಗಾರರಿಗೆ ಮೀನುಗಾರಿಕೆಯನ್ನು ಹಸ್ತಾಂತರಿಸಿದ್ದಾರೆ.

ಆಂಧ್ರ ಮೂಲದ ಮೀನುಗಾರರು ಮನಸೋ ಇಚ್ಛೆ  ನಿಯಮಗಳನ್ನು ಗಾಳಿಗೆ ತೂರಿ ಮೀನುಗಾರಿಕೆ ಮಾಡ್ತಿದ್ದಾರೆ. ಜಲಾಶಯದಲ್ಲಿ ಮೀನುಗಳ ಸಂತತಿ ಉಳಿಯದಂತೆ ಲೂಟಿ ಹೊಡೆಯುತ್ತಿದ್ದಾರೆ. ಈ ಬಗ್ಗೆ  ತುಂಗಾಭದ್ರಾ ಜಲಾಶಯ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ,  ಈ ಮಾಫಿಯಾದಲ್ಲಿ ಇಲ್ಲಿನ ಅಧಿಕಾರಿಗಳ ಕೈವಾಡವಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಜಲಾಶಯ ಹಿನ್ನೀರಿನಲ್ಲಿ ಮೀನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿದ್ದ ಮೀನುಗಾರರಿಗೆ ಒಂದು ಕೆಜಿ ಮೀನೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮೀನುಗಾರರ ಕುಟುಂಬ ಬೀದಿಗೆ ಬಿದ್ದಿದೆ. ಈ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳನ್ನ ಕೇಳಿದ್ರೆ ಸೂಕ್ತ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಅಧಿಕಾರಿಗಳ ಕಣ್ಮುಂದೆಯೇ ಮೀನು ಮಾಫಿಯಾ ನಡೆಯುತ್ತಿದ್ದರೂ,  ಜಾಣಕುರುಡುತನ ಪ್ರದರ್ಶನ ಮಾಡುತ್ತಿರುವುದು ವಿಪರ್ಯಾಸ. ಇನ್ನಾದರೂ ಫಿಶ್​ ಮಾಫೀಯಾಗೆ ಕಡಿವಾಣ ಹಾಕಬೇಕಿದೆ.

-ಶುಕ್ರಾಜ್ ಕುಮಾರ್, ಕೊಪ್ಪಳ

LEAVE A REPLY

Please enter your comment!
Please enter your name here